ತಡರಾತ್ರಿ ನಡೆದ ಪುರುಷರ ಸಿಂಗಲ್ಸ್‌ನ ಫೈನಲ್ ಪಂದ್ಯದಲ್ಲಿ ಶ್ರೇಯಾಂಕ ರಹಿತ ರಾಮ್‌ಕುಮಾರ್, ಅಮೆರಿಕಾದ 3ನೇ ಶ್ರೇಯಾಂಕಿತ ಸ್ಟೀವ್ ಜಾನ್ಸನ್ ವಿರುದ್ಧ 7-5, 3-6, 6-2 ಸೆಟ್‌ಗಳಲ್ಲಿ ಸೋಲುಂಡರು. ಶನಿವಾರ ನಡೆದಿದ್ದ ಸೆಮೀಸ್‌ನಲ್ಲಿ ರಾಮ್‌ಕುಮಾರ್, ಅಮೆರಿಕದ ಟಿಮ್ ಸ್ಮೈಕ್ ಚೆಕ್‌ರನ್ನು ಮಣಿಸಿ, ಪ್ರಶಸ್ತಿ ಹಂತ ಪ್ರವೇಶಿಸಿದ್ದರು.

ನವದೆಹಲಿ(ಜು23]: ನ್ಯೂಪೋರ್ಟ್‌ನಲ್ಲಿ ಭಾನುವಾರ ಮುಕ್ತಾಯವಾದ ಹಾಲ್ ಆಫ್ ಫೇಮ್ ಓಪನ್ ಟೂರ್ನಿಯಲ್ಲಿ ಭಾರತದ ರಾಮ್’ಕುಮಾರ್ ರಾಮನಾಥನ್ ಸೋಲು ಕಾಣುವ ಮೂಲಕ ವೃತ್ತಿ ಜೀವನದ ಚೊಚ್ಚಲ ಸಿಂಗಲ್ಸ್ ಪ್ರಶಸ್ತಿಯಿಂದ ವಂಚಿತರಾಗಿದ್ದಾರೆ.

ತಡರಾತ್ರಿ ನಡೆದ ಪುರುಷರ ಸಿಂಗಲ್ಸ್‌ನ ಫೈನಲ್ ಪಂದ್ಯದಲ್ಲಿ ಶ್ರೇಯಾಂಕ ರಹಿತ ರಾಮ್‌ಕುಮಾರ್, ಅಮೆರಿಕಾದ 3ನೇ ಶ್ರೇಯಾಂಕಿತ ಸ್ಟೀವ್ ಜಾನ್ಸನ್ ವಿರುದ್ಧ 7-5, 3-6, 6-2 ಸೆಟ್‌ಗಳಲ್ಲಿ ಸೋಲುಂಡರು. ಶನಿವಾರ ನಡೆದಿದ್ದ ಸೆಮೀಸ್‌ನಲ್ಲಿ ರಾಮ್‌ಕುಮಾರ್, ಅಮೆರಿಕದ ಟಿಮ್ ಸ್ಮೈಕ್ ಚೆಕ್‌ರನ್ನು ಮಣಿಸಿ, ಪ್ರಶಸ್ತಿ ಹಂತ ಪ್ರವೇಶಿಸಿದ್ದರು.

ಪಂದ್ಯದ ಮೊದಲ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದ ರಾಮ್’ಕುಮಾರ್, 2ನೇ ಸೆಟ್‌ನಲ್ಲಿ ಅಮೆರಿಕ ಆಟಗಾರನಿಗೆ ತಿರುಗೇಟು ನೀಡಿದರು. ಆದರೆ ನಿರ್ಣಾಯಕ 3ನೇ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದ ರಾಮ್‌ಕುಮಾರ್ 4 ಅಂಕಗಳ ಅಂತರದಲ್ಲಿ ಪಂದ್ಯವನ್ನು ಕೈ ಚೆಲ್ಲಿದರು. ಸುಮಾರು 7 ವರ್ಷಗಳ ಬಳಿಕ ಎಟಿಪಿ ಟೂರ್ನಿಯೊಂದರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಟೆನಿಸಿಗ ಎಂಬ ಹೆಗ್ಗಳಿಕೆಗೆ ರಾಮ್‌ಕುಮಾರ್ ಪಾತ್ರರಾಗಿದ್ದರು. 

2011ರ ಜೋಹಾನ್ಸ್ ಬರ್ಗ್ ಎಟಿಪಿ ಟೂರ್ನಿಯಲ್ಲಿ ಭಾರತದ ಸೋಮದೇವ್ ದೇವ್‌ವರ್ಮನ್ ಫೈನಲ್‌ನಲ್ಲಿ, ಕೆವಿನ್ ಆ್ಯಂಡರ್ಸನ್ ವಿರುದ್ಧ ಸೋತು ರನ್ನರ್ ಅಪ್ ಆಗಿದ್ದರು. 161ನೇ ರ‍್ಯಾಂಕ್ ಹೊಂದಿರುವ ರಾಮ್’ಕುಮಾರ್‌ಗೆ ಇದು ಟೆನಿಸ್ ಸಿಂಗಲ್ಸ್ ವೃತ್ತಿ ಜೀವನದಲ್ಲಿ ಮೊದಲ ಫೈನಲ್ ಆಗಿತ್ತು. ಒಂದು ವೇಳೆ ರಾಮ್‌ಕುಮಾರ್ ಈ ಪ್ರಶಸ್ತಿಯನ್ನು ಗೆದ್ದಿದ್ದರೆ, 20 ವರ್ಷಗಳ ಬಳಿಕ ಎಟಿಪಿ ವರ್ಲ್ಡ್ ಟೂರ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಟೆನಿಸಿಗ ಎನಿಸಿಕೊಳ್ಳಲಿದ್ದರು. ಈ ಮೊದಲು ಲಿಯಾಂಡರ್ ಪೇಸ್ 1998ರಲ್ಲಿ ಹಾಲ್ ಆಫ್ ಫೇಮ್ ಪ್ರಶಸ್ತಿ ಜಯಿಸಿದ್ದರು.