ಸದ್ಯ ಹೆಂಡ್ರಿ ಆಂಟೋನಿ ಅವರು ಅಂಡರ್-17 ತಂಡದ 21 ಮಂದಿಯ ಪಟ್ಟಿಯಲ್ಲಿದ್ದಾರೆ. ಅಂತಿಮ ತಂಡದಲ್ಲಿ ಅವರಿಗೆ ಸ್ಥಾನ ಸಿಗುವುದು ಖಚಿತವೆಂಬ ಮಾತಿದೆ. ಅಕ್ಟೋಬರ್ 6ರಿಂದ ನಡೆಯಲಿರುವ, ಭಾರತದ ಮಟ್ಟಿಗೆ ಐತಿಹಾಸಿಕವಾಗಿರುವ ಫೀಫಾ ವಿಶ್ವಕಪ್'ನಲ್ಲಿ ನಮ್ಮ ಕರ್ನಾಟಕದ ಈ ಹುಡುಗ ಆಡಿ ಮಿಂಚುವಂತಾಗಲೆಂಬುದು ನಮ್ಮ ಶುಭಹಾರೈಕೆ.
ಬೆಂಗಳೂರು(ಸೆ. 29): ಅಂಡರ್-17 ಫೀಫಾ ವಿಶ್ವಕಪ್ ಮೂಲಕ ಭಾರತ ಹೊಸ ಚರಿತ್ರೆಯ ಪುಟ ತೆರೆಯಲಿದೆ. ಭಾರತ ತಂಡ ಮೊತ್ತಮೊದಲ ಬಾರಿಗೆ ಫುಟ್ಬಾಲ್ ವಿಶ್ವಕಪ್ ಆಡುತ್ತಿದೆ. ಇಂತಹ ಐತಿಹಾಸಿಕ ಕ್ಷಣದಲ್ಲಿ ಕರ್ನಾಟಕದ ಫುಟ್ಬಾಲ್ ಆಟಗಾರನೊಬ್ಬನೂ ಇರುವುದು ಗಮನಾರ್ಹ. ಬೆಂಗಳೂರಿನ 17 ವರ್ಷದ ಹುಡುಗ ಹೆಂಡ್ರಿ ಆಂಟೋನೇ ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. ರಕ್ಷಣಾ ಆಟಗಾರನಾಗಿ ತಂಡದಲ್ಲಿರುವ ಹೆಂಡ್ರಿ ಆಂಟೋನೀ ಉಜ್ವಲ ಪ್ರತಿಭೆ ಇರುವ ಫುಟ್ಬಾಲ್ ಆಟಗಾರನೆಂದು ಪರಿಗಣಿಸಲಾಗಿದೆ.
ಜೂನಿಯರ್ ಹಂತದಿಂದ ವಿವಿಧ ಕ್ಲಬ್'ಗಳಲ್ಲಿ ಆಡಿರುವ ಹೆಂಡ್ರಿ ಇದೀಗ ಡಿಫೆಂಡರ್ ಕಾರ್ಯದಿಂದ ಫುಲ್-ಬ್ಯಾಕ್ ಡಿಫೆಂಡರ್ ಆಗಿ ರೂಪುಗೊಂಡಿದ್ದಾರೆ. ಎದುರಾಳಿ ಫಾರ್ವರ್ಡ್'ಗಳಿಂದ ಚೆಂಡನ್ನು ದಕ್ಕಿಸಿಕೊಳ್ಳುವುಷ್ಟೇ ಅಲ್ಲ, ತಮ್ಮ ತಂಡದ ಮುನ್ನಡೆ ಆಟಗಾರರಿಗೆ ದಾಳಿಯಲ್ಲಿ ನೆರವಾಗುವುದು ಫುಲ್-ಬ್ಯಾಕ್ ಡಿಫೆಂಡರ್'ಗಳ ಜವಾಬ್ದಾರಿಯಾಗಿರುತ್ತದೆ. ವಿಶ್ವದ ಬಹುತೇಕ ಶ್ರೇಷ್ಠ ತಂಡಗಳಲ್ಲಿ ಫುಲ್-ಬ್ಯಾಕ್ ಡಿಫೆಂಡರ್'ಗಳಿಗೆ ಬಹಳ ಡಿಮ್ಯಾಂಡ್ ಇದೆ. ಈ ಹಿನ್ನೆಲೆಯಲ್ಲಿ ಹೆಂಡ್ರಿ ಆಂಟೋನೇ ಅವರಿಗೆ ಉಜ್ವಲ ಭವಿಷ್ಯವಿರುವುದು ಸ್ಪಷ್ಟವಾಗಿದೆ. ಹೆಂಡ್ರಿಯನ್ನು ತಂಡಕ್ಕೆ ಕರೆದುತಂದ ತಂಡದ ಹಿಂದಿನ ಕೋಚ್ ನಿಕೋಲಾಯ್ ಆ್ಯಡಂ ಅವರು ತಮ್ಮ ಶಿಷ್ಯನ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ. ತಂಡದ ಪ್ಲೇಯಿಂಗ್ ಇಲವೆನ್'ನಲ್ಲಿ ಹೆಂಡ್ರಿ ಸ್ಥಾನ ಬಹುತೇಕ ಖಚಿತವೆನಿಸುತ್ತದೆ. ಆತನನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ ಎಂದು ಆ್ಯಡಂ ಹೇಳಿದ್ದಾರೆ.
ಹೆಂಡ್ರಿ ಆಂಟೋನೀ ಇತ್ತೀಚೆಗಷ್ಟೇ ಅಂಡರ್-17 ತಂಡಕ್ಕೆ ಆಯ್ಕೆಯಾಗಿದ್ದು. ಬೆಂಗಳೂರಿನ ಓಝೋನ್ ಎಫ್'ಸಿ ಕ್ಲಬ್ ಮೂಲಕ ಕುಡಿಯೊಡೆದ ಹೆಂಡ್ರಿ, ಅಂಡರ್-14 ರಾಷ್ಟ್ರೀಯ ತಂಡದ ನ್ಯಾಷನಲ್ ಕ್ಯಾಂಪ್'ಗೆ ಆಯ್ಕೆಯಾಗಿ ತರಬೇತಿಯನ್ನೂ ಪಡೆದರು. ಆ ನಂತರ, ಬೆಂಗಳೂರು ಎಫ್'ಸಿ ಕ್ಲಬ್ ತಂಡವನ್ನು ಸೇರಿಕೊಂಡರು. ಒಂದು ವರ್ಷದ ಬಳಿಕ ಪುಣೆ ಎಫ್'ಸಿ ತಂಡಕ್ಕೆ ಸೇರ್ಪಡೆಯಾದರು. ಪುಣೆಯಲ್ಲಿ ಅತ್ಯುತ್ತಮ ತರಬೇತಿ ಸೌಕರ್ಯ ಇದ್ದದ್ದರಿಂದ ಬೆಂಗಳೂರು ಎಫ್'ಸಿಯಂತಹ ಬಲಿಷ್ಠ ಕ್ಲಬ್'ನ್ನು ಅವರು ತೊರೆದರು. ಅಂಡರ್-15 ಐ-ಲೀಗ್'ನಲ್ಲಿ ಪುಣೆ ಎಫ್'ಸಿ ತಂಡದ ಪರವಾಗಿ ಮಿಂಚಿದರು. ಇದೇ ವೇಳೆ, ಅಂಡರ್-17 ರಾಷ್ಟ್ರೀಯ ತಂಡಕ್ಕೆ ಆಟಗಾರರ ಸೆಲೆಕ್ಷನ್ ಪ್ರಕ್ರಿಯೆ ನಡೆಯುತ್ತಿತ್ತು. ಪುಣೆಯಲ್ಲಿದ್ದ ಹೆಂಡ್ರಿ ಅವರ ಪ್ರದರ್ಶನವನ್ನು ಗಮನಿಸಿದ ಆಗಿನ ಭಾರತ ಜೂನಿಯರ್ ತಂಡದ ಕೋಚ್ ನಿಕೋಲಾಯ್ ಆಡಂ ಅವರು ರಾಷ್ಟ್ರೀಯ ತಂಡಕ್ಕೆ ಬುಲಾವ್ ಕೊಟ್ಟರು.
ಸದ್ಯ ಹೆಂಡ್ರಿ ಆಂಟೋನಿ ಅವರು ಅಂಡರ್-17 ತಂಡದ 21 ಮಂದಿಯ ಪಟ್ಟಿಯಲ್ಲಿದ್ದಾರೆ. ಅಂತಿಮ ತಂಡದಲ್ಲಿ ಅವರಿಗೆ ಸ್ಥಾನ ಸಿಗುವುದು ಖಚಿತವೆಂಬ ಮಾತಿದೆ. ಅಕ್ಟೋಬರ್ 6ರಿಂದ ನಡೆಯಲಿರುವ, ಭಾರತದ ಮಟ್ಟಿಗೆ ಐತಿಹಾಸಿಕವಾಗಿರುವ ಫೀಫಾ ವಿಶ್ವಕಪ್'ನಲ್ಲಿ ನಮ್ಮ ಕರ್ನಾಟಕದ ಈ ಹುಡುಗ ಆಡಿ ಮಿಂಚುವಂತಾಗಲೆಂಬುದು ನಮ್ಮ ಶುಭಹಾರೈಕೆ.
