ಪೊಲೀಸ್ ಹುದ್ದೆ ಕಳೆದುಕೊಳ್ತಾರ ಮಹಿಳಾ ಕ್ರಿಕೆಟ್ ಆಟಗಾರ್ತಿ ಹರ್ಮನ್‌ಪ್ರೀತ್?
ವಿಶ್ವಕಪ್ ಟೂರ್ನಿಯಲ್ಲಿನ ಪ್ರದರ್ಶನಕ್ಕೆ ಪಂಜಾಬ್ ಸರ್ಕಾರ ಮಹಿಳಾ ಕ್ರಿಕೆಟ್ ಆಟಗಾರ್ತಿ ಹರ್ಮನ್‌ಪ್ರೀತ್ ಕೌರ್‌ಗೆ ಪೊಲೀಸ್ ಹುದ್ದೆ ನೀಡಿತ್ತು. ಆದರೆ ಇದೀಗ ಕೌರ್ ತಮ್ಮ ಡಿಎಸ್‌ಪಿ ಹುದ್ದೆ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಅಷ್ಟಕ್ಕೂ ನಡೆದಿದ್ದಾರು ಏನು?
ಪಂಜಾಬ್(ಜು.02): ಟೀಂ ಇಂಡಿಯಾ ಮಹಿಳಾ ನಾಯಕಿ ಹರ್ಮನ್‌ಪ್ರೀತ್ ಕೌರ್ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಹರ್ಮನ್‌ಪ್ರೀತ್ ಕೌರ್‌ಗೆ ಪಂಜಾಬ್ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಡಿಎಸ್‌ಪಿ ಹುದ್ದೆ ನೀಡಿತ್ತು.
ಸದ್ಯ ಟೀಂ ಇಂಡಿಯಾ ಟಿ20 ತಂಡದ ನಾಯಕಿಯಾಗಿರುವ ಹರ್ಮನ್‌ಪ್ರೀತ್ ಕೌರ್, ತನ್ನ ಡಿಎಸ್‌ಪಿ ಹುದ್ದೆ ಕಳೆದುಕೊಳ್ಳೋ ಭೀತಿಯಲ್ಲಿದ್ದಾರೆ. ಇದಕ್ಕೆ ಕಾರಣ ಹರ್ಮನ್‌ಪ್ರೀತ್ ಕೌರ್ ಅವರ ಪದವಿ ನಕಲಿ ಅನ್ನೋ ಆರೋಪ ಕೇಳಿಬಂದಿದೆ.
ಹರ್ಮನ್‌ಪ್ರೀತ್ ಕೌರ್‌ಗೆ ಪೊಲೀಸ್ ಹುದ್ದೆ ನೀಡಿದ ಬಳಿಕ, ಪಂಜಾಬ್ ಪೊಲೀಸ್ ಇಲಾಖೆ ಕೌರ್ ದಾಖಲೆಗಳನ್ನ ಪರಿಶೀಲನೆ ನಡೆಸಿತ್ತು. ಈ ವೇಳೆ ಹರ್ಮನ್‌ಪ್ರೀತ್ ನೀಡಿರುವ ಪದವಿ ಪ್ರಮಾಣ ಪತ್ರ ನಕಲಿ ಎಂದು ಬಹಿರಂಗವಾಗಿದೆ.
ಮೀರತ್‌ನ ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯದಲ್ಲಿ ಪದವಿ ಮಾಡಿರೋದಾಗಿ ಹರ್ಮನ್‌ಪ್ರೀತ್ ದಾಖಲೆ ನೀಡಿದ್ದರು. ಆದರೆ ಹರ್ಮನ್‌ಪ್ರೀತ್ ನೀಡಿರೋ ರಿಜಿಸ್ಟರ್ಡ್ ನಂಬರ್, ವರ್ಷ ಹಾಗೂ ಹೆಸರು ಯಾವುದೂ ಕೂಡ ಪರಿಶೀಲನೆ ವೇಳೆ ಕಂಡುಬಂದಿಲ್ಲ. ಹೀಗಾಗಿ ಇದೀಗ ಪೊಲೀಸ್ ಇಲಾಖೆ ಸುದೀರ್ಘ ವರದಿಯನ್ನ ಪಂಜಾಬ್ ಗೃಹ ಇಲಾಖೆಗೆ ಕಳುಹಿಸಿದೆ. ಇದೀಗ ಚೆಂಡು ಗೃಹ ಇಲಾಖೆಯಲ್ಲಿದೆ.