ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಅರುಣ್ ಕುಮಾರ್ ಅವರನ್ನು ಸಂಪರ್ಕಿಸಿದ್ದು, ಈಗಾಗಲೇ ಒಂದು ಸುತ್ತಿನ ಮಾತುಕತೆ ಸಹ ನಡೆಸಿದೆ. ಒಂದೊಮ್ಮೆ ಮಾತುಕತೆ ಯಶಸ್ವಿಯಾದರೆ, ಅರುಣ್ ಕುಮಾರ್ ಶೀಘ್ರದಲ್ಲೇ ಹೈದರಾಬಾದ್ ತಂಡವನ್ನು ಕೂಡಿಕೊಳ್ಳಲಿದ್ದಾರೆ.
ಬೆಂಗಳೂರು(ಆ.23): ಕರ್ನಾಟಕ ತಂಡದ ಮಾಜಿ ಬ್ಯಾಟ್ಸ್'ಮನ್, ಯಶಸ್ವಿ ಕೋಚ್ ಜೆ.ಅರುಣ್ ಕುಮಾರ್ 2017-18ರ ದೇಸಿ ಋತುವಿನಲ್ಲಿ ಹೈದರಾಬಾದ್ ತಂಡದ ಮಾರ್ಗದರ್ಶಕರಾಗಿ ನೇಮಕಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಈ ಸಂಬಂಧ ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಅರುಣ್ ಕುಮಾರ್ ಅವರನ್ನು ಸಂಪರ್ಕಿಸಿದ್ದು, ಈಗಾಗಲೇ ಒಂದು ಸುತ್ತಿನ ಮಾತುಕತೆ ಸಹ ನಡೆಸಿದೆ. ಒಂದೊಮ್ಮೆ ಮಾತುಕತೆ ಯಶಸ್ವಿಯಾದರೆ, ಅರುಣ್ ಕುಮಾರ್ ಶೀಘ್ರದಲ್ಲೇ ಹೈದರಾಬಾದ್ ತಂಡವನ್ನು ಕೂಡಿಕೊಳ್ಳಲಿದ್ದಾರೆ.
ಈ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ‘ಹೈದ್ರಾಬಾದ್ ಕ್ರಿಕೆಟ್ ಸಂಸ್ಥೆ ಸಂಪರ್ಕ ಮಾಡಿರುವುದು ನಿಜ. ಆದರೆ, ನಾನು ಇನ್ನು ಸಮ್ಮತಿ ಸೂಚಿಸಿಲ್ಲ. ಈ ಕುರಿತು ಮಾತುಕತೆ ನಡೆಯುತ್ತಿದೆ. ಶೀಘ್ರದಲ್ಲೇ ಹೈದರಾಬಾದ್'ಗೆ ತೆರಳಿ, ನೇರವಾಗಿ ಮಾತುಕತೆ ನಡೆಸಿದ ಬಳಿಕವಷ್ಟೇ ಈ ಕುರಿತು ನಿರ್ಧಾರ ಕೈಗೊಳ್ಳಲಿದ್ದೇನೆ’ ಎಂದರು.
ಭರತ್ ಅರುಣ್ ಭಾರತ ತಂಡದ ಬೌಲಿಂಗ್ ಕೋಚ್ ಆಗಿ ನೇಮಕಗೊಂಡ ಬಳಿಕ ಹೈದರಾಬಾದ್ ತಂಡದ ಕೋಚ್ ಸ್ಥಾನ ಖಾಲಿಯಾಗಿತ್ತು. ಅವರ ಸ್ಥಾನವನ್ನು ಅರುಣ್ ಸಮರ್ಥವಾಗಿ ತುಂಬಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದು ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಶೇಷ ನಾರಾಯಣ ತಿಳಿಸಿದ್ದಾರೆ.
ಅರುಣ್ ಕುಮಾರ್ ಮಾರ್ಗದರ್ಶನದಲ್ಲಿ ಕರ್ನಾಟಕ ತಂಡ ರಣಜಿ ಟ್ರೋಫಿ, ವಿಜಯ್ ಹಜಾರೆ ಹಾಗೂ ಇರಾನಿ ಟ್ರೋಫಿಯನ್ನು ಗೆದ್ದುಕೊಂಡಿತ್ತು. 2017ರ ಐಪಿಎಲ್'ನಲ್ಲಿ ಅರುಣ್, ಕಿಂಗ್ಸ್ ಇಲೆವೆನ್ ತಂಡದ ಸಹಾಯಕ ಕೋಚ್ ಆಗಿ ಸಹ ಕಾರ್ಯನಿರ್ವಹಿಸಿದ್ದರು. ಒಂದೊಮ್ಮೆ ಅರುಣ್ ಒಪ್ಪಂದಕ್ಕೆ ಸಹಿ ಹಾಕಿದರೆ, ಹೈದರಾಬಾದ್ ತಂಡದ ಕೋಚ್ ಆಗಲಿರುವ ಕರ್ನಾಟಕದ ಎರಡನೇ ಮಾಜಿ ಆಟಗಾರ ಎನಿಸಿಕೊಳ್ಳಲಿದ್ದಾರೆ. ಈ ಮೊದಲು ಸುನಿಲ್ ಜೋಶಿ ಹೈದರಾಬಾದ್ ತಂಡದ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದ್ದರು.
