ಭುವನೇಶ್ವರ(ಡಿ.17): ಹ್ಯಾಟ್ರಿಕ್ ಪ್ರಶಸ್ತಿಯ ಕನಸಿನೊಂದಿಗೆ ಪುರುಷರ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದ 2 ಬಾರಿಯ ಪ್ರಶಸ್ತಿ ವಿಜೇತ ಆಸ್ಟ್ರೇಲಿಯಾ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ.

ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲಿ ಅಮೋಘ ಪ್ರದರ್ಶನ ತೋರಿದ ಆಸ್ಟ್ರೇಲಿಯಾ, ಇಂಗ್ಲೆಂಡ್ ತಂಡವನ್ನು 8-1 ಗೋಲುಗಳಿಂದ ಹೀನಾಯವಾಗಿ ಸೋಲಿಸಿತು. ಆಸ್ಟ್ರೇಲಿಯಾ ಪರ ಟಾಮ್ ಕ್ರೆಗ್(9ನೆ, 19ನೇ ಮತ್ತು 34ನೇ ನಿಮಿಷ) ಹ್ಯಾಟ್ರಿಕ್ ಗೋಲು ಬಾರಿಸಿದರೆ, ಜೆರೆಮಿ ಹೇವಾರ್ಡ್(57ನೇ, 60ನೇ ನಿಮಿಷ), ಬ್ಲೇಕ್ ಗೋವರ್ಸ್‌(8ನೇ ನಿ.), ಟ್ರೆಂಟ್ ಮಿಟ್ಟನ್(32ನೇ ನಿ.) ಮತ್ತು ಟಿಮ್ ಬ್ರಾಂಡ್(34ನೇ ನಿ.) ಗೋಲು ಬಾರಿಸಿದರು. ಇಂಗ್ಲೆಂಡ್ ಪರ ಬ್ಯಾರಿ ಮಿಡ್ಲಟನ್ (45ನೇ ನಿ.) ಒಂದು ಗೋಲು ಬಾರಿಸಿದರು.

ಗ್ರೂಪ್ ಹಂತದಲ್ಲೂ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಆ ವೇಳೆ ಆಸ್ಟ್ರೇಲಿಯಾ ತಂಡವು 3-0 ಗೋಲುಗಳ ಅಂತರದಲ್ಲಿ ಜಯಭೇರಿ ಬಾರಿಸಿತ್ತು. ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ 5ನೇ ಬಾರಿಗೆ ಕಂಚಿನ ಪದಕ ಗೆದ್ದಂತಾಗಿದೆ. ಈ ಹಿಂದೆ ತವರಿನಲ್ಲಿ 1994ರಲ್ಲಿ ನಡೆದ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿತ್ತು.