ದುಬೈ(ಏ.25): 2019ರ ಐಸಿಸಿ ಏಕದಿನ ವಿಶ್ವಕಪ್‌ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡ ತನ್ನ ಮೊದಲ ಪಂದ್ಯ ವನ್ನು ಜೂನ್ 5ರಂದು ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. ಈ ಮೊದಲು ಪ್ರಕಟಗೊಂಡಿದ್ದ ವೇಳಾಪಟ್ಟಿ ಪ್ರಕಾರ ಜೂನ್ 2ಕ್ಕೆ ಭಾರತದ ಮೊದಲ ಪಂದ್ಯ ನಿಗದಿಯಾಗಿತ್ತು. ಇಂಗ್ಲೆಂಡ್‌'ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಮೇ 30ರಿಂದ ಆರಂಭಗೊಳ್ಳಲಿದ್ದು ಜುಲೈ 14ರವರೆಗೂ ನಡೆಯಲಿದೆ. ಐಸಿಸಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳ ಸಭೆಯಲ್ಲಿ ದಿನಾಂಕ ಬದಲಿಸುವ ನಿರ್ಧಾರ ಕೈಗೊಳ್ಳಲಾಯಿತು.

ಕಾರಣವೇನು?: ಲೋಧಾ ಸಮಿತಿ ಶಿಫಾರಸಿನ ಪ್ರಕಾರ, ಐಪಿಎಲ್ ಫೈನಲ್'ಗೂ ಭಾರತ ತಂಡದ ಅಂತಾರಾಷ್ಟ್ರೀಯ ಪಂದ್ಯಕ್ಕೂ ಕನಿಷ್ಠ 15 ದಿನಗಳ ಅಂತರವಿರಬೇಕು. 12ನೇ ಆವೃತ್ತಿಯ ಐಪಿಎಲ್ ಮಾರ್ಚ್ 29ಕ್ಕೆ ಆರಂಭಗೊಳ್ಳಲಿದ್ದು ಮೇ 19ಕ್ಕೆ ಮುಕ್ತಾಯಗೊಳ್ಳಲಿದೆ. ಹೀಗಾಗಿ ಭಾರತ ತನ್ನ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಜೂನ್ 5ಕ್ಕೂ ಮುನ್ನ ಆಡಲು ಸಾಧ್ಯವಿಲ್ಲ.

ಪಾಕಿಸ್ತಾನ ವಿರುದ್ಧ  ಜೂನ್ 16ಕ್ಕೆ ಪಂದ್ಯ:

ಇತ್ತೀಚಿನ ಕೆಲ ವರ್ಷಗಳಲ್ಲಿ ಐಸಿಸಿ ಪಂದ್ಯಾವಳಿಗಳು ಭಾರತ-ಪಾಕಿಸ್ತಾನ ಪಂದ್ಯದೊಂದಿಗೆ ಆರಂಭಗೊಳ್ಳುತ್ತಿತ್ತು. 2015ರ ಏಕದಿನ ವಿಶ್ವಕಪ್, 2017ರ ಚಾಂಪಿಯನ್ಸ್ ಟ್ರೋಫಿಗೆ ಭಾರತ-ಪಾಕ್ ಮುಖಾಮುಖಿ ಅದ್ಧೂರಿ ಆರಂಭ ಒದಗಿಸಿತ್ತು. ಆದರೆ ಈ ಬಾರಿ ತಂಡಗಳು ಮೊದಲ ಪಂದ್ಯದಲ್ಲಿ ಎದುರಾಗುತ್ತಿಲ್ಲ. 2019ರ ವಿಶ್ವಕಪ್‌'ನಲ್ಲಿ ಒಟ್ಟು 10 ತಂಡಗಳು ಪಾಲ್ಗೊಳ್ಳಲಿದ್ದು ರೌಂಡ್ ರಾಬಿನ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿದೆ. ಬದ್ಧವೈರಿಗಳಾದ ಭಾರತ-ಪಾಕಿಸ್ತಾನ ಜೂನ್ 16ರಂದು ಮ್ಯಾಂಚೆಸ್ಟರ್ ನಲ್ಲಿ ಸೆಣಸಲಿವೆ. ವಿಶ್ವಕಪ್‌'ನಲ್ಲಿ ಪಾಕ್ ವಿರುದ್ಧ ಸೋಲದ ಭಾರತ, ತನ್ನ ದಾಖಲೆ ಉಳಿಸಿಕೊಳ್ಳಲು ಹೋರಾಡಲಿದೆ.