ದೆಹಲಿ[ಜೂ.17]: ‘ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ)ಯು ಆಫ್ಘಾನಿಸ್ತಾನ ತಂಡಕ್ಕೆ ಟೆಸ್ಟ್‌ಗೆ ಮಾನ್ಯತೆ ನೀಡಿದ್ದು ಆತುರದ ನಿರ್ಧಾರವಾಗಿದೆ’ ಎಂದು ಭಾರತ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅಭಿಪ್ರಾಯಪಟ್ಟಿದ್ದಾರೆ. 

‘ಆಫ್ಘಾನಿಸ್ತಾನ ಉತ್ತಮ ತಂಡವಾಗಿದೆ. ಆದರೆ ಟೆಸ್ಟ್ ಪಂದ್ಯವನ್ನಾಡುವುದಕ್ಕೂ ಮತ್ತು ಏಕದಿನ ಪಂದ್ಯವನ್ನಾಡುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ. ವಿಶ್ವದ ನಂ.1 ಭಾರತ ತಂಡದ ಎದುರು ದಿನವೊಂದರಲ್ಲೇ 2 ಬಾರಿ ಆಲೌಟ್ ಆಗಿ ಹೀನಾಯ ಸೋಲುಂಡು ಮುಜುಗರ ಅನುಭವಿಸಿತು. ಹೀಗಾಗಿ ಆಫ್ಘನ್ ತಂಡ ಟೆಸ್ಟ್ ಕ್ರಿಕೆಟ್‌ಗೆ ಕಾಲಿಡಲು ಇನ್ನಷ್ಟು ಸಮಯಾವಕಾಶ ನೀಡಬೇಕಿತ್ತು’ ಎಂದು ಅಜರುದ್ದೀನ್ ಹೇಳಿದ್ದಾರೆ.

ಇದನ್ನು ಓದಿ: ಟೀಮ್ ಇಂಡಿಯಾದಿಂದ ಇಬ್ಬರು ಆಟಗಾರರನ್ನು ಕೈಬಿಡಲು ಅಜರುದ್ದೀನ್ ಸಲಹೆ

ಇನ್ನು ಬಿಸಿಸಿಐನ ಹಂಗಾಮಿ ಅಧ್ಯಕ್ಷ ಸಿ.ಕೆ ಖನ್ನಾ ಆಫ್ಘಾನಿಸ್ತಾನ ತಂಡದ ಪ್ರದರ್ಶನವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಆಫ್ಘಾನ್ ತಂಡವು ಇಡೀ ದೇಶವೇ ಹೆಮ್ಮೆ ಪಡುವಂತೆ ಆಡಿದೆ. ಅವರು ತಮ್ಮ ಪ್ರದರ್ಶನಕ್ಕೆ ತಕ್ಕಂತೆ ಆಡಿದ್ದಾರೆ. ಒಂದೇ ದಿನದಲ್ಲಿ ಎರಡು ಬಾರಿ ಆಲೌಟ್ ಆಗಿರುವುದು ಇದೇ ಮೊದಲೇನಲ್ಲ. ಚೊಚ್ಚಲ ಟೆಸ್ಟ್’ನಲ್ಲಿ ಕನಿಷ್ಠ ಸ್ಕೋರ್ ದಾಖಲಾಗಿದ್ದು ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ. ನನಗೆ ಗೊತ್ತಿರುವ ಹಾಗೆ ದಕ್ಷಿಣ ಆಫ್ರಿಕಾ ತನ್ನ ಚೊಚ್ಚಲ ಪಂದ್ಯದಲ್ಲಿ ಕೇವಲ 84 ರನ್ ಬಾರಿಸಿತ್ತು. ಹೀಗಿರುವಾಗ ಆಫ್ಘಾನ್ ನಿರಾಸೆ ಮೂಡಿಸಿದೆ ಎಂಬ ಮಾತಿನಲ್ಲಿ ಅರ್ಥವಿಲ್ಲ ಎಂದು ಖನ್ನಾ ಅಭಿಪ್ರಾಯಪಟ್ಟಿದ್ದಾರೆ.