ಕರ್ನಾಟಕದ ವಿರುದ್ಧ ಪರಿಣಾಮಕಾರಿ ಬೌಲಿಂಗ್ ಪ್ರದರ್ಶನ ನೀಡಿದ ಒಡಿಶಾ ಕೂಡ ಆರಂಭಿಕ ಆಘಾತಕ್ಕೆ ಸಿಲುಕಿದೆ. ಈ ನಿಟ್ಟಿನಲ್ಲಿ ಕರ್ನಾಟಕದಿಂದ ತಿರುಗೇಟು ನೀಡುವ ಕಾಯಕ ಶುರುವಾಗಿದೆ.

ನವದೆಹಲಿ(ನ.21): ಈ ಋತುವಿನ ರಣಜಿ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಬ್ಯಾಟಿಂಗ್‌'ನಲ್ಲಿ ವೈಫಲ್ಯ ಅನುಭವಿಸಿರುವ ಕರ್ನಾಟಕ ತಂಡ, ಒಡಿಶಾ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ ಇನ್ನೂರರ ಗಡಿ ದಾಟಲೂ ವಿಫಲವಾಗಿದೆ.

ಆದರೆ, ಮೇಲಿನ ಕ್ರಮಾಂಕದಲ್ಲಿನ ಅಸ್ಥಿರ ಬ್ಯಾಟಿಂಗ್ ಪ್ರದರ್ಶನದ ಮಧ್ಯೆಯೂ ಮಧ್ಯಮ ಕ್ರಮಾಂಕದಲ್ಲಿ ವಿಕೆಟ್‌ಕೀಪರ್ ಸಿ.ಎಂ. ಗೌತಮ್ (54: 84 ಎಸೆತ, 8 ಬೌಂಡರಿ) ಗಳಿಸಿದ ಉಪಯುಕ್ತ ಅರ್ಧಶತಕದ ನೆರವಿನಿಂದ ಕರ್ನಾಟಕ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 66.2 ಓವರ್‌ಗಳಲ್ಲಿ 179 ರನ್ ಗಳಿಸುವಲ್ಲಿ ಯಶ ಕಂಡಿತು.

ವಿನಯ್ ಪಡೆಗೆ ಅಗ್ನಿಪರೀಕ್ಷೆ

ಇತ್ತ ಕರ್ನಾಟಕದ ವಿರುದ್ಧ ಪರಿಣಾಮಕಾರಿ ಬೌಲಿಂಗ್ ಪ್ರದರ್ಶನ ನೀಡಿದ ಒಡಿಶಾ ಕೂಡ ಆರಂಭಿಕ ಆಘಾತಕ್ಕೆ ಸಿಲುಕಿದೆ. ಈ ನಿಟ್ಟಿನಲ್ಲಿ ಕರ್ನಾಟಕದಿಂದ ತಿರುಗೇಟು ನೀಡುವ ಕಾಯಕ ಶುರುವಾಗಿದೆ. ಮೊದಲ ದಿನದಾಟದ ಅಂತ್ಯಕ್ಕೆ ಗೋವಿಂದ ಪೊದ್ದರ್ ಸಾರಥ್ಯದ ಒಡಿಶಾ ತಂಡ, 18 ಓವರ್‌ಗಳಲ್ಲಿ 2 ವಿಕೆಟ್‌ಗೆ 42 ರನ್ ಗಳಿಸಿ ಇನ್ನೂ 137 ರನ್ ಹಿನ್ನಡೆಯಲ್ಲಿದೆ. ನಾಯಕ ವಿನಯ್ ಕುಮಾರ್ ಸಾರಥ್ಯದ ಬೌಲಿಂಗ್ ಪಡೆಗೆ ಈಗ ನಿಜವಾದ ಅಗ್ನಿಪರೀಕ್ಷೆ ಎದುರಾಗಿದೆ.

ಆರಂಭಿಕ ಸಂದೀಪ್ ಪಟ್ನಾಯಕ್ (18) ವೇಗಿ ಎಸ್. ಅರವಿಂದ್ ದಾಳಿಯಲ್ಲಿ ಆರ್. ಸಮರ್ಥ್‌ಗೆ ಕ್ಯಾಚಿತ್ತು ಕ್ರೀಸ್ ತೊರೆದರೆ, ಮತ್ತೋರ್ವ ಆರಂಭಿಕ ರಂಜಿತ್ ಸಿಂಗ್ (6) ರೋನಿತ್ ಮೋರೆ ಅವರ ಚುರುಕುತನದ ಫೀಲ್ಡಿಂಗ್‌ನಿಂದ ರನೌಟ್ ಆಗಿ ಕ್ರೀಸ್ ತೊರೆದರು. ನಾಯಕ ಗೋವಿಂದ ಪೊದ್ದರ್ 16 ರನ್ ಗಳಿಸಿದ್ದು, 6 ಎಸೆತಗಳಿಂದ ಇನ್ನೂ ರನ್ ಖಾತೆ ತೆರೆಯದ ಮೀರಜ್ ಸಿಂಗ್ ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಗೌತಮ್ ಆಸರೆ

ಬೆಳಗ್ಗೆ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಒಡಿಶಾ ವಿರುದ್ಧ ಕರ್ನಾಟಕ ಬೃಹತ್ ಮೊತ್ತದ ಗುರಿಯೊಂದಿಗೆ ಕ್ರೀಸ್‌'ಗಿಳಿಯಿತಾದರೂ, ಆರಂಭಿಕರಾದ ಆರ್. ಸಮರ್ಥ್ (26) ಮತ್ತು ಮಯಾಂಕ್ ಅಗರ್ವಾಲ್ (4) ರನೌಟ್‌ನಿಂದಾಗಿ ಹಿನ್ನಡೆ ಅನುಭವಿಸಿತು. ಭೋಜನ ವಿರಾಮದ ಹೊತ್ತಿಗೆ 72ಕ್ಕೆ 3 ವಿಕೆಟ್ ಕಳೆದುಕೊಂಡ ಕರ್ನಾಟಕ, ಆನಂತರದಲ್ಲಿಯೂ ಒಡಿಶಾ ಬೌಲರ್‌ಗಳ ಸಂಘಟಿತ ದಾಳಿಗೆ ತತ್ತರಿಸಿತು. ಮುಖ್ಯವಾಗಿ ಸ್ಟುವರ್ಟ್ ಬಿನ್ನಿ (7) ವಿಕೆಟ್ ರಾಜ್ಯಕ್ಕೆ ಹೊಡೆತ ನೀಡಿತು. ಹೀಗೆ ಮೇಲಿನ ಕ್ರಮಾಂಕದ ಅನಿರೀಕ್ಷಿತ ವೈಫಲ್ಯದಿಂದ ಒತ್ತಡಕ್ಕೆ ಗುರಿಯಾದ ಕರ್ನಾಟಕಕ್ಕೆ ಗೌತಮ್ ಆಸರೆಯಾದರು. ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸಿದ ಅವರು 8 ಆಕರ್ಷಕ ಬೌಂಡರಿಗಳಿಂದ ಯಶಸ್ವಿ ಅರ್ಧಶತಕ ಪೂರೈಸಿದ ಅವರು ರಾಜ್ಯ ಗೌರವದಾಯಕ ಮೊತ್ತ ಕಲೆಹಾಕಲು ನೆರವಾದರು. ಆದಾಗ್ಯೂ ನಿರ್ಣಾಯಕ ಹಂತದಲ್ಲಿ ಅವರನ್ನು ಮೀರಜ್ ಸಿಂಗ್ ಔಟ್ ಮಾಡಿದರು. ಅವರ ನಂತರ ತಂಡದ ಪರ ಎರಡಂಕಿ ದಾಟಿದ್ದು ನಾಯಕ ವಿನಯ್ ಕುಮಾರ್ (16) ಮತ್ತು ಕೆ. ಗೌತಮ್ (21).

ಒಡಿಶಾ ಪರ ಬಸಂತ್ ಸಮಂಟ್ರೆ 3 ವಿಕೆಟ್ ಪಡೆದರೆ, ಸಮಂಟ್ರೆ 2, ಸೂರ್ಯಕಾಂತ್, ಅಲೋಕ್ ಹಾಗೂ ಮೀರಜ್ ತಲಾ ಒಂದೊಂದು ವಿಕೆಟ್ ಗಳಿಸಿದರು.

ಸ್ಕೋರ್ ವಿವರ

ಕರ್ನಾಟಕ ಮೊದಲ ಇನ್ನಿಂಗ್ಸ್

66.2 ಓವರ್‌ಗಳಲ್ಲಿ 179ಕ್ಕೆ ಆಲೌಟ್

ಒಡಿಶಾ ಮೊದಲ ಇನ್ನಿಂಗ್ಸ್

18 ಓವರ್‌ಗಳಲ್ಲಿ 2 ವಿಕೆಟ್‌ಗೆ 42