ಜೈಪುರ[ಏ.02]: ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಂಗಳವಾರ ಇಲ್ಲಿನ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೆಣಸಲಿದ್ದು, ಸೋಲಿನ ಸುಳಿಯಿಂದ ಮೇಲೇಳುವ ವಿಶ್ವಾಸದಲ್ಲಿದೆ. ಅತ್ತ ರಾಜಸ್ಥಾನ ರಾಯಲ್ಸ್ ಸಹ ಐಪಿಎಲ್ 12ನೇ ಆವೃತ್ತಿಯಲ್ಲಿ ಆಡಿರುವ ಮೂರೂ ಪಂದ್ಯಗಳಲ್ಲಿ ಸೋಲುಂಡಿದ್ದು ಗೆಲುವಿನ ಖಾತೆ ತೆರೆಯುವ ತವಕದಲ್ಲಿದೆ.

ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಸತತ ಮೂರು ಪಂದ್ಯಗಳನ್ನು ಕೈಚೆಲ್ಲಿರುವ ವಿರಾಟ್ ಕೊಹ್ಲಿ ಗೆಲುವಿನ ಹಾದಿಗೆ ಮರಳದಿದ್ದರೆ ಮುಂದಿನ ಹಂತಕ್ಕೇರುವ ಹಾದಿ ಬಲು ಕಠಿಣವಾಗಲಿದೆ. ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್‌ ಹೊರತುಪಡಿಸಿ, ಆರ್‌ಸಿಬಿಯ ಉಳಿದ್ಯಾವ ಬ್ಯಾಟ್ಸ್‌ಮನ್‌ಗಳಿಂದಲೂ ನಿರೀಕ್ಷಿತ ಪ್ರದರ್ಶನ ಮೂಡಿಬರುತ್ತಿಲ್ಲ. ಆದಾಗ್ಯೂ ತಂಡ ಸಂಯೋಜನೆ ಬದಲಾಯಿಸಲು ಮುಂದಾಗದ ನಾಯಕ ವಿರಾಟ್ ನಡೆ ಅಚ್ಚರಿಗೆ ಕಾರಣವಾಗಿದೆ.

ಅದರಲ್ಲೂ ಭಾನುವಾರ ಸನ್‌ರೈಸರ್ಸ್‌ ವಿರುದ್ಧದ ಪಂದ್ಯದಲ್ಲಿ ಅತಿ ಹೀನಾಯವಾದ ಸೋಲನ್ನು ಕಂಡಿರುವ ಆರ್‌ಸಿಬಿ ಜಯದ ಹಾದಿಗೆ ಮರಳಬೇಕಾದರೆ ತಂಡದಲ್ಲಿ ಕೆಲ ಬದಲಾವಣೆಗಳನ್ನು ಮಾಡಲೇಬೇಕಾದ ಅನಿವಾರ್ಯತೆಯಲ್ಲಿದೆ. ಪಾರ್ಥೀವ್ ಪಟೇಲ್, ಅನುಭವಿ ಮೋಯಿನ್ ಜವಾಬ್ದಾರಿ ಅರಿತು ಬ್ಯಾಟ್ ಬೀಸಬೇಕಿದೆ. ರನ್ ಗಳಿಸಲು ಪರದಾಡುತ್ತಿರುವ ಡಿಗ್ರಾಂಡ್‌ಹೋಮ್, ಶಿಮ್ರೊನ್ ಹೆಟ್ಮೇಯರ್, ಶಿವಂ ದುಬೆ ಬದಲಿಗೆ ಬೆಂಚ್ ಕಾಯುತ್ತಿರುವ ಟಿಮ್ ಸೌಥಿ, ವಾಷಿಂಗ್ಟನ್ ಸುಂದರ್ ಅವರನ್ನು ಕಣಕ್ಕಿಳಿಸದಿರಲು ಕಾರಣವೇನು ಎಂಬ ಪ್ರಶ್ನೆ ಎದುರಾಗಿದೆ. ಈ ನಿಟ್ಟಿನಲ್ಲಿ ಬ್ಯಾಟಿಂಗ್ ಕ್ರಮಾಂಕದಲ್ಲೂ ಕೆಲ ಬದಲಾವಣೆಗಳಾಗುವ ನಿರೀಕ್ಷೆ ಇದೆ. 

ಆರ್‌ಸಿಬಿ ಬೌಲರ್‌ಗಳು ಸ್ಥಿರತೆ ಕಾಯ್ದುಕೊಳ್ಳುವಲ್ಲಿ ವಿಫಲರಾಗುತ್ತಿರುವುದು ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿದೆ. ಯಜುವೇಂದ್ರ ಚಹಲ್ ಹೊರತುಪಡಿಸಿ ಆರ್‌ಸಿಬಿಯ ಬೌಲರ್‌ಗಳು ಲಯ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಪಂದ್ಯದಿಂದ ಪಂದ್ಯಕ್ಕೆ ದುಬಾರಿ ಆಗುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ಭರವಸೆ ಮೂಡಿಸಿದ್ದ ನವ್‌ದೀಪ್ ಸೈನಿ, ಮುಂಬೈ ವಿರುದ್ಧ ಹೆಚ್ಚಿನ ರನ್ ಬಿಟ್ಟುಕೊಟ್ಟಿದ್ದರು. ಉಮೇಶ್ ಯಾದವ್ ಸಹ ಸನ್‌ರೈಸರ್ಸ್‌ ಬ್ಯಾಟ್ಸ್‌ಮನ್‌ಗಳ ಮುಂದೆ ತಿಣುಕಾಡಿದ್ದರು.

ಮೊಹಮದ್ ಸಿರಾಜ್ ಓವರಲ್ಲಿ ಒಂದೆರಡು ಎಸೆತಗಳನ್ನು ಅತ್ಯುತ್ತಮವಾಗಿ ಎಸೆದರೆ ಇನ್ನುಳಿದವು ಕಳಪೆಯಾಗಿರಲಿವೆ. ಸ್ಥಿರತೆಯ ಕೊರತೆಯಿಂದ ಅವರು ಪರಿಣಾಮಕಾರಿಯಾಗುತ್ತಿಲ್ಲ. ಕ್ಷೇತ್ರರಕ್ಷಣೆಯ ಬಗ್ಗೆಯೂ ಆರ್‌ಸಿಬಿ ಗಂಭೀರವಾದ ಚಿತ್ತ ಹರಿಸಬೇಕಿದ್ದು, ತಪ್ಪುಗಳನ್ನು ತಿದ್ದಿಕೊಳ್ಳಬೇಕಿದೆ.

ದುರಾದೃಷ್ಟ ಬೆನ್ನಿಗೆ: ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್, ರಾಹುಲ್ ತ್ರಿಪಾಠಿ, ಸ್ಟೀವ್ ಸ್ಮಿತ್, ಬೆನ್ ಸ್ಟೋಕ್ಸ್ ಅವರಂತಹ ತಾರಾ ಬ್ಯಾಟ್ಸ್‌ಮನ್‌ಗಳಿದ್ದರೂ ರಾಜಸ್ಥಾನ ರಾಯಲ್ಸ್‌ಗೆ ಅದೃಷ್ಟ ಕೈ ಹಿಡಿಯುತ್ತಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಸಿಗಲಿಲ್ಲ ಎಂಬಂತ ಪರಿಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ಪಡೆಯಿದ್ದು, ಇನ್ನೇನು ಗೆದ್ದೆ ಬಿಟ್ಟೆವು ಎನ್ನುವ ಕೊನೆ ಕ್ಷಣದಲ್ಲಿ ಪಂದ್ಯವನ್ನು ಸೋಲುತ್ತಿದ್ದಾರೆ. ಜೋಫ್ರಾ ಆರ್ಚರ್, ಬೆನ್‌ಸ್ಟೋಕ್ಸ್‌ರಂತಹ ಶ್ರೇಷ್ಠ ಆಲ್ರೌಂಡರ್‌ಗಳು ಹಾಗೂ ಶ್ರೇಯಸ್ ಗೋಪಾಲ್, ಕೆ.ಗೌತಮ್, ಜಯದೇವ್ ಉನ್ಕಾದತ್, ದವಲ್ ಕುಲ್ಕರ್ಣಿ ಯಂತಹ ಉತ್ತಮ ದಾಳಿಕಾರರಿದ್ದರು ಜಯದ ಸವಿ ಏಕೆ ಲಭಿಸಿಲ್ಲ ಎಂಬ ಚಿಂತೆ ರಾಜಸ್ಥಾನ ತಂಡಕ್ಕೆ ಕಾಡುತ್ತಿದೆ.

ಆರ್‌ಸಿಬಿಗೆ ಹೋಲಿಕೆ ಮಾಡಿದರೆ ರಾಜಸ್ಥಾನ ಮೇಲ್ನೋಟಕ್ಕೆ ಬಲಿಷ್ಠ ತಂಡದಂತೆ ಕಾಣುತ್ತಿದೆ. ಈ ಆವೃತ್ತಿಯಲ್ಲಿ ಇನ್ನೂ ಒಂದು ಪಂದ್ಯ ಜಯಿಸದ ಆರ್’ಸಿಬಿ ಹಾಗೂ ರಾಜಸ್ಥಾನ ಮುಖಾಮುಖಿಯಾಗುತ್ತಿದ್ದು ಜಯ ಯಾರಿಗೆ ಒಲಿಯಲಿದೆ ಎಂಬುದನ್ನು ಕಾದುನೋಡಬೇಕಿದೆ. 

ಸ್ಥಳ: ಜೈಪುರ

ಆರಂಭ: 08 ಗಂಟೆಗೆ

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್