ಸರಣಿಯುದ್ದಕ್ಕೂ ಆಲ್ರೌಂಡ್ ಆಟ ಪ್ರದರ್ಶಿಸಿದ ರವೀಂದ್ರ ಜಡೇಜಾ ಪಂದ್ಯ ಶ್ರೇಷ್ಟ ಹಾಗಯೇ ಸರಣಿ ಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು.
ಧರ್ಮಶಾಲಾ(ಮಾ.28): ಆಸೀಸ್ ನೀಡಿದ್ದ ಸುಲಭ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಕನ್ನಡಿಗ ಕೆ.ಎಲ್ ರಾಹುಲ್ ಅವರ ಭರ್ಜರಿ ಅರ್ಧಶತಕದ ನೆರವಿನಿಂದ ಜಯಭೇರಿ ಬಾರಿಸುವುದರ ಜತೆಗೆ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು 2-1 ಅಂತರದಲ್ಲಿ ಕೈವಶ ಮಾಡಿಕೊಂಡಿದೆ.
ಧರ್ಮಶಾಲಾದಲ್ಲಿ ನಡೆದ ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ ಆಕ್ರಮಣಕಾರಿಯಾಗಿ ಆಟವಾಡಿದ ಟೀಂ ಇಂಡಿಯಾ ಒಂದು ದಿನ ಬಾಕಿಯಿರುವಂತೆಯೇ ಎಂಟು ವಿಕೆಟ್'ಗಳ ಜಯಸಾಧಿಸಿದೆ. ಸ್ಮಿತ್ ಪಡೆ ನೀಡಿದ 106ರರನ್'ಗಳ ಸುಲಭ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಕೇವಲ ಎರಡು ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿದೆ. ಈ ಗೆಲುವಿನೊಂದಿಗೆ ಸರಣಿ ಗೆಲುವು ಸಾಧಿಸುವುದರ ಜೊತೆಗೆ ಐಸಿಸಿ ಶ್ರೇಯಾಂಕದಲ್ಲಿ ಟೀಂ ಇಂಡಿಯಾ ಅಗ್ರ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್'ನಲ್ಲಿ 300 ರನ್'ಗಳಿಸಿ ಸರ್ವಪತನ ಕಂಡಿತ್ತು. ಆಸೀಸ್ ಪರ ನಾಯಕ ಸ್ಟೀವ್' ಸ್ಮಿತ್ 111 ರನ್ ಬಾರಿಸಿದರೆ, ಟೀಂ ಇಂಡಿಯಾ ಪರ ಪಾದಾರ್ಪಣೆ ಪಂದ್ಯವಾಡಿದ ಕುಲ್ದೀಪ್ ಯಾದವ್ 68/4 ವಿಕೆಟ್ ಪಡೆದು ಮಿಂಚಿದ್ದರು. ಇನ್ನು ಟೀಂ ಇಂಡಿಯಾ ಕೆ.ಎಲ್ ರಾಹುಲ್ ಹಾಗೂ ಚೇತೇಶ್ವರ ಪೂಜಾರ ಅವರ ಅರ್ಧಶತಕಗಳ ನೆರವಿನಿಂದ 332 ರನ್ ಕಲೆಹಾಕಿತು. 32ರನ್'ಗಳ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಆಸೀಸ್ ಪಡೆ ಕೇವಲ 137 ರನ್'ಗಳಿಗೆ ಆಲೌಟ್ ಆಗಿ ಟೀಂ ಇಂಡಿಯಾಗೆ ಗೆಲ್ಲಲು 106ರನ್'ಗಳ ಗುರಿ ನೀಡಿತು. ಸುಲಭ ಗುರಿಯನ್ನು ಒಂದು ದಿನ ಬಾಕಿಯಿರುವಂತೆಯೇ ಟೀಂ ಗೆಲುವಿನ ಕೇಕೆ ಹಾಕಿತು.
ಸರಣಿಯುದ್ದಕ್ಕೂ ಆಲ್ರೌಂಡ್ ಆಟ ಪ್ರದರ್ಶಿಸಿದ ರವೀಂದ್ರ ಜಡೇಜಾ ಪಂದ್ಯ ಶ್ರೇಷ್ಟ ಹಾಗಯೇ ಸರಣಿ ಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು.
