ಗುಡ್ ಬೈ 2018: ವಿದಾಯ ಹೇಳಿ ಅಭಿಮಾನಿಗಳಿಗೆ ಶಾಕ್ ನೀಡಿದ ಕ್ರಿಕೆಟ್ ದಿಗ್ಗಜರು
ಪ್ರತಿಯೊಬ್ಬ ಕ್ರಿಕೆಟಿಗ ಒಂದಲ್ಲಾ ಒಂದು ದಿನ ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿಯಾಗಲೇಬೇಕು. ಆದರೆ ದಶಕಗಳ ಕಾಲ ಅಭಿಮಾನಿಗಳನ್ನು ರಂಜಿಸಿ ದಿಢೀರ್ ಆಗಿ ಕೆಲವು ಆಟಗಾರರು ಕ್ರಿಕೆಟ್’ಗೆ ಗುಡ್’ಬೈ ಹೇಳಿದ್ದಾರೆ. 2018ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಗುಡ್’ಬೈ ಹೇಳಿದ ಆಟಗಾರರ ಪಟ್ಟಿಯನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.
1.ಎಬಿ ಡಿವಿಲಿಯರ್ಸ್: ನಿವೃತ್ತಿ- ಮೇ 24, 2018
2018ರಲ್ಲಿ ನಿವೃತ್ತಿ ಘೋಷಿಸಿದ ಪ್ರಮುಖ ಕ್ರಿಕೆಟಿಗರಲ್ಲಿ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಆಧುನಿಕ ಕ್ರಿಕೆಟ್’ನ ಸೂಪರ್ ಸ್ಟಾರ್ ಬ್ಯಾಟ್ಸ್’ಮನ್ ಎನಿಸಿಕೊಂಡಿದ್ದ ಎಬಿಡಿಗೆ ಭಾರತದಲ್ಲೂ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ನಾಯಕನಾಗಿ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಿದ್ದ ಎಬಿಡಿ, 2019ರ ವಿಶ್ವಕಪ್’ನಲ್ಲೂ ದಕ್ಷಿಣ ಆಫ್ರಿಕಾ ಪರ ಮಿಂಚಲಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ ದಿಢೀರ್ ನಿವೃತ್ತಿ ಅಭಿಮಾನಿಗಳಿಗೆ ಶಾಕ್ ಆಗಿದ್ದಂತೂ ಸುಳ್ಳಲ್ಲ
2.ಗೌತಮ್ ಗಂಭೀರ್: ನಿವೃತ್ತಿ-ಡಿಸೆಂಬರ್ 4, 2018
ಟೀಂ ಇಂಡಿಯಾದ ವಿಶ್ವಕಪ್ ಹೀರೋ ಗೌತಮ್ ಗಂಭೀರ್ ಡಿಸೆಂಬರ್ ತಿಂಗಳ ಆರಂಭದಲ್ಲೇ ಕ್ರಿಕೆಟ್’ಗೆ ಗುಡ್’ಬೈ ಹೇಳಿದ್ದಾರೆ. 2007ರ ಟಿ20 ವಿಶ್ವಕಪ್[75] ಹಾಗೂ 2011ರ ಏಕದಿನ ವಿಶ್ವಕಪ್[97] ಫೈನಲ್’ನಲ್ಲಿ ಗರಿಷ್ಠ ರನ್ ಸಿಡಿಸಿ ಟೀಂ ಇಂಡಿಯಾ ಚಾಂಪಿಯನ್ ಆಗುವಲ್ಲಿ ಗೌತಮ್ ಗಂಭೀರ್ ಪ್ರಮುಖ ಪಾತ್ರವಹಿಸಿದ್ದರು. 2012ರ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್’ನಿಂದ ದೂರು ಉಳಿದಿದ್ದ ಗಂಭೀರ್, ಐಪಿಎಲ್’ನಲ್ಲಿ ಕೆಕೆಆರ್ ತಂಡವನ್ನು 2 ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದರು.
3.ಡ್ವೇನ್ ಬ್ರಾವೋ: ನಿವೃತ್ತಿ- ಅಕ್ಟೋಬರ್ 24, 2018
ವೆಸ್ಟ್ ಕ್ರಿಕೆಟ್ ಕಂಡ ಖ್ಯಾತ ಆಲ್ರೌಂಡರ್’ಗಳಲ್ಲಿ ಡ್ವೇನ್ ಬ್ರಾವೋ ಕೂಡಾ ಒಬ್ಬರು. ಐಪಿಎಲ್ ಮೂಲಕ ಭಾರತದಲ್ಲೂ ಸಂಚಲನ ಮೂಡಿಸಿದ್ದ ಬ್ರಾವೋ ತಮ್ಮ ವಿಚಿತ್ರ ಡ್ಯಾನ್ಸ್’ಗಳ ಮೂಲಕ ಅಭಿಮಾನಿಗಳ ಮನಸೂರೆಗೊಂಡಿದ್ದಾರೆ. ’ಚಾಂಪಿಯನ್’ ಸಾಂಗ್ ಮೂಲಕ ಮಿಂಚಿದ್ದ ಬ್ರಾವೋ, ವೆಸ್ಟ್ ಇಂಡೀಸ್ 2 ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇನ್ನು ವಿಂಡೀಸ್ ಮಂಡಳಿಯ ತಿಕ್ಕಾಟದಿಂದಾಗಿ ಆಯ್ಕೆ ಸಮಿತಿಯ ಕೆಂಗಣ್ಣಿಗೂ ಬ್ರಾವೋ ಗುರಿಯಾಗಿದ್ದರು.
4. ಮುನಾಫ್ ಪಟೇಲ್: ನಿವೃತ್ತಿ- ನವೆಂಬರ್ 10
’ಬರೋಚ್ ಎಕ್ಸ್’ಪ್ರೆಸ್’ ಖ್ಯಾತಿಯ 2011ರ ವಿಶ್ವಕಪ್ ಹೀರೋ ಮುನಾಫ್ ಪಟೇಲ್ ಅಂತರಾಷ್ಟ್ರೀಯ ಕ್ರಿಕೆಟ್’ಗೆ ನವೆಂಬರ್’ನಲ್ಲಿ ಗುಡ್’ಬೈ ಹೇಳಿದ್ದರು. ಈ ಮೂಲಕ 15 ವರ್ಷಗಳ ತಮ್ಮ ಸ್ಪರ್ಧಾತ್ಮಕ ಕ್ರಿಕೆಟ್’ನಿಂದ ನಿವೃತ್ತಿ ಪಡೆದರು. ನಿವೃತ್ತಿ ಬಳಿಕ ಕೋಚ್ ಆಗಿ ಕಾರ್ಯನಿರ್ವಹಿಸುವ ಇರಾದೆ ವ್ಯಕ್ತಪಡಿಸಿದ್ದಾರೆ ಮುನಾಫ್.
5.ಆಲಿಸ್ಟರ್ ಕುಕ್: ನಿವೃತ್ತಿ- ಸೆಪ್ಟೆಂಬರ್ 3, 2018
ಇಂಗ್ಲೆಂಡ್ ತಂಡ ಕಂಡ ಶ್ರೇಷ್ಠ ನಾಯಕರಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವ ಹೆಸರು ಅಲಿಸ್ಟರ್ ಕುಕ್. ಇಂಗ್ಲೆಂಡ್ ತಂಡದ ಯಶಸ್ವಿ ನಾಯಕ ಹಾಗೂ ಟೆಸ್ಟ್ ಕ್ರಿಕೆಟ್’ನಲ್ಲಿ ಗರಿಷ್ಠ ರನ್ ಸಿಡಿಸಿದ ಬ್ಯಾಟ್ಸ್’ಮನ್ ಎನ್ನುವ ಶ್ರೇಯವೂ ಕುಕ್ ಹೆಸರಿನಲ್ಲಿದೆ. 2006ರಲ್ಲಿ ಭಾರತದ ವಿರುದ್ಧವೇ ಪದಾರ್ಪಣೆ ಮಾಡಿದ್ದ ಕುಕ್ ಭಾರತದ ವಿರುದ್ಧವೇ ವಿದಾಯದ ಪಂದ್ಯದಲ್ಲಿ ಶತಕ ಸಿಡಿಸಿ ಕ್ರಿಕೆಟ್’ಗೆ ಗುಡ್’ಬೈ ಹೇಳಿದ್ದರು. ಈ ಮೂಲಕ ಪದಾರ್ಪಣೆ ಹಾಗೂ ವಿದಾಯದ ಪಂದ್ಯದಲ್ಲಿ ಶತಕ ಸಿಡಿಸಿದ ಕ್ರಿಕೆಟಿಗ, ಟೆಸ್ಟ್ ಕ್ರಿಕೆಟ್’ನಲ್ಲಿ ಗರಿಷ್ಠ ರನ್ ಸಿಡಿಸಿದ ಎಡಗೈ ಬ್ಯಾಟ್ಸ್’ಮನ್ ಎಂಬ ದಾಖಲೆ ಕುಕ್[12472] ಹೆಸರಿನಲ್ಲಿದೆ.
ಇನ್ನುಳಿದಂತೆ ಶ್ರೀಲಂಕಾದ ದಿಗ್ಗಜ ಎಡಗೈ ಸ್ಪಿನ್ನರ್ ರಂಗನಾ ಹೆರಾತ್, ಭಾರತದ ಮಧ್ಯಮ ವೇಗಿಗಳಾದ ಪ್ರವೀಣ್ ಕುಮಾರ್, ಆರ್’ಪಿ ಸಿಂಗ್, ಮಧ್ಯಮ ಕ್ರಮಾಂಕದ ಬ್ಯಾಟ್ಸ್’ಮನ್ ಮೊಹಮ್ಮದ್ ಕೈಫ್, ಎಸ್. ಸುಬ್ರಮಣಿಯನ್, ಇಂಗ್ಲೆಂಡ್ ತಂಡದ ಜೋನಾಥನ್ ಟ್ರಾಟ್, ನ್ಯೂಜಿಲೆಂಡ್’ನ ಗ್ರ್ಯಾಂಟ್ ಏಲಿಯಟ್, ಆಸಿಸ್ ವೇಗಿ, ಮಾರ್ನೆ ಮಾರ್ಕೆಲ್[F-28] ಡಗ್ ಬೊಲಿಂಜರ್ ಮುಂತಾದ ಕ್ರಿಕೆಟಿಗರು 2018ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ಗೆ ವಿದಾಯ ಹೇಳಿದ್ದಾರೆ.