2026ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಝಂಡು ಕುಮಾರ್ ಕಂಚಿನ ಪದಕ ಗೆಲ್ಲುವ ಮೂಲಕ ಭಾರತದ ಪದಕ ಖಾತೆ ತೆರೆದಿದ್ದಾರೆ. ಪೋಲಿಯೋ ಪೀಡಿತರಾಗಿದ್ದ ಅವರು, ತರಕಾರಿ ವ್ಯಾಪಾರ ಮತ್ತು ಇ-ರಿಕ್ಷಾ ಓಡಿಸಿ ಜೀವನ ಸಾಗಿಸುತ್ತಾ ಈ ಸಾಧನೆ ಮಾಡಿದ್ದಾರೆ.

ಗ್ಲಾಸ್ಗೋ: 2026ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತ ಪದಕ ಖಾತೆ ತೆರೆದಿದೆ. ಪುರುಷರ ಹೇವಿವೇಟ್‌ ಪ್ಯಾರಾ ಪವರ್‌ಲಿಫ್ಟಿಂಗ್‌ ವಿಭಾಗದಲ್ಲಿ 28 ವರ್ಷದ ಝಂಡು ಕುಮಾರ್‌ ಅವರು 130.9 ಅಂಕಗಳೊಂದಿಗೆ 3ನೇ ಸ್ಥಾನಿಯಾದರು.

ಅವರು 181 ಕೆ.ಜಿ. ಹಾಗೂ 190 ಕೆ.ಜಿ. ಭಾರ ಎತ್ತಿದರು. ಆದರೆ 196 ಕೆ.ಜಿ. ಭಾರ ಎತ್ತಲು ವಿಫಲವಾಗಿ ಕಂಚಿಗೆ ತೃಪ್ತಿಪಟ್ಟುಕೊಂಡರು. ನೈಜೀರಿಯಾದ ಇದ್ರೀಸ್‌ ರಿಲುವಾನ್‌(132.8) ಚಿನ್ನ, ಬ್ರಿಟನ್‌ನ (131 ಅಂಕ) ಬೆಳ್ಳಿ ಗೆದ್ದರು. ಭಾರತದ ಸುಧೀರ್‌ 114.1 ಅಂಕದೊಂದಿಗೆ 6ನೇ ಸ್ಥಾನಿಯಾಗಿ ಪದಕ ತಪ್ಪಿಸಿಕೊಂಡರು.

ಬಾಕ್ಸಿಂಗ್‌ನಲ್ಲಿ ಲವ್ಲೀನಾ ಬೊರ್ಗೊಹೈನ್‌ಗೆ ಪದಕ ಖಚಿತವಾಗಿದ್ದರೂ ಅವರ ಸ್ಪರ್ಧೆ ಇನ್ನೂ ನಡೆದಿಲ್ಲ. ಹೀಗಾಗಿ ಝಂಡುಗೆ ಸಿಕ್ಕ ಕಂಚು ಭಾರತದ ಮೊದಲ ಪದಕ ಎನಿಸಿಕೊಂಡಿತು.

ತಪ್ಪಿದ ಪದಕ:

ಪುರುಷರ ಲೈಟ್‌ವೇಟ್‌ನಲ್ಲಿ ಅಶೋಕ್‌ ಮಲಿಕ್‌ 4ನೇ ಸ್ಥಾನಿಯಾಗಿ ಪದಕ ತಪ್ಪಿಸಿಕೊಂಡರು. ಪರಮ್‌ಜೀತ್‌ ಕುಮಾರ್‌ 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಮಹಿಳೆಯರ ಹೇವಿವೇಟ್‌ ಫೈನಲ್‌ನಲ್ಲಿ ಕಸ್ತೂರಿ ರಾಜಮನಿ ಎಲ್ಲಾ 3 ಪ್ರಯತ್ನದಲ್ಲೂ ವಿಫಲರಾದರು. ಲೈಟ್‌ವೇಟ್‌ನಲ್ಲಿ ಜಸ್‌ಪ್ರೀತ್‌ ಕೌರ್, ಸುಮನ್‌ ದೇವಿ ಪದಕ ಗೆಲ್ಲಲಿಲ್ಲ.

ತರಕಾರಿ ವ್ಯಾಪಾರ, ಇ-ರಿಕ್ಷಾ ಓಡಿಸುತ್ತಿದ್ದ ಝಂಡು ಕುಮಾರ್‌

ಬಿಹಾರದ ಹರನೌತ್‌ ಗ್ರಾಮದ ಝಂಡು ತಮ್ಮ 5ನೆ ವಯಸ್ಸಿನಲ್ಲೇ ಪೋಲಿಯೋಗೆ ತುತ್ತಾಗಿದ್ದರು. ಹೀಗಾಗಿ ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದರು. 2010ರಲ್ಲಿ ದೇಹಸಾಮರ್ಥ್ಯ ಹೆಚ್ಚಿಸಲು ಭಾರ ಎತ್ತಲು ಆರಂಭಿಸಿದ ಅವರು, ಬಳಿಕ ಜಾವೆಲಿನ್‌ ಎಸೆತ, ಶಾಟ್‌ಪುಟ್‌ ಕ್ರೀಡೆಗಳತ್ತ ಆಕರ್ಷಿತರಾದರು. ಬಳಿಕ ಪ್ಯಾರಾ ಪವರ್‌ಲಿಫ್ಟಿಂಗ್‌ ತರಬೇತಿ ಆರಂಭಿಸಿದರು. ಆದರೆ ಪೌಷ್ಠಿಕ ಆಹಾರಕ್ಕೆ ತಗಲುತ್ತಿದ್ದ ವೆಚ್ಚ ಬರಿಸಲು ತಮ್ಮ ಗ್ರಾಮದಿಂದ 20 ಕಿ.ಮೀ. ದೂರ ಸಾಗಿ ತರಕಾರಿ ವ್ಯಾಪಾರ ಮಾಡುತ್ತಿದ್ದರು. ಬಳಿಕ ತಮ್ಮ ಸ್ನೇಹಿತನಿಂದ ಸಾಲ ಪಡೆದು ಇ-ರಿಕ್ಷಾ ಖರೀದಿಸಿ, ಅದರಲ್ಲೇ ಜೀವನ ಸಾಗಿಸುತ್ತಿದ್ದರು.

ಈಜು: ಫೈನಲ್‌ಗೇರಲು ದಕ್ಷಣ್‌, ಆರ್‍ಯನ್‌ ವಿಫಲ

ಕಾಮನ್‌ವೆಲ್ತ್‌ ಗೇಮ್ಸ್‌ನ ಪುರುಷರ ಈಜು ಸ್ಪರ್ಧೆಯ 400 ಮೀ. ಫ್ರೀಸ್ಟೈಲ್‌ ವಿಭಾಗದಲ್ಲಿ ಭಾರತೀಯರು ನಿರಾಸೆ ಅನುಭವಿಸಿದ್ದಾರೆ. ದಕ್ಷಣ್‌ ಶಶಿಕುಮಾರ್‌ ಹಾಗೂ ಆರ್ಯನ್‌ ನೆಹ್ರಾ ಫೈನಲ್‌ಗೇರಲು ವಿಫಲರಾದರು. ಹೀಟ್ಸ್‌ನಲ್ಲಿ ಶಶಿಕುಮಾರ್‌ 3 ನಿಮಿಷ 58.09 ಸೆಕೆಂಡ್‌ನಲ್ಲಿ ಕ್ರಮಿಸಿ 15ನೇ ಸ್ಥಾನಿಯಾದರೆ, ಆರ್ಯನ್‌ 4 ನಿಮಿಷ 00.26 ಸೆಕೆಂಡ್‌ನಲ್ಲಿ ಗುರಿ ತಲುಪಿ 16ನೇ ಸ್ಥಾನಿಯಾದರು. ಸ್ಪರ್ಧೆಯಲ್ಲಿ 27 ಈಜುಪಟುಗಳಿದ್ದರು.