ನವದೆಹಲಿ(ಜು.30): ಕ್ರಿಕೆಟ್‌ ಆಟದ ಅತ್ಯಂತ ಹಳೆಯ ಮಾದರಿ ಟೆಸ್ಟ್‌ ಕ್ರಿಕೆಟನ್ನು ಮತ್ತಷ್ಟುಜನಪ್ರಿಯಗೊಳಿಸುವ ಹಾಗೂ ದ್ವಿಪಕ್ಷೀಯ ಸರಣಿಗಳಿಗೆ ಹೆಚ್ಚಿನ ಮಹತ್ವ ನೀಡುವ ಸಲುವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಸೋಮವಾರ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌(ಡಬ್ಲ್ಯುಟಿಸಿ) ಅನ್ನು ಅಧಿಕೃತವಾಗಿ ಉದ್ಘಾಟಿಸಿದೆ. ಏಕದಿನ, ಟಿ20 ರೀತಿ ಈ ಚಾಂಪಿಯನ್‌ಶಿಪ್‌ ಟೆಸ್ಟ್‌ ‘ವಿಶ್ವಕಪ್‌’ ಎಂದೇ ಕರೆಯಲ್ಪಡುತ್ತಿದೆ. ಇದೇ ಮೊದಲ ಬಾರಿಗೆ ಐಸಿಸಿ ಈ ರೀತಿಯ ಪ್ರಯೋಗಕ್ಕೆ ಕೈಹಾಕಿದೆ.

ಇದನ್ನೂ ಓದಿ: ಕೊಹ್ಲಿ-ರೋಹಿತ್ ಕೋಲ್ಡ್ ವಾರ್; ಕೊನೆಗೂ ಸ್ಪಷ್ಟನೆ ನೀಡಿದ ನಾಯಕ!

ಆ.1ರಂದು ಆರಂಭಗೊಳ್ಳಲಿರುವ ಇಂಗ್ಲೆಂಡ್‌ ಹಾಗೂ ಆಸ್ಪ್ರೇಲಿಯಾ ನಡುವಿನ ಪ್ರತಿಷ್ಠಿತ ಆ್ಯಷಸ್‌ ಸರಣಿಯೊಂದಿಗೆ ಟೆಸ್ಟ್‌ ಚಾಂಪಿಯನ್‌ಶಿಪ್‌ಗೆ ಚಾಲನೆ ದೊರೆಯಲಿದೆ. ಮಾ.31, 2019ರಂದು ಐಸಿಸಿ ಟೆಸ್ಟ್‌ ತಂಡಗಳ ರಾರ‍ಯಂಕಿಂಗ್‌ ಪಟ್ಟಿಯಲ್ಲಿ ಅಗ್ರ 9 ಸ್ಥಾನಗಳನ್ನು ಪಡೆದಿದ್ದ ತಂಡಗಳಾದ ಭಾರತ, ಆಸ್ಪ್ರೇಲಿಯಾ, ಇಂಗ್ಲೆಂಡ್‌, ನ್ಯೂಜಿಲೆಂಡ್‌, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ವೆಸ್ಟ್‌ಇಂಡೀಸ್‌, ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಚಾಂಪಿಯನ್‌ ಪಟ್ಟಕ್ಕೆ ಸೆಣಸಲಿವೆ.  ಪ್ರತಿ ತಂಡಕ್ಕೆ 6 ಸರಣಿ, 2021ರ ಜೂನ್‌ನಲ್ಲಿ ಕ್ರಿಕೆಟ್‌ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಫೈನಲ್‌ ಪಂದ್ಯ ನಡೆಯಲಿದೆ.

ಇದನ್ನೂ ಓದಿ: ಬೌಂಡರಿ ಕೌಂಟ್ ಕುರಿತು ಚರ್ಚಿಸಲು ಮುಂದಾದ ಕುಂಬ್ಳೆ ನೇತೃತ್ವದ ಐಸಿಸಿ ಸಮಿತಿ

ಈ 9 ತಂಡಗಳು ಆಡುವ ಪಂದ್ಯಗಳು ಮಾತ್ರ ಟೆಸ್ಟ್‌ ಚಾಂಪಿಯನ್‌ ವ್ಯಾಪ್ತಿಗೆ ಒಳಪಡಲಿದೆ. ಆಷ್ಘಾನಿಸ್ತಾನ, ಐರ್ಲೆಂಡ್‌ ಹಾಗೂ ಜಿಂಬಾಬ್ವೆ ವಿರುದ್ಧ ಯಾವುದೇ ತಂಡ ಪಂದ್ಯವಾಡಿದರೆ ಅದು ಸಾಮಾನ್ಯ ದ್ವಿಪಕ್ಷೀಯ ಸರಣಿ ಎಂದಷ್ಟೇ ಪರಿಗಣಿಸಲಾಗುತ್ತದೆ.

ಚಾಂಪಿಯನ್‌ಶಿಪ್‌ ಮಾದರಿ ಹೇಗೆ?
9 ತಂಡಗಳು 2 ವರ್ಷ ಕಾಲ ನಡೆಯುವ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು 27 ಸರಣಿಗಳನ್ನು ಆಡಲಿವೆ. ಲೀಗ್‌ ಹಂತದಲ್ಲಿ 71 ಹಾಗೂ 1 ಫೈನಲ್‌ ಸೇರಿ ಒಟ್ಟು 72 ಪಂದ್ಯಗಳು ನಡೆಯಲಿವೆ.

ಪ್ರತಿ ತಂಡ ಇನ್ನುಳಿದ 8 ತಂಡಗಳ ಪೈಕಿ 6 ತಂಡಗಳ ವಿರುದ್ಧ ಸರಣಿಗಳನ್ನು ಆಡಲಿವೆ. ಪ್ರತಿ ಸರಣಿ 2ರಿಂದ 5 ಪಂದ್ಯಗಳನ್ನು ಹೊಂದಿರಲಿದೆ. ಎಲ್ಲಾ ತಂಡಗಳು ನಿರ್ದಿಷ್ಟಸಂಖ್ಯೆಯ ಟೆಸ್ಟ್‌ಗಳನ್ನು ಆಡದಿದ್ದರೂ, ಪ್ರತಿ ತಂಡ 6 ಸರಣಿಗಳನ್ನು ಆಡಲಿದೆ. ಪ್ರತಿ ತಂಡ ತವರಿನಲ್ಲಿ 3 ಹಾಗೂ ತವರಿನಾಚೆ 3 ಸರಣಿಗಳನ್ನು ಆಡಲಿದೆ. ಸರಣಿಯೊಂದಕ್ಕೆ ಗರಿಷ್ಠ 120 ಅಂಕಗಳನ್ನು ನಿಗದಿಪಡಿಸಲಾಗಿದೆ. 2 ಪಂದ್ಯಗಳ ಸರಣಿಯ ಪ್ರತಿ ಪಂದ್ಯಕ್ಕೆ 60 ಅಂಕ, 3 ಪಂದ್ಯಗಳ ಸರಣಿಯ ಪ್ರತಿ ಪಂದ್ಯಕ್ಕೆ 40, 4 ಪಂದ್ಯಗಳ ಸರಣಿಯ ಪ್ರತಿ ಪಂದ್ಯಕ್ಕೆ 30, 5 ಪಂದ್ಯಗಳ ಸರಣಿಯ ಪ್ರತಿ ಪಂದ್ಯಕ್ಕೆ 24 ಅಂಕ ನಿಗದಿ ಮಾಡಲಾಗಿದೆ.

ಅಗ್ರ 2 ತಂಡಗಳು ಫೈನಲ್‌ಗೆ
6 ಸರಣಿಗಳಿಂದ ಅತಿಹೆಚ್ಚು ಅಂಕ ಗಳಿಸುವ ಅಗ್ರ 2 ತಂಡಗಳು ಫೈನಲ್‌ ಪ್ರವೇಶಿಸಲಿವೆ. 2021ರ ಜೂನ್‌ನಲ್ಲಿ ಲಂಡನ್‌ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಫೈನಲ್‌ ಪಂದ್ಯ ನಡೆಸಲು ಐಸಿಸಿ ನಿರ್ಧರಿಸಿದೆ. ಆ ಪಂದ್ಯದಲ್ಲಿ ಗೆಲ್ಲುವ ತಂಡ ಚೊಚ್ಚಲ ವಿಶ್ವ ಟೆಸ್ಟ್‌ ಚಾಂಪಿಯನ್‌ ಆಗಿ ಹೊರಹೊಮ್ಮಲಿದೆ.

ಅಂಕಗಳ ಹಂಚಿಕೆ ವ್ಯವಸ್ಥೆ (ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌)

ಪ್ರತಿ ಟೆಸ್ಟ್‌ ಪಂದ್ಯಕ್ಕೆ ಅಂಕ

ಒಟ್ಟು ಟೆಸ್ಟ್‌     ಗೆಲುವು ಡ್ರಾ ಟೈ ಸೋಲು
02 60 20 30 00
03 40 13.3 20 00
04 30 10 15 00
05 24 08 12 00

* ಸರಣಿಯಲ್ಲಿ ಗಳಿಸಬಹುದಾದ ಗರಿಷ್ಠ ಅಂಕ 120

5 ದಿನಗಳ ಪಂದ್ಯ

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಎಲ್ಲಾ ಪಂದ್ಯಗಳು 5 ದಿನಗಳ ಪಂದ್ಯಗಳಾಗಿದ್ದು, ದ್ವಿಪಕ್ಷೀಯ ಸರಣಿಯನ್ನು ಆಯೋಜಿಸುವ ಕ್ರಿಕೆಟ್‌ ಮಂಡಳಿಗಳ ನಡುವೆ ಒಪ್ಪಂದವಾದರೆ ಹಗಲು-ರಾತ್ರಿ ಪಂದ್ಯವನ್ನು ಆಯೋಜಿಸಬಹುದಾಗಿದೆ. ಸರಣಿಗೆ ಆತಿಥ್ಯ ವಹಿಸುವ ಕ್ರಿಕೆಟ್‌ ಮಂಡಳಿಯೇ ಸ್ಥಳ, ಪ್ರಸಾರ ಹಾಗೂ ಟಿಕೆಟ್‌ ವ್ಯವಸ್ಥೆಯನ್ನು ನೋಡಿಕೊಳ್ಳಲಿದೆ. ಪಂದ್ಯಗಳಿಗೆ ಅಂಪೈರ್‌, ರೆಫ್ರಿ ಹಾಗೂ ಅಧಿಕಾರಿಗಳನ್ನು ಐಸಿಸಿ ಒದಗಿಸಲಿದ್ದು, ಟೆಸ್ಟ್‌ ಚಾಂಪಿಯನ್‌ಶಿಪ್‌ನ ನಿಯಮಗಳನ್ವಯವೇ ಪಂದ್ಯಗಳು ನಡೆಯುತ್ತಿವೆಯೇ ಎನ್ನುವುದನ್ನು ಗಮನಿಸಲಿದೆ. ಫೈನಲ್‌ ಪಂದ್ಯದ ಆಯೋಜನೆಯ ಹೊಣೆಯನ್ನು ಐಸಿಸಿ ಹೊರಲಿದೆ.

ಇದೇ ಮೊದಲ ಬಾರಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲೂ ಸಂಖ್ಯೆಗಳುಳ್ಳ ಜೆರ್ಸಿಯನ್ನು ಆಟಗಾರರು ತೊಡಲಿದ್ದು, ಟೆಸ್ಟ್‌ ಚಾಂಪಿಯನ್‌ಶಿಪ್‌ನಿಂದ ಈ ನಿಯಮ ಜಾರಿಗೆ ಬರಲಿದೆ.

ಟೀಂ ಇಂಡಿಯಾದ ವೇಳಾಪಟ್ಟಿ
ಆಗಸ್ಟ್‌ 2019
ವಿಂಡೀಸ್‌ ವಿರುದ್ಧ 2 ಟೆಸ್ಟ್‌ (ತವರಿನಾಚೆ)

ಅಕ್ಟೋಬರ್‌ 2019
ದ.ಆಫ್ರಿಕಾ ವಿರುದ್ಧ 3 ಟೆಸ್ಟ್‌(ತವರಿನಲ್ಲಿ)

ನವೆಂಬರ್‌ 2019
ಬಾಂಗ್ಲಾದೇಶ ವಿರುದ್ಧ 2 ಟೆಸ್ಟ್‌ (ತವರಿನಲ್ಲಿ)

ಫೆಬ್ರವರಿ 2020
ನ್ಯೂಜಿಲೆಂಡ್‌ ವಿರುದ್ಧ 2 ಟೆಸ್ಟ್‌ (ತವರಿನಾಚೆ)

ಡಿಸೆಂಬರ್‌-ಜನವರಿ
ಆಸ್ಪ್ರೇಲಿಯಾ ವಿರುದ್ಧ 4 ಟೆಸ್ಟ್‌ (ತವರಿನಾಚೆ)

2020-2021
ಫೆಬ್ರವರಿ-ಮಾರ್ಚ್
ಇಂಗ್ಲೆಂಡ್‌ ವಿರುದ್ಧ 5 ಟೆಸ್ಟ್‌ (ತವರಿನಲ್ಲಿ)

ಸರಣಿ ವಿಶೇಷತೆ:
06 ಸರಣಿ
ಪ್ರತಿ ತಂಡ ಒಟ್ಟು 6 ಸರಣಿಗಳನ್ನು ಆಡಲಿದೆ.

03 ಸರಣಿ
ತಿ ತಂಡ ತವರಿನಲ್ಲಿ 3, ತವರಿನಾಚೆ 3 ಸರಣಿಗಳನ್ನು ಆಡಲಿದೆ.

19 ಟೆಸ್ಟ್‌
ಭಾರತ ತಂಡ 6 ಸರಣಿಗಳಲ್ಲಿ ಒಟ್ಟು 19 ಟೆಸ್ಟ್‌ಗಳನ್ನು ಆಡಲಿದೆ.

72 ಟೆಸ್ಟ್‌
2019-21ರ ಅವಧಿಯ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ ಸೇರಿ 72 ಪಂದ್ಯಗಳು ನಡೆಯಲಿವೆ.

27 ಸರಣಿ
2019-21ರ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು 27 ಟೆಸ್ಟ್‌ ಸರಣಿಗಳು ನಡೆಯಲಿವೆ.