ಥ್ರೋಬಾಲ್‌ ಆಟಗಾರ್ತಿ ತಶ್ಮಾ ಮುತ್ತಪ್ಪ ಮನೆ ಪ್ರವಾಹದಲ್ಲಿ ನೆಲಸಮ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 31, Aug 2018, 11:55 AM IST
House of Throw ball played destroyed in Kodagu Floods
Highlights

ಕೊಡಗಿನಲ್ಲಿ ಸುರಿದ ಮಳೆಗೆ ಸಾಕಷ್ಟು ಮಂದಿ ತಮ್ಮವರನ್ನು ಕಳೆದುಕೊಂಡಿದ್ದಾರೆ. ತಮ್ಮ ಆಸ್ತಿಯನ್ನು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಇದೀಗ ಕೆಲವು ನಿರಾಶ್ರಿತರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದು, ಇವರಲ್ಲಿ ಅಂತಾರಾಷ್ಟ್ರೀಯ ಥ್ರೋ ಬಾಲ್ ಆಟಗಾರ್ತಿಯೊಬ್ಬರು ಸೇರಿದ್ದಾರೆ.

ಮಡಿಕೇರಿ: ಪ್ರಕೃತಿ ವಿಕೋಪಕ್ಕೆ ಸಿಲುಕಿ ತಮ್ಮ ಮನೆ ಕಳೆದುಕೊಂಡಿರುವ ಅಂತಾರಾಷ್ಟ್ರೀಯ ಥ್ರೋಬಾಲ್‌ ಆಟಗಾರ್ತಿ ತಶ್ಮಾ ಮುತ್ತಪ್ಪ ಅವರ ಕುಟುಂಬ ಕಂಗಾಲಾಗಿದ್ದು, ಈಗ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿದೆ. ಮಡಿಕೇರಿ ತಾಲೂಕಿನ ಎರಡನೇ ಮೊಣ್ಣಂಗೇರಿಯಲ್ಲಿ ವಾಸವಿದ್ದ ತಶ್ಮಾ ಮುತ್ತಪ್ಪ ಕುಟುಂಬಕ್ಕೆ ಈಗ ನಿರಾಶ್ರಿತರ ಕೇಂದ್ರವೇ ಮನೆ.

ಇಡೀ ಕುಟುಂಬಕ್ಕೆ ಬೆನ್ನೆಲುಬಾಗಿದ್ದ ಸಹೋದರ 2 ತಿಂಗಳ ಹಿಂದಷ್ಟೇ ತೀರಿಹೋಗಿದ್ದರು. ಮನೆಯ ಸಂಪೂರ್ಣ ಜವಾಬ್ದಾರಿ ಹೊತ್ತಿರುವ ತಶ್ಮಾ ಕಳೆದ ಒಂದು ವರ್ಷದ ಹಿಂದೆ ಮಡಿಕೇರಿ ತಾಲೂಕಿನ ಎರಡನೇ ಮೊಣ್ಣಂಗೇರಿ ಗ್ರಾಮದಲ್ಲಿ ಜಾಗ ಖರೀದಿಸಿ ಮನೆ ಕಟ್ಟಿದ್ದರು. ಆದರೆ ಪ್ರಕೃತಿ ವಿಕೋಪಕ್ಕೆ ಈಗ ಮನೆ ನೆಲಸಮವಾಗಿದೆ. ಕ್ರೀಡೆಯಲ್ಲಿ ತಶ್ಮಾ ಇಲ್ಲಿಯವರೆಗೆ ಪಡೆದಿದ್ದ ಪ್ರಶಸ್ತಿ, ದಾಖಲೆಗಳೆಲ್ಲವೂ ನಾಶವಾಗಿವೆ.

ತಶ್ಮಾ ಮುತ್ತಪ್ಪ 2016ರಲ್ಲಿ ಬೆಂಗಳೂರಿನ ಸಿಂಧಿ ಕಾಲೇಜ್‌ನಲ್ಲಿ ಅಂತಾರಾಷ್ಟ್ರೀಯ ಪಂದ್ಯವಾಡಿ ಚಿನ್ನದ ಪದಕ ಪಡೆದುಕೊಂಡಿದ್ದರು. ಉಳಿದಂತೆ ಹರಿಯಾಣದಲ್ಲಿ ನಡೆದ ರಾಷ್ಟ್ರ ಮಟ್ಟದ ಪಂದ್ಯ, ಚೆನ್ನೈನಲ್ಲಿ ನಡೆದ ಫೆಡರೇಷನ್‌ ಕಪ್‌, ಧಾರವಾಡ, ಉಡುಪಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಪಂದ್ಯಾವಳಿಗಳಲ್ಲಿ ತಶ್ಮಾ ಪಾಲ್ಗೊಂಡು ಉತ್ತಮ ಆಟಗಾರ್ತಿ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು.

ಮದುವೆಯೂ ನಿಗದಿಯಾಗಿತ್ತು:

ತಶ್ಮಾ ಅವರಿಗೆ ವಿವಾಹ ನಿಶ್ಚಯವೂ ಆಗಿತ್ತು. ಡಿಸೆಂಬರ್‌ನಲ್ಲಿ ವಿವಾಹ ನಡೆಯಬೇಕಿತ್ತು. ಆದರೆ ಈಗ ನಮ್ಮ ಬಳಿ ಏನೂ ಇಲ್ಲ. ಆದ್ದರಿಂದ ಮದುವೆಯನ್ನು ಏಪ್ರಿಲ್‌ಗೆ ಮುಂದೂಡಲು ನಿರ್ಧರಿಸಿದ್ದೇವೆ ಎಂದು ತಶ್ಮಾ ಅವರ ತಂದೆ ಮುತ್ತಪ್ಪ ಹೇಳಿದ್ದಾರೆ.

ಮನೆಯಲ್ಲಿ ತುಂಬಾ ಕಷ್ಟಇದ್ದ ಹಿನ್ನೆಲೆಯಲ್ಲಿ ಶಿಕ್ಷಣ ಹಾಗೂ ಕ್ರೀಡೆಯಿಂದ ದೂರ ಸರಿಯುವಂತಾಯಿತು. ಮೆಡಿಕಲ್‌ ಕಾಲೇಜಿನಲ್ಲಿ ಡಾಟಾ ಎಂಟ್ರಿ ಕೆಲಸ ಮಾಡುತ್ತಿದ್ದೆ. ಈಗ ನಮ್ಮ ಹೊಸ ಮನೆ ಸಂಪೂರ್ಣ ನಾಶವಾಗಿದೆ. ಆದ್ದರಿಂದ ಮಡಿಕೇರಿಯ ನಿರಾಶ್ರಿತರ ಕೇಂದ್ರದಲ್ಲಿ ತಂಗಿದ್ದೇವೆ. ನನಗೆ ಸರ್ಕಾರದಿಂದ ಶಾಶ್ವತ ಉದ್ಯೋಗ ನೀಡಿದರೆ ಸಾಕು.

-ತಶ್ಮಾ ಮುತ್ತಪ್ಪ, ಥ್ರೋಬಾಲ್‌ ಆಟಗಾರ್ತಿ

loader