ಭಾರತ ನೀಡಿದ್ದ 322 ರನ್’ಗಳ ಸವಾಲಿನ ಗುರಿ ಬೆನ್ನತ್ತಿದ ವಿಂಡೀಸ್ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ತಂಡದ ಮೊತ್ತ 64 ರನ್’ಗಳಾಗುವಷ್ಟರಲ್ಲಿ ಆರಂಭಿಕರಿಬ್ಬರು ಪೆವಿಲಿಯನ್ ಸೇರಿದರು. ಇನ್ನು ಅನುಭವಿ ಬ್ಯಾಟ್ಸ್’ಮನ್ ಮರ್ಲಾನ್ ಸ್ಯಾಮ್ಯುಯಲ್ಸ್ ಆಟ ಕೇವಲ 13 ರನ್’ಗಳಿಗೆ ಸೀಮಿತವಾಯಿತು. ಈ ವೇಳೆ 4ನೇ ವಿಕೆಟ್’ಗೆ ಜತೆಯಾದ ಶೈ ಹೋಪ್- ಹೆಟ್ಮೇಯರ್ ಜೋಡಿ 143 ರನ್’ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು.

ವಿಶಾಖಪಟ್ಟಣಂ[ಅ.24]: ಶೈ ಹೋಪ್ ಅತ್ಯಾಕರ್ಷಕ ಶತಕದ ನೆರವಿನಿಂದ ಭಾರತ-ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯ ರೋಚಕ ಟೈನೊಂದಿಗೆ ಅಂತ್ಯವಾಗಿದೆ. ಇದೀಗ 5 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಕಾಯ್ದುಕೊಂಡಿದೆ.

ಭಾರತ ನೀಡಿದ್ದ 322 ರನ್’ಗಳ ಸವಾಲಿನ ಗುರಿ ಬೆನ್ನತ್ತಿದ ವಿಂಡೀಸ್ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ತಂಡದ ಮೊತ್ತ 64 ರನ್’ಗಳಾಗುವಷ್ಟರಲ್ಲಿ ಆರಂಭಿಕರಿಬ್ಬರು ಪೆವಿಲಿಯನ್ ಸೇರಿದರು. ಇನ್ನು ಅನುಭವಿ ಬ್ಯಾಟ್ಸ್’ಮನ್ ಮರ್ಲಾನ್ ಸ್ಯಾಮ್ಯುಯಲ್ಸ್ ಆಟ ಕೇವಲ 13 ರನ್’ಗಳಿಗೆ ಸೀಮಿತವಾಯಿತು. ಈ ವೇಳೆ 4ನೇ ವಿಕೆಟ್’ಗೆ ಜತೆಯಾದ ಶೈ ಹೋಪ್- ಹೆಟ್ಮೇಯರ್ ಜೋಡಿ 143 ರನ್’ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು. ಮೊದಲ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದ ಹೆಟ್ಮೇಯರ್, ಇಂದಿನ ಪಂದ್ಯದಲ್ಲಿ ಕೇವಲ 6 ರನ್’ಗಳಿಂದ ಶತಕ ವಂಚಿತರಾದರು. ಚೆಹಾಲ್ ಬೌಲಿಂಗ್’ನಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿ ಕೊಹ್ಲಿಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇದಾದ ಬೆನ್ನಲ್ಲೇ ಟೀಂ ಇಂಡಿಯಾ ಕಮ್’ಬ್ಯಾಕ್ ಮಾಡಿತಾದರೂ ಮತ್ತೊಂದು ತುದಿಯಲ್ಲಿ ಶೈ ಹೋಪ್[123*] ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ ವೃತ್ತಿ ಜೀವನದ ಎರಡನೇ ಶತಕ ಸಿಡಿಸಿ ಸಂಭ್ರಮಿಸಿದರು.

ರೋಚಕತೆ ಹೆಚ್ಚಿಸಿದ ಕಡೆಯ ಓವರ್:

ವೆಸ್ಟ್ ಇಂಡೀಸ್ ತಂಡ ಗೆಲ್ಲಲು ಕೊನೆಯ ಓವರ್’ನಲ್ಲಿ 14 ರನ್’ಗಳ ಅವಶ್ಯಕತೆ ಇತ್ತು. ಉಮೇಶ್ ಯಾದವ್ ಮೊದಲ ಎಸೆತದಲ್ಲಿ 1 ರನ್ ನೀಡಿದರೆ, ಎರಡನೇ ಎಸೆತ ಲೆಗ್ ಬೈ ರೂಪದಲ್ಲಿ ವಿಂಡೀಸ್ ಖಾತೆಗೆ 4 ರನ್’ಗಳ ಸೇರ್ಪಡೆಯಾಯಿತು. ಮರು ಎಸೆತದಲ್ಲಿ ನರ್ಸ್ 2 ರನ್ ದೋಚಿದರು. ಕೊನೆಯ 3 ಎಸೆತಗಳಲ್ಲಿ ವಿಂಡೀಸ್ ತಂಡಕ್ಕೆ 7 ರನ್’ಗಳ ಅಗತ್ಯವಿತ್ತು. 4ನೇ ಎಸೆತದಲ್ಲಿ ಪ್ಯಾಡಲ್ ಸ್ಕೂಪ್ ಮಾಡಲು ಹೋಗಿ ನರ್ಸ್ ರಾಯುಡುಗೆ ಕ್ಯಾಚಿತ್ತರು. 5ನೇ ಎಸೆತದಲ್ಲಿ 2 ಹಾಗೂ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವುದರೊಂದಿಗೆ ಪಂದ್ಯ ರೋಚಕ ಡ್ರಾ ಆಗುವಂತೆ ಮಾಡುವಲ್ಲಿ ಹೋಪ್ ಯಶಸ್ವಿಯಾದರು.

ಭಾರತ ಪರ ಕುಲ್ದೀಪ್ 3, ಚೆಹಾಲ್, ಶಮಿ ಹಾಗೂ ಉಮೇಶ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ನಾಯಕ ವಿರಾಟ್ ಕೊಹ್ಲಿಯ ದಾಖಲೆಯ ಶತಕ ಹಾಗೂ ಅಂಬಟಿ ರಾಯುಡು ಸಮಯೋಚಿತ ಅರ್ಧಶತಕಗಳ ನೆರವಿನಿಂದ 6 ವಿಕೆಟ್ ಕಳೆದುಕೊಂಡು 321 ರನ್ ಗಳಿಸಿತ್ತು.

ಸಂಕ್ಷಿಪ್ತ ಸ್ಕೋರ್:
ಭಾರತ: 321/6
ವಿರಾಟ್ ಕೊಹ್ಲಿ: 157*
ಆ್ಯಶ್ಲೆ ನರ್ಸ್: 46/2

ವೆಸ್ಟ್ ಇಂಡೀಸ್: 321/7
ಶೈ ಹೋಪ್: 123*
ಕುಲ್ದೀಪ್: 67/3