ಕೇಂದ್ರ ಗುತ್ತಿಗೆ ಹೊಂದಿರುವ ಆಟಗಾರರಿಗೆ ಬಿಸಿಸಿಐ ಸದ್ಯ ಮೂರು ಮಾದರಿಯಲ್ಲಿ ವಾರ್ಷಿಕ ವೇತನ ಪಾವತಿಸುತ್ತಿದೆ. ‘ಎ’ ದರ್ಜೆ ಕ್ರಿಕೆಟಿಗರಿಗೆ ಅತಿಹೆಚ್ಚು ಅಂದರೆ ವರ್ಷಕ್ಕೆ ₹2 ಕೋಟಿ ನಿಗದಿಪಡಿಸಿದೆ. ಈ ಮೊತ್ತವನ್ನು ₹12 ಕೋಟಿಗೆ ಏರಿಸಲು ಸುಪ್ರೀಂ ಕೋರ್ಟ್ ನೇಮಿತ ಆಡಳಿತ ಸಮಿತಿ ಚಿಂತನೆ ನಡೆಸಿದೆ ಎನ್ನಲಾಗಿದೆ.
ಮುಂಬೈ(ಡಿ.05): ಬಿಸಿಸಿಐ ಹಲವು ವರ್ಷಗಳಿಂದ ವಿಶ್ವದ ಶ್ರೀಮಂತ ಕ್ರಿಕೆಟ್ ಬೋರ್ಡ್ ಎಂದು ಕರೆಸಿಕೊಳ್ಳುತ್ತಿದೆ, ಅದೇ ರೀತಿ ವಿರಾಟ್ ಕೊಹ್ಲಿ ಹಾಗೂ ತಂಡ ಕೆಲವೇ ದಿನಗಳಲ್ಲಿ ವಿಶ್ವದ ಶ್ರೀಮಂತ ಕ್ರಿಕೆಟಿಗರು ಎಂದು ಕರೆಸಿಕೊಂಡರೆ ಆಶ್ಚರ್ಯವಿಲ್ಲ.
ನ.30ರಂದು ಕೊಹ್ಲಿ, ಧೋನಿ ಹಾಗೂ ಕೋಚ್ ಶಾಸ್ತ್ರಿ ನವದೆಹಲಿಯಲ್ಲಿ ಬಿಸಿಸಿಐ ಆಡಳಿತ ಸಮಿತಿಯನ್ನು ಭೇಟಿ ಮಾಡಿ ವೇತನ ಹೆಚ್ಚಳದ ಕುರಿತು ಮಾತುಕತೆ ನಡೆಸಿದ್ದು, 4 ಗಂಟೆಗೂ ಅಧಿಕ ಕಾಲ ನಡೆದ ಸಭೆಯಲ್ಲಿ ವೇತನ ಹೆಚ್ಚಳಕ್ಕೆ ಆಡಳಿತ ಸಮಿತಿಯನ್ನು ಒಪ್ಪಿಸುವಲ್ಲಿ ಭಾರತ ಕ್ರಿಕೆಟ್ ತಂಡದ ಆಡಳಿತ ಯಶಸ್ವಿಯಾಗಿತ್ತು.
ಅಗ್ರ ಆಟಗಾರರ ವೇತನ ₹10 ಕೋಟಿ ಹೆಚ್ಚಳ?:
ಕೇಂದ್ರ ಗುತ್ತಿಗೆ ಹೊಂದಿರುವ ಆಟಗಾರರಿಗೆ ಬಿಸಿಸಿಐ ಸದ್ಯ ಮೂರು ಮಾದರಿಯಲ್ಲಿ ವಾರ್ಷಿಕ ವೇತನ ಪಾವತಿಸುತ್ತಿದೆ. ‘ಎ’ ದರ್ಜೆ ಕ್ರಿಕೆಟಿಗರಿಗೆ ಅತಿಹೆಚ್ಚು ಅಂದರೆ ವರ್ಷಕ್ಕೆ ₹2 ಕೋಟಿ ನಿಗದಿಪಡಿಸಿದೆ. ಈ ಮೊತ್ತವನ್ನು ₹12 ಕೋಟಿಗೆ ಏರಿಸಲು ಸುಪ್ರೀಂ ಕೋರ್ಟ್ ನೇಮಿತ ಆಡಳಿತ ಸಮಿತಿ ಚಿಂತನೆ ನಡೆಸಿದೆ ಎನ್ನಲಾಗಿದೆ. ಅಲ್ಲದೇ ನಾಯಕನಿಗೆ ಹೆಚ್ಚುವರಿ ವೇತನ ನೀಡುವ ಬಗ್ಗೆಯೂ ಚರ್ಚೆ ನಡೆದಿದೆ ಹೇಳಲಾಗಿದೆ. ಅದೇ ರೀತಿ, ವಾರ್ಷಿಕ ₹1 ಕೋಟಿ ಪಡೆಯುತ್ತಿರುವ ‘ಬಿ’ ದರ್ಜೆ ಕ್ರಿಕೆಟಿಗರ ವೇತನವನ್ನು ₹8 ಕೋಟಿಗೆ, ₹50 ಲಕ್ಷ ಪಡೆಯುತ್ತಿರುವ ‘ಸಿ’ ದರ್ಜೆ ಕ್ರಿಕೆಟಿಗರ ವೇತನವನ್ನು ₹4 ಕೋಟಿಗೆ ಏರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ವೇತನ ಹೆಚ್ಚಳ ಆಗ್ರಹಕ್ಕೆ ಕಾರಣವೇನು?:
ಭಾರತೀಯ ಕ್ರಿಕೆಟಿಗರು ಐಪಿಎಲ್, ಜಾಹೀರಾತು ಒಪ್ಪಂದಗಳಿಂದ ವಿಶ್ವದ ಇತರೆ ರಾಷ್ಟ್ರದ ಆಟಗಾರರಿಗೆ ಹೋಲಿಸಿದರೆ ಹೆಚ್ಚು ಹಣ ಸಂಪಾದಿಸುತ್ತಿದ್ದರೂ, ವೇತನ ರೂಪದಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಗ್ ಆಟಗಾರರಿಗಿಂತ ಕಡಿಮೆ ಹಣ ಪಡೆದುಕೊಳ್ಳುತ್ತಿದ್ದಾರೆ. ಉದಾಹರಣೆಗೆ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್, ಕ್ರಿಕೆಟ್ ಆಸ್ಟ್ರೇಲಿಯಾದಿಂದ ವರ್ಷಕ್ಕೆ 2 ಮಿಲಿಯನ್
ಆಸ್ಟ್ರೇಲಿಯನ್ ಡಾಲರ್ (ಅಂದಾಜು ₹12 ಕೋಟಿ) ವೇತನ ಪಡೆಯಲಿದ್ದಾರೆ. ಅದೇ ರೀತಿ ಇಂಗ್ಲೆಂಡ್ ನಾಯಕ ಜೋ ರೂಟ್ ವಾರ್ಷಿಕ ವೇತನ ಸಹ ಸ್ಮಿತ್'ರಷ್ಟೇ ಇದೆ ಎನ್ನಲಾಗಿದೆ. ವಿಶ್ವ ಕ್ರಿಕೆಟ್'ನಲ್ಲಿ ಪ್ರಾಬಲ್ಯ ಮೆರೆಯುತ್ತಿರುವ ಭಾರತೀಯ ಆಟಗಾರರು ಸಹ ಇನ್ನುಳಿದ ಅಗ್ರ ತಂಡಗಳ ಆಟಗಾರರಷ್ಟೇ ವೇತನ ಪಡೆಯಬೇಕು ಎನ್ನುವುದು ಕೊಹ್ಲಿ ಹಾಗೂ ತಂಡದ ವಾದವಾಗಿದೆ.
ಕೇವಲ ಅಂತಾರಾಷ್ಟ್ರೀಯ ಆಟಗಾರರಷ್ಟೇ ಅಲ್ಲ, ದೇಸಿ ಕ್ರಿಕೆಟಿಗರ ವೇತನ ಸಹ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.
