ಮೊಹಾಲಿ(ನ.29): ಭಾರತದ ಆಲ್ರೌಂಡರ್ ಆಟಗಾರ ಹಾರ್ದಿಕ್ ಪಾಂಡ್ಯ ನೆಟ್ ಅಭ್ಯಾಸದ ವೇಳೆ ಭುಜದ ನೋವಿಗೆ ತುತ್ತಾಗಿದ್ದಾರೆ. ಹೀಗಾಗಿ ಹಾರ್ದಿಕ್ ಕನಿಷ್ಠ 6 ವಾರಗಳ ಕಾಲ ಸ್ಪರ್ಧಾತ್ಮಕ ಕ್ರಿಕೆಟ್’ನಿಂದ ದೂರ ಉಳಿಯಲಿದ್ದಾರೆ.

ಹಾರ್ದಿಕ್ ಅವರ ಗಾಯದ ತೀವ್ರತೆ ಹೆಚ್ಚಿರುವುದರಿಂದ ಭುಜದ ಮೂಳೆ ಮುರಿದಿರುವ ಸಾಧ್ಯತೆಯಿದೆ ಎಂದು ತಂಡದ ಫಿಸಿಯೋ ಹೇಳಿದ್ದಾರೆ. ಹೀಗಾಗಿ ಮುಂದಿನ ಜನವರಿ 15ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಹಾರ್ದಿಕ್ ಅಲಭ್ಯವಾಗುವ ಸಾಧ್ಯತೆಯಿದೆ.

ಮೊಹಾಲಿಯಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಹಾರ್ದಿಕ್ ಅಭ್ಯಾಸ ನಡೆಸುವ ವೇಳೆ ತೀವ್ರ ಗಾಯಕ್ಕೆ ತುತ್ತಾಗಿದ್ದರು. ಹಾರ್ದಿಕ್ ಆದಷ್ಟು ಶೀಘ್ರದಲ್ಲಿ ಚೇತರಿಸಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.