ಮುಂಬೈ ಕ್ರಿಕೆಟ್ ಸಂಸ್ಥೆಗೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಭಾರತ ಹಾಗೂ  ವೆಸ್ಟ್ಇಂಡೀಸ್ ನಡುವಿನ 4ನೇ ಏಕದಿನ ಪಂದ್ಯ ಆಯೋಜಿಸಲು ಮುಂದಾದ ಮುಂಬೈ ಕ್ರಿಕೆಟ್ ಸಂಸ್ಥೆಗೆ ಇದೀಗ ಕಾನೂನು ಹೋರಾಟದಲ್ಲೂ ಹಿನ್ನಡೆಯಾಗಿದೆ. 

ಮುಂಬೈ(ಅ.18): ಭಾರತ-ವೆಸ್ಟ್‌ ಇಂಡೀಸ್‌ 4ನೇ ಏಕದಿನ ಪಂದ್ಯದ ಆತಿಥ್ಯ ಕಳೆದುಕೊಂಡು ಮುಖಭಂಗ ಅನುಭವಿಸಿದ್ದ ಮುಂಬೈ ಕ್ರಿಕೆಟ್‌ ಸಂಸ್ಥೆ (ಎಂಸಿಎ)ಗೆ ಕಾನೂನು ಹೋರಾಟದಲ್ಲೂ ಹಿನ್ನಡೆಯಾಗಿದೆ. 

ಪಂದ್ಯವನ್ನು ವಾಂಖೇಡೆಯಿಂದ ಬ್ರೇಬೊರ್ನ್‌ ಕ್ರೀಡಾಂಗಣಕ್ಕೆ ಸ್ಥಳಾಂತರ ಮಾಡಿದ್ದನ್ನು ಪ್ರಶ್ನಿಸಿ ಎಂಸಿಎ, ಬುಧವಾರ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿತ್ತು. ಪಂದ್ಯದ ಟಿಕೆಟ್‌ ಮಾರಟಕ್ಕೆ ತಡೆ ನೀಡಬೇಕು ಎಂದು ಎಂಸಿಎ ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್‌ ತಿರಸ್ಕರಿಸಿದೆ. 

‘ಆತಿಥ್ಯ ಹಕ್ಕು ಪತ್ರಕ್ಕೆ ಆಡಳಿತಗಾರರು ಸಹಿ ಹಾಕಬೇಕಿದೆ. ಆದರೆ ಸದ್ಯ ನಮ್ಮಲ್ಲಿ ಆಡಳಿತಗಾರರಿಲ್ಲ. ಸಣ್ಣ ಕಾರಣಕ್ಕೆ ಪಂದ್ಯವನ್ನು ಬಿಸಿಸಿಐ ಸ್ಥಳಾಂತರಗೊಳಿಸಿದೆ’ ಎಂದು ಎಂಸಿಎ ಪರ ವಕೀಲರು ನ್ಯಾಯಲಯಕ್ಕೆ ತಿಳಿಸಿದರು. ಇದನ್ನು ಒಪ್ಪದ ನ್ಯಾಯಾಲಯ ಅರ್ಜಿ ತಿರಸ್ಕರಿಸಿತು.