ನವದೆಹಲಿ[ಫೆ.22]: ಪುಲ್ವಾಮ ಉಗ್ರರ ದಾಳಿ ಹಿನ್ನೆಲೆಯಲ್ಲಿ ಪಾಕಿಸ್ತಾನವನ್ನು ಮುಂಬರುವ ಐಸಿಸಿ ಏಕದಿನ ವಿಶ್ವಕಪ್‌ನಿಂದ ಹೊರಗಿಡುವ ವಿಚಾರದಲ್ಲಿ ಬಿಸಿಸಿಐನಲ್ಲಿ ಆಂತರಿಕ ಗೊಂದಲ ಶುರುವಾಗಿದೆ. 

ಕೆಲ ಮಾಧ್ಯಮಗಳಲ್ಲಿ ಆಗಿರುವ ವರದಿಗಳ ಪ್ರಕಾರ, ಸುಪ್ರೀಂ ಕೋರ್ಟ್‌ ನೇಮಿತ ಬಿಸಿಸಿಐ ಆಡಳಿತ ಸಮಿತಿ ಮುಖ್ಯಸ್ಥ ವಿನೋದ್‌ ರಾಯ್‌ ಬಿಸಿಸಿಐ ಮುಖ್ಯ ಕಾರ್ಯನಿವಾರ್ಹಕ ಅಧಿಕಾರಿ (ಸಿಇಒ) ರಾಹುಲ್‌ ಜೋಹ್ರಿಗೆ ಐಸಿಸಿ ಅಧ್ಯಕ್ಷ ಶಶಾಂಕ್‌ ಮನೋಹರ್‌ಗೆ ಉದ್ದೇಶಿಸಿ ಪತ್ರವೊಂದನ್ನು ಸಿದ್ಧಪಡಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಪತ್ರದಲ್ಲಿ ಪಾಕಿಸ್ತಾನವನ್ನು ವಿಶ್ವಕಪ್‌ನಿಂದ ದೂರವಿಡುವ ಬಗ್ಗೆ ಪ್ರಸ್ತಾಪಿಸಲಾಗುವುದು ಎಂದು ಹೇಳಲಾಗಿದೆ. ಆದರೆ ಇಂತಹ ಯಾವುದೇ ಪತ್ರ ವ್ಯವಹಾರ ನಡೆಸಲು ನಿರ್ಧರಿಸಲಾಗಿಲ್ಲ ಎಂದು ಬಿಸಿಸಿಐ ಮೂಲಗಳು ಸುದ್ದಿಸಂಸ್ಥೆ ‘ಪಿಟಿಐ’ಗೆ ತಿಳಿಸಿವೆ.

ಪಾಕ್ ಜೊತೆ ಕ್ರಿಕೆಟ್ ಮಾತ್ರವಲ್ಲ ಯಾವುದೇ ಕ್ರೀಡೆ ಬೇಡ: ಗಂಗೂಲಿ!

‘ಸಾಂವಿಧಾನಿಕ ಇಲ್ಲವೇ ಒಪ್ಪಂದದ ಪ್ರಕಾರ ಪಾಕಿಸ್ತಾನವನ್ನು ವಿಶ್ವಕಪ್‌ನಿಂದ ಹೊರಗಿಡಲು ಸಾಧ್ಯವೇ ಇಲ್ಲ. ಐಸಿಸಿ ಸಂವಿಧಾನದ ಪ್ರಕಾರ ಸದಸ್ಯ ರಾಷ್ಟ್ರಗಳಿಗೆ ಐಸಿಸಿ ಟೂರ್ನಿಗಳಲ್ಲಿ ಪಾಲ್ಗೊಳ್ಳುವ ಹಕ್ಕಿದೆ. ಆದರೆ ತಂಡ ಟೂರ್ನಿಗೆ ಅರ್ಹತೆ ಗಿಟ್ಟಿಸಿರಬೇಕು. ಪಾಕಿಸ್ತಾನ ವಿಶ್ವಕಪ್‌ನಲ್ಲಿ ಆಡಲು ಅರ್ಹತೆ ಹೊಂದಿದೆ’ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬಿಸಿಸಿಐ ಪ್ರಾಬಲ್ಯ ಅಂತ್ಯ?: ಒಂದೊಮ್ಮೆ ಬಿಸಿಸಿಐ, ಐಸಿಸಿಗೆ ಪತ್ರ ಬರೆದರೂ ಮನ್ನಣೆ ದೊರೆಯುವುದಿಲ್ಲ ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ. ‘ಪಾಕಿಸ್ತಾನವನ್ನು ವಿಶ್ವಕಪ್‌ನಿಂದ ಹೊರಗಿಡುವಂತೆ ಐಸಿಸಿಗೆ ಪತ್ರ ಬರೆದರೆ, ನಾವು ಮೊದಲು ಏಪ್ರಿಲ್‌ನಲ್ಲಿ ನಡೆಯಲಿರುವ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಒಮ್ಮತವನ್ನು ಪಡೆಯಬೇಕು. ಆದರೆ ಐಸಿಸಿಯಲ್ಲಿ ನಮಗೆ ಈ ಮೊದಲಿದ್ದ ಬಹುಮತ ಇಲ್ಲ. ಒಂದೊಮ್ಮೆ ಬಹುಮತ ಪರೀಕ್ಷೆಗೆ ಒಳಪಟ್ಟರೆ ನಮಗೆ ಸೋಲು ಖಚಿತ. ಇಷ್ಟು ಮಾತ್ರವಲ್ಲ, 2021ರ ಚಾಂಪಿಯನ್ಸ್‌ ಟ್ರೋಫಿ ಹಾಗೂ 2023ರ ವಿಶ್ವಕಪ್‌ ಆತಿಥ್ಯದ ಹಕ್ಕು ಸಹ ನಮ್ಮ ಕೈತಪ್ಪುವ ಸಾಧ್ಯತೆ ಎದುರಾಗಲಿದೆ’ ಎಂದು ಬಿಸಿಸಿಐ ಅಧಿಕಾರಿ ಆತಂಕ ವ್ಯಕ್ತಪಡಿಸಿದ್ದಾರೆ.

ಇಂಡೋ-ಪಾಕ್ ವಿಶ್ವಕಪ್ ಪಂದ್ಯ: ಬೆಚ್ಚಿ ಬಿದ್ದ ICC

ಇಂದು ಸಿಒಎ ಸಭೆ: ಮುಂದಿನ ನಡೆ ಬಗ್ಗೆ ನಿರ್ಧರಿಸಲು ಕಾನೂನು ಸಲಹೆ ಅಗತ್ಯವಿದ್ದು, ಬಿಸಿಸಿಐ ಆಡಳಿತ ಸಮಿತಿಯ ಸಭೆ ಶುಕ್ರವಾರ ನವದೆಹಲಿಯಲ್ಲಿ ನಡೆಯಲಿದೆ. ಆದರೆ ಆಡಳಿತ ಸಮಿತಿ ಮುಖ್ಯಸ್ಥ ವಿನೋದ್‌ ರಾಯ್‌ ಹಾಗೂ ಸದಸ್ಯೆ ಡಯಾನ ಎಡುಲ್ಜಿ ನಡುವೆ ಮತ್ತೊಮ್ಮೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಪಾಕಿಸ್ತಾನವನ್ನು ವಿಶ್ವಕಪ್‌ನಿಂದ ಹೊರಗಿಡುವಂತೆ ಐಸಿಸಿಗೆ ಪತ್ರ ಬರೆಯುವುದನ್ನು ಎಡುಲ್ಜಿ ವಿರೋಧಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಆಡಳಿತ ಸಮಿತಿ ನಿರ್ಧಾರ ಕೈಗೊಳ್ಳುವ ಮೊದಲು ಕ್ರೀಡಾ, ವಿದೇಶಾಂಗ ಹಾಗೂ ಗೃಹ ಸಚಿವಾಲಯಗಳ ಸಲಹೆ ಪಡೆಯಬೇಕಿದೆ. ಮೇ 30ರಿಂದ ಇಂಗ್ಲೆಂಡ್‌ನಲ್ಲಿ ಐಸಿಸಿ ಏಕದಿನ ವಿಶ್ವಕಪ್‌ ನಡೆಯಲಿದ್ದು, ಜೂನ್‌ 16ಕ್ಕೆ ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫರ್ಡ್‌ ಮೈದಾನದಲ್ಲಿ ಭಾರತ-ಪಾಕಿಸ್ತಾನ ಪಂದ್ಯ ನಿಗದಿಯಾಗಿದೆ.

ಹಿರಿಯ ಆಟಗಾರ ಹರ್ಭಜನ್‌ ಸಿಂಗ್‌, ಮಾಜಿ ನಾಯಕ ಸೌರವ್‌ ಗಂಗೂಲಿ ಸೇರಿದಂತೆ ಇನ್ನೂ ಅನೇಕರು ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಬಹಿಷ್ಕಾರ ಹಾಕಲು ಆಗ್ರಹಿಸಿದ್ದಾರೆ. ಹಾಲಿ ಭಾರತ ತಂಡದ ಆಟಗಾರರಾದ ಮೊಹಮದ್‌ ಶಮಿ ಹಾಗೂ ಯಜುವೇಂದ್ರ ಚಹಲ್‌ ಸಹ ಪುಲ್ವಾಮ ಉಗ್ರರ ದಾಳಿಯನ್ನು ಖಂಡಿಸಿದ್ದು, ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.