ನವದೆಹಲಿ(ಮಾ.16): ಬದ್ಧವೈರಿಗಳಾದ ಭಾರತ-ಪಾಕಿಸ್ತಾನ, 2018ರ ಚಾಂಪಿಯನ್ಸ್ ಟ್ರೋಫಿ ಉದ್ಘಾಟನಾ ಪಂದ್ಯದಲ್ಲಿ ಸೆಣಸಾಡಲಿವೆ. ಜೂನ್ 23ರಿಂದ ನೆದರ್'ಲೆಂಡ್ಸ್‌'ನ ಬ್ರೆಡಾದಲ್ಲಿ ಪಂದ್ಯಾವಳಿ ಆರಂಭಗೊಳ್ಳಲಿದ್ದು, ಒಟ್ಟು 6 ತಂಡಗಳು ಪಾಲ್ಗೊಳ್ಳಲಿವೆ.

ಐತಿಹಾಸಿಕ ಪಂದ್ಯಾವಳಿ ಕೊನೆ ಬಾರಿಗೆ ನಡೆಯುತ್ತಿರುವುದರಿಂದ ನಿರೀಕ್ಷೆ ಹೆಚ್ಚಿದೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ, ಒಲಿಂಪಿಕ್ಸ್ ಚಾಂಪಿಯನ್ ಅರ್ಜೆಂಟೀನಾ ಹಾಗೂ ಆತಿಥೇಯ  ರಾಷ್ಟ್ರವಾದ ನೆದರ್'ಲೆಂಡ್ಸ್ ನೇರ ಅರ್ಹತೆ ಪಡೆದುಕೊಂಡರೆ, ಭಾರತ, ಪಾಕಿಸ್ತಾನ ಹಾಗೂ ಬೆಲ್ಜಿಯಂ ತಂಡಗಳನ್ನು ಅಂ.ರಾ. ಹಾಕಿ ಸಂಸ್ಥೆ ಆಹ್ವಾನಿಸಿದೆ.

ಭಾರತ ಜೂ.24ರಂದು ಅರ್ಜೆಂಟೀನಾ, ಜೂ.27ರಂದು ಆಸ್ಟ್ರೇಲಿಯಾ, ಜೂ.28ರಂದು ಬೆಲ್ಜಿಯಂ ವಿರುದ್ಧ ಸೆಣಸಲಿದೆ. ಜುಲೈ 1ಕ್ಕೆ ಫೈನಲ್ ನಡೆಯಲಿದೆ. ನವೆಂಬರ್ 28ರಿಂದ ಡಿ.16ರ ವರೆಗೂ ಭುವನೇಶ್ವರದಲ್ಲಿ ನಡೆಯಲಿರುವ ವಿಶ್ವಕಪ್‌'ಗೂ ಮುನ್ನ, ನಡೆಯಲಿರುವ ಮಹತ್ವದ ಪಂದ್ಯಾವಳಿ ಇದಾಗಿದ್ದು, ಎಲ್ಲಾ ತಂಡಗಳು ಉತ್ತಮ ಅಭ್ಯಾಸ ನಡೆಸಲು ಎದುರು ನೋಡಲಿವೆ.

ಏಪ್ರಿಲ್ 4ರಿಂದ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್'ನಲ್ಲಿ ನಡೆಯಲಿರುವ ಕಾಮನ್‌'ವೆಲ್ತ್ ಗೇಮ್ಸ್‌'ನ ಮೊದಲ ಪಂದ್ಯದಲ್ಲೂ ಭಾರತ ಬದ್ಧವೈರಿ ಪಾಕಿಸ್ತಾನವನ್ನೇ ಎದುರಿಸಲಿದೆ.