ಗುಜರಾತ್ ಪರ ರೋಹಿತ್ ಗುಲಿಯಾ 9 ಅಂಕ ಪಡೆದರೆ, ಸಚಿನ್ 8 ಅಂಕ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಅಹಮದಾಬಾದ್(ಆ.11): ರೈಡಿಂಗ್ ಹಾಗೂ ರಕ್ಷಣಾ ವಿಭಾಗದಲ್ಲಿ ಸಂಘಟಿತ ಪ್ರದರ್ಶನ ತೋರಿದ ಸುಕೇಶ್ ಹೆಗ್ಡೆ ನೇತೃತ್ವದ ಗುಜರಾತ್ ಫಾರ್ಚೂನ್‌'ಜೈಂಟ್ಸ್ ತವರಿನಲ್ಲಿ ಭರ್ಜರಿಯಾಗಿ ಶುಭಾರಂಭ ಮಾಡಿದೆ. ತವರಿನ ಪ್ರೇಕ್ಷಕರೆದುರು ವಿಜೃಂಭಿಸಿದ ಫಾರ್ಚೂನ್'ಜೈಂಟ್ಸ್ 39-21 ಅಂಕಗಳಿಂದ ಯು ಮುಂಬಾ ಎದುರು ಜಯ ಸಾಧಿಸಿದ್ದು ಮಾತ್ರವಲ್ಲದೇ ಬೋನಸ್ ಅಂಕವನ್ನು ತನ್ನ ಮಡಿಲಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಪ್ರೊ ಕಬಡ್ಡಿ 5ನೇ ಆವೃತ್ತಿ ಅಹಮದಾಬಾದ್ ಚರಣಕ್ಕೆ ಬಾಲಿವುಡ್ ನಟ ಆಯುಷ್ಮಾನ್ ಖುರಾನ್ ರಾಷ್ಟ್ರಗೀತೆ ಹಾಡುವ ಮೂಲಕ ಅಧಿಕೃತ ಚಾಲನೆ ನೀಡಿದರು.

ಮೊದಲಾರ್ಧದ 2ನೇ ನಿಮಿಷದಲ್ಲಿ ಸುಕೇಶ್ ಜೈಂಟ್ಸ್‌'ಗೆ ಮೊದಲ ಅಂಕ ತಂದುಕೊಟ್ಟರು. ಮಾಡು ಇಲ್ಲವೇ ಮಡಿ ರೈಡ್'ನಲ್ಲಿ ಅಂಕ ಗಳಿಸಲು ವಿಫಲರಾದ ನಿತಿನ್ ಮದನೆ ಗುಜರಾತ್‌'ಗೆ ಮತ್ತೊಂದು ಅಂಕ ಬಿಟ್ಟುಕೊಟ್ಟರು. ಫಾರ್ಚೂನ್'ಜೈಂಟ್ಸ್ ಸಂಘಟಿತ ಪ್ರದರ್ಶನದ ಪರವಾಗಿ 7ನೇ ನಿಮಿಷದಲ್ಲಿ ಮುಂಬಾ ಆಲೌಟ್ ಆಯಿತು.

19ನೇ ನಿಮಿಷದಲ್ಲಿ ಕಾಶಿಲಿಂಗ್ ಅಡಕೆ ಅವರನ್ನು ಟ್ಯಾಕಲ್ ಮಾಡುವುದರೊಂದಿಗೆ ಗುಜರಾತ್ ಮುಂಬಾವನ್ನು 2ನೇ ಬಾರಿಗೆ ಆಲೌಟ್ ಮಾಡಿತು. ಮೊದಲಾರ್ಧದಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದ ಗುಜರಾತ್ 20-6 ಅಂಕಗಳ ಅಂತರದಲ್ಲಿ ಮುನ್ನಡೆ ಪಡೆಯಿತು.

ದ್ವಿತೀಯಾರ್ಧದಲ್ಲೂ ಮತ್ತೆ ಪ್ರಾಬಲ್ಯ ಮೆರೆದ ಸುಕೇಶ್ ಪಡೆ ಪಂದ್ಯ ಮುಕ್ತಾಯಕ್ಕೆ ಇನ್ನೆರಡು ನಿಮಿಷಗಳು ಬಾಕಿಯಿರುವಾಗ ಅನೂಪ್ ಪಡೆಯನ್ನು 3ನೇ ಬಾರಿಗೆ ಆಲೌಟ್ ಮಾಡಿತು. ಅಂತಿಮವಾಗಿ 18 ಅಂಕಗಳ ಭಾರಿ ಅಂತರದಲ್ಲಿ ಗುಜರಾತ್ ಗೆಲುವು ಪಡೆಯಿತು.

ಗುಜರಾತ್ ಪರ ರೋಹಿತ್ ಗುಲಿಯಾ 9 ಅಂಕ ಪಡೆದರೆ, ಸಚಿನ್ 8 ಅಂಕ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇನ್ನು ಯು ಮುಂಬಾ ಪರ ಕುಲ್ದೀಪ್ ಸಿಂಗ್, ಅನೂಪ್ ಕುಮಾರ್ ಹಾಗೂ ಕಾಶಿಲಿಂಗ್ ಅಡಿಕೆ ತಲಾ 4 ಅಂಕಗಳನ್ನು ಗಳಿಸಿದರು.