ನ.4ರಂದು ಭಾರತ-ವಿಂಡೀಸ್‌ ನಡುವಿನ ಟಿ20 ಪಂದ್ಯಕ್ಕೆ ಇಲ್ಲಿನ ಈಡನ್‌ ಗಾರ್ಡನ್ಸ್‌ ಆತಿಥ್ಯ ವಹಿಸಬೇಕಿದೆ.

ಕೋಲ್ಕತಾ(ಅ.04]: ಬಿಸಿಸಿಐನ ನೂತನ ಟಿಕೆಟ್‌ ಹಂಚಿಕೆ ನಿಯಮ ರಾಜ್ಯ ಕ್ರಿಕೆಟ್‌ ಸಂಸ್ಥೆಗಳನ್ನು ಭಾರೀ ಇಕ್ಕಟ್ಟಿಗೆ ಸಿಲುಕಿಸಿದೆ. ಮಧ್ಯಪ್ರದೇಶ ಸಂಸ್ಥೆ ಪಂದ್ಯ ಆಯೋಜನೆಯಿಂದ ಹಿಂದೆ ಸರಿದ ಬೆನ್ನಲ್ಲೇ ಬಂಗಾಳ ಕ್ರಿಕೆಟ್‌ ಸಂಸ್ಥೆ ಸಹ ಪಾಸ್‌ ವಿವಾದದೊಳಗೆ ಪ್ರವೇಶಿಸಿದೆ. 

ನ.4ರಂದು ಭಾರತ-ವಿಂಡೀಸ್‌ ನಡುವಿನ ಟಿ20 ಪಂದ್ಯಕ್ಕೆ ಇಲ್ಲಿನ ಈಡನ್‌ ಗಾರ್ಡನ್ಸ್‌ ಆತಿಥ್ಯ ವಹಿಸಬೇಕಿದೆ. ‘ಕ್ರೀಡಾಂಗಣದ ಆಸನ ಸಾಮರ್ಥ್ಯ 66000 ಇದರಲ್ಲಿ 30000 ಟಿಕೆಟ್‌ಗಳನ್ನು ಪಾಸ್‌ಗಳ ರೂಪದಲ್ಲಿ ಹಂಚಬೇಕಿದೆ.

ಆದರೆ ಬಿಸಿಸಿಐನ ನೂತನ ನಿಯಮದ ಪ್ರಕಾರ, ಬಂಗಾಳ ಕ್ರಿಕೆಟ್‌ ಸಂಸ್ಥೆಗೆ ಸಿಗುವುದು ಕೇವಲ 6600 ಟಿಕೆಟ್‌ಗಳು. ಇದರಲ್ಲಿ 3300 ಟಿಕೆಟ್‌ಗಳನ್ನು ಬಿಸಿಸಿಐಗೆ ಮೀಸಲಿಡಬೇಕು. ಹೀಗಾದಲ್ಲಿ ಪಂದ್ಯ ನಡೆಸುವುದು ಅಸಾಧ್ಯ. ಸ್ಥಳೀಯ ಪೊಲೀಸ್‌ ಹಾಗೂ ಇನ್ನಿತರ ಇಲಾಖೆಗಳ ಬೆಂಬಲವಿಲ್ಲದೆ ಪಂದ್ಯ ನಡೆಸುವುದು ಅಸಾಧ್ಯ. ಅವರಿಗೆ ಪಾಸ್‌ಗಳನ್ನು ನೀಡಲೇಬೇಕು’ ಎಂದು ಸಂಸ್ಥೆಯ ಅಧ್ಯಕ್ಷ ಗಂಗೂಲಿ ಹೇಳಿದ್ದಾರೆ.