ಪಿಬಿಎಲ್: ಬೆಂಗಳೂರು ಮಣಿಸಿ ಹೈದರಾಬಾದ್ ಹಂಟರ್ಸ್ ಚಾಂಪಿಯನ್

First Published 15, Jan 2018, 9:27 AM IST
Hyderabad Hunters beat Bengaluru Blasters to win PBL title
Highlights

ಬೆಂಗಳೂರು ಬ್ಲಾಸ್ಟರ್ಸ್‌, 3ನೇ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ನ ಫೈನಲ್‌'ನಲ್ಲಿ ಹೈದರಾಬಾದ್ ಹಂಟರ್ಸ್‌ ಎದುರು ಪರಾಭವ ಹೊಂದಿದೆ. ಇದರೊಂದಿಗೆ ಹೈದರಾಬಾದ್ ಚೊಚ್ಚಲ ಬಾರಿಗೆ ಟ್ರೋಫಿ ಎತ್ತಿ ಹಿಡಿಯಿತು.

ಹೈದರಾಬಾದ್(ಜ.15): ವಿಶ್ವದ ನಂ.1 ಶಟ್ಲರ್ ವಿಕ್ಟರ್ ಅಕ್ಸೆಲ್ಸನ್ ಮತ್ತು ಪುರುಷರ ಡಬಲ್ಸ್‌'ನಲ್ಲಿ ಬೊಯಿ ಹಾಗೂ ರಾಂಗ್ ಜೋಡಿ ಗೆಲುವಿನ ಹೊರತಾಗಿಯೂ ಬೆಂಗಳೂರು ಬ್ಲಾಸ್ಟರ್ಸ್‌, 3ನೇ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ನ ಫೈನಲ್‌'ನಲ್ಲಿ ಹೈದರಾಬಾದ್ ಹಂಟರ್ಸ್‌ ಎದುರು ಪರಾಭವ ಹೊಂದಿದೆ. ಇದರೊಂದಿಗೆ ಹೈದರಾಬಾದ್ ಚೊಚ್ಚಲ ಬಾರಿಗೆ ಟ್ರೋಫಿ ಎತ್ತಿ ಹಿಡಿಯಿತು.

ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಬೆಂಗಳೂರು 3-4ರಿಂದ ಹೈದರಾಬಾದ್ ಎದುರು ಸೋಲುಂಡಿತು. ಪುರುಷರ ಡಬಲ್ಸ್‌'ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಹೈದರಾಬಾದ್‌ನ ಕಿಡೊ ಮತ್ತು ಸಿಯಾಂಗ್ ಜೋಡಿ 9-15, 10-15 ಗೇಮ್‌'ಗಳಿಂದ ಬೆಂಗಳೂರಿನ ಬೊಯಿ ಮತ್ತು ರಾಂಗ್ ಎದುರು ಸೋಲು ಕಂಡಿತು.

ನಂತರ ಪುರುಷರ ಸಿಂಗಲ್ಸ್‌ನ ಟ್ರಂಪ್ ಪಂದ್ಯದಲ್ಲಿ ಹೈದರಾಬಾದ್‌ನ ಎಲ್.ಎಚ್. ಇಲ್ 15-7, 15-3 ಗೇಮ್ ಗಳಿಂದ ಬೆಂಗಳೂರಿನ ಎಸ್. ಡೇ ಎದುರು ಗೆಲುವು ಪಡೆದರು. ಮತ್ತೊಂದು ಪುರುಷರ ಸಿಂಗಲ್ಸ್‌'ನ ಟ್ರಂಪ್ ಪಂದ್ಯದಲ್ಲಿ ಹೈದರಾಬಾದ್‌'ನ ಬಿ.ಎಸ್. ಪ್ರಣೀತ್ 8-15, 10-15 ಗೇಮ್‌'ಗಳಿಂದ ಬೆಂಗಳೂರಿನ ವಿಕ್ಟರ್ ಅಕ್ಸೆಲ್ಸನ್ ಎದುರು ಸೋಲು ಕಂಡರು.

ಮಹಿಳಾ ಸಿಂಗಲ್ಸ್‌ನಲ್ಲಿ ಹೈದರಾಬಾದ್‌'ನ ಕರೋಲಿನಾ ಮರಿನ್ 15-08, 15-14 ಗೇಮ್‌'ಗಳಿಂದ ಬೆಂಗಳೂರಿನ ಗಿಲ್ಮೋರ್ ವಿರುದ್ಧ ಜಯಿಸಿ 3-3 ರಿಂದ ಸಮಬಲ ನೀಡಿದರು. ಇನ್ನೂ ಕೊನೆಯಲ್ಲಿ ನಡೆದ ಮಿಶ್ರ ಡಬಲ್ಸ್ ಪಂದ್ಯದಲ್ಲಿ ಹೈದರಾಬಾದ್‌'ನ ಬೆರ್ನಡೆತ್ ಮತ್ತು ರಂಕಿ ರೆಡ್ಡಿ ಜೋಡಿ 15-11, 15-12 ಗೇಮ್‌'ಗಳಿಂದ ಬೆಂಗಳೂರಿನ ರಾಂಗ್ ಹಾಗೂ ಸಿಕ್ಕಿ ರೆಡ್ಡಿ ಜೋಡಿಯನ್ನು ಮಣಿಸಿ 1 ಅಂಕದ ಅಂತರದಲ್ಲಿ ಪಂದ್ಯ ಜಯಿಸಿತು.

loader