2007ರ ಚೊಚ್ಚಲ ಟಿ20 ವಿಶ್ವಕಪ್ ಫೈನಲ್'ನಲ್ಲೂ ಪಾಕಿಸ್ತಾನದ ವಿರುದ್ಧ ಬಾರಿಸಿದ 75 ರನ್'ಗಳ ಇನಿಂಗ್ಸ್ ಟೀಂ ಇಂಡಿಯಾ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿದೆ ಎಂದರೆ ಅತಿಶಯೋಕ್ತಿಯಾಗಲಾರದು.

ಬೆಂಗಳೂರು(ಅ.14): ಟೀಂ ಇಂಡಿಯಾದ ಅನುಭವಿ ಆರಂಭಿಕ ಬ್ಯಾಟ್ಸ್'ಮನ್ ಗೌತಮ್ ಗಂಭೀರ್ ಇಂದು 36ನೇ ವಸಂತಕ್ಕೆ ಕಾಲಿರಿಸಿದ್ದಾರೆ.

2003ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್'ಗೆ ಪಾದಾರ್ಪಣೆ ಮಾಡಿದ ಡೆಲ್ಲಿ ಆಟಗಾರ, ಒಟ್ಟಾರೆ ಅಂತರಾಷ್ಟ್ರೀಯ ಕ್ರಿಕೆಟ್'ನಲ್ಲಿ 10 ಸಾವಿರಕ್ಕೂ ಅಧಿಕ ರನ್ ಕಲೆ ಹಾಕಿದ ಸಾಧನೆ ಮಾಡಿದ್ದಾರೆ. ಟೀಂ ಇಂಡಿಯಾದ ಸ್ಫೋಟಕ ಆರಂಭಿಕ ಬ್ಯಾಟ್ಸ್'ಮನ್ ವಿರೇಂದ್ರ ಸೆಹ್ವಾಗ್ ಅವರೊಂದಿಗೆ ಅನೇಕ ಸ್ಮರಣೀಯ ಇನಿಂಗ್ಸ್ ಕಟ್ಟಿದ ಕೀರ್ತಿ ಗಂಭೀರ್'ಗೆ ಸಲ್ಲುತ್ತದೆ. ಅದರಲ್ಲೂ 2011ರ ಏಕದಿನ ವಿಶ್ವಕಪ್ ಫೈನಲ್'ನಲ್ಲಿ ಬಾರಿಸಿದ 97 ರನ್ ಟೀಂ ಇಂಡಿಯಾ 28 ವರ್ಷಗಳ ಬಳಿಕ ವಿಶ್ವಕಪ್ ಗೆಲ್ಲುವಲ್ಲಿ ಸಹಕಾರಿಯಾಯಿತು. ಹಾಗೆಯೇ 2007ರ ಚೊಚ್ಚಲ ಟಿ20 ವಿಶ್ವಕಪ್ ಫೈನಲ್'ನಲ್ಲೂ ಪಾಕಿಸ್ತಾನದ ವಿರುದ್ಧ ಬಾರಿಸಿದ 75 ರನ್'ಗಳ ಇನಿಂಗ್ಸ್ ಟೀಂ ಇಂಡಿಯಾ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿದೆ ಎಂದರೆ ಅತಿಶಯೋಕ್ತಿಯಾಗಲಾರದು.

2011ರವರೆಗೂ ಯಶಸ್ವಿ ಆರಂಭಿಕ ಆಟಗಾರನಾಗಿ ಗುರುತಿಸಿಕೊಂಡಿದ್ದ ಗಂಭೀರ್ ಆ ಬಳಿಕ ಕಾರಣಾಂತರಗಳಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆ. ಇನ್ನೂ ಐಪಿಎಲ್'ನಲ್ಲೂ ತನ್ನದೇ ಆದ ಛಾಪು ಮೂಡಿಸಿರುವ ಗಂಭೀರ್ ಕೋಲ್ಕತಾ ನೈಟ್'ರೈಡರ್ಸ್ ತಂಡದ ನಾಯಕರಾಗಿ, ಎರಡು ಬಾರಿ ಕೆಕೆಆರ್ ತಂಡವನ್ನು ಚಾಂಪಿಯನ್ ಪಟ್ಟಕೇರಿಸಿದ್ದಾರೆ.

ಮೈದಾನದ ಹೊರಗೂ ಅನೇಕ ಸಾಮಾಜಿಕ ಕಳಕಳಿಯಿಂದ ಸೇವೆ ಸಲ್ಲಿಸುತ್ತಿರುವ ಗೌತಮ್ ಗಂಭೀರ್'ಗೆ ಸುವರ್ಣ ನ್ಯೂಸ್ ವೆಬ್'ಸೈಟ್ ಬಳಗದಿಂದ ಹುಟ್ಟುಹಬ್ಬದ ಶುಭಾಶಯಗಳು.

ಇನ್ನೂ ಕುತೂಹಲಕಾರಿ ಅಂಶವೆಂದರೆ, ಗಂಭೀರ್ ಜೊತೆಗೆ ಪಾಕಿಸ್ತಾನದ ವಿಕೆಟ್ ಕೀಪರ್ ಹಾಗೂ ನಾಯಕ ರಶೀದ್ ಲತೀಫ್, ಶ್ರೀಲಂಕಾ ಮಾಜಿ ಕ್ರಿಕೆಟಿಗ ತಿಲಕರತ್ನೆ ದಿಲ್ಸ್ಯಾನ್ ಹಾಗೂ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್'ಮನ್ ಗ್ಲೇನ್ ಮ್ಯಾಕ್ಸ್'ವೆಲ್ ಬರ್ತ್ ಡೇ ಆಚರಿಸಿಕೊಳ್ಳುತ್ತಿದ್ದಾರೆ.