* ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿಂದು ಹೈವೋಲ್ಟೇಜ್ ಪಂದ್ಯ* ಟೆನಿಸ್ ದಿಗ್ಗಜರಾದ ರಾಫೆಲ್ ನಡಾಲ್ ಹಾಗೂ ನೋವಾಕ್ ಜೋಕೋವಿಚ್ ಮುಖಾಮುಖಿ* ಕ್ವಾರ್ಟರ್ ಫೈನಲ್ ಪಂದ್ಯ ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತ ಅಭಿಮಾನಿಗಳು

ಪ್ಯಾರಿಸ್(ಮೇ.31)‌: ದಾಖಲೆಯ 21 ಗ್ರ್ಯಾನ್‌ ಸ್ಲಾಂ ಪ್ರಶಸ್ತಿಗಳನ್ನು ಗೆದ್ದಿರುವ ರಾಫೆಲ್‌ ನಡಾಲ್‌ (Rafael Nadal) ಹಾಗೂ 20 ಗ್ರ್ಯಾನ್‌ ಸ್ಲಾಂ ಪ್ರಶಸ್ತಿಗಳ ಒಡೆಯ ನೋವಾಕ್‌ ಜೋಕೋವಿಚ್‌ (Novak Djokovic) ನಡುವಿನ ರೋಚಕ ಹಣಾಹಣಿಗೆ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿ (French Open Tennis Tournament) ವೇದಿಕೆ ಒದಗಿಸಲಿದೆ. ಇವರಿಬ್ಬರು ಮಂಗಳವಾರ ಕ್ವಾರ್ಟರ್‌ ಫೈನಲ್‌ನಲ್ಲಿ ಸೆಣಸಾಡಲಿದ್ದು, ಭಾರೀ ಕುತೂಹಲ ಸೃಷ್ಟಿಸಿದೆ. ಭಾನುವಾರ ಪುರುಷರ ಸಿಂಗಲ್ಸ್‌ ಪ್ರಿ ಕ್ವಾರ್ಟರ್‌ನಲ್ಲಿ ವಿಶ್ವ ನಂ.1 ಜೋಕೋವಿಚ್‌, 15ನೇ ಶ್ರೇಯಾಂಕಿತ ಅರ್ಜೆಂಟೀನಾದ ಡಿಯಾಗೊ ಶ್ವಾಟ್ಜ್‌ಮನ್‌ ವಿರುದ್ಧ 6-1, 6-3, 6-3 ನೇರ ಸೆಟ್‌ಗಳಿಂದ ಗೆದ್ದಿದ್ದಾರೆ. 

ಅತ್ತ ನಡಾಲ್‌ ತಮ್ಮ ಮಾಜಿ ಕೋಚ್‌, ಚಿಕ್ಕಪ್ಪ ಟೋನಿ ನಡಾಲ್‌ರ ಹಾಲಿ ಶಿಷ್ಯ ಕೆನಡಾದ ಫೆಲಿಕ್ಸ್‌ ಆಗರ್‌ ಅಲಿಯಾಸ್ಸಿಮ್‌ ವಿರುದ್ಧ 3-​6, 6-​3, 6-​2, 3​-6, 6​-3 ಅಂತರದಲ್ಲಿ ರೋಚಕವಾಗಿ ಗೆದ್ದು ಕ್ವಾರ್ಟರ್‌ ತಲುಪಿದ್ದಾರೆ. ವೃತ್ತಿಪರ ಟೆನಿಸ್‌ನಲ್ಲಿ ರಾಫಾ-ಜೋಕೋ ಈವರೆಗೆ 58 ಬಾರಿ ಮುಖಾಮುಖಿಯಾಗಿದ್ದು, ಜೋಕೋ 30-28 ಅಂತರದಲ್ಲಿ ಗೆಲುವಿನ ದಾಖಲೆ ಹೊಂದಿದ್ದಾರೆ. ಅದಾಗ್ಯೂ ಫ್ರೆಂಚ್‌ ಓಪನ್‌ನ 9 ಮುಖಾಮುಖಿಯಲ್ಲಿ ನಡಾಲ್‌ 7ರಲ್ಲಿ ಗೆದ್ದಿದ್ದಾರೆ.

ಫ್ರೆಂಚ್‌ ಓಪನ್‌: ಕಾರ್ಲೊಸ್‌ ಕ್ವಾರ್ಟರ್‌ಗೆ

ಪ್ಯಾರಿಸ್‌: ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ಸ್ಪೇನ್‌ನ 19ರ ಕಾರ್ಲೊಸ್‌ ಆಲ್ಕರಾಜ್‌ ಮೊದಲ ಬಾರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಭಾನುವಾರ ನಡೆದ ಪುರುಷರ ಸಿಂಗಲ್ಸ್‌ 4ನೇ ಸುತ್ತಿನ ಪಂದ್ಯದಲ್ಲಿ ವಿಶ್ವ ನಂ.6 ಆಲ್ಕರಾಜ್‌, ರಷ್ಯಾದ ಕರೇನ್‌ ಖಚನೋವ್‌ ವಿರುದ್ಧ 6-1, 6-4, 6-4ರಲ್ಲಿ ಗೆದ್ದರು. ವಿಶ್ವ ನಂ.4 ಗ್ರೀಸ್‌ನ ಸಿಟ್ಸಿಪಾಸ್‌, ಸೋತು ಹೊರಬಿದ್ದಿದ್ದಾರೆ.

40ನೇ ಶ್ರೇಯಾಂಕಿತ ಡೆನ್ಮಾರ್ಕ್ ಹೋಲ್ಗರ್‌ ರೂನ್‌ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದರು. ವಿಶ್ವ ನಂ.8 ನಾರ್ವೇಯ ಕಾಸ್ಪರ್‌ ರ್ಯುಡ್‌, ಮಹಿಳಾ ಸಿಂಗಲ್ಸ್‌ನಲ್ಲಿ ರಷ್ಯಾದ ವೆರೋನಿಕಾ ಹಾಗೂ ಡೇರಿಯಾ ಕಸಾತ್‌ಕಿನಾ ಕ್ವಾರ್ಟರ್‌ ಪ್ರವೇಶಿಸಿದರು.

French Open : ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟ ನಂ.1 ಟೆನಿಸಿಗ ಜೋಕೋವಿಚ್

ಬೋಪಣ್ಣ ಜೋಡಿಗೆ ಸೋಲು

ಮಿಶ್ರ ಡಬಲ್ಸ್‌ನಲ್ಲಿ ಭಾರತದ ರೋಹನ್‌ ಬೋಪಣ್ಣ-ಕ್ಲೆಪಾಕ್‌ ಜೋಡಿ 2ನೇ ಸುತ್ತಿನಲ್ಲಿ ಅಭಿಯಾನ ಕೊನೆಗೊಳಿಸಿದೆ. ಭಾನುವಾರ ನಡೆದ 2ನೇ ಸುತ್ತಿನಲ್ಲಿ ಈ ಜೋಡಿ ಚೆಕ್‌ ಗಣರಾಜ್ಯದ ಲೂಸಿ ಹ್ರಡೆಕ್ಕಾ-ಈಕ್ವೆಡಾರ್‌ನ ಎಸ್ಕೋಬಾರ್‌ ಜೋಡಿ ವಿರುದ್ಧ ಸೋಲನುಭವಿಸಿತು.

ಖೇಲೋ ಇಂಡಿಯಾ: ರಾಜ್ಯದ 194 ಕ್ರೀಡಾಪಟುಗಳು ಭಾಗಿ

ಬೆಂಗಳೂರು: 4ನೇ ಆವೃತ್ತಿಯ ಖೇಲೋ ಇಂಡಿಯಾ ಯೂತ್‌ ಗೇಮ್ಸ್‌ನಲ್ಲಿ ಕರ್ನಾಟಕದ 194 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ ಎಂದು ರಾಜ್ಯ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಮಾಹಿತಿ ನೀಡಿದೆ. ಇದರಲ್ಲಿ 84 ಬಾಲಕರು, 110 ಬಾಲಕಿಯರು ಇದ್ದಾರೆ. ಈ ಬಾರಿ ಕ್ರೀಡಾಕೂಟ ಜೂನ್‌ 4ರಿಂದ 13ರ ವರೆಗೆ ನಡೆಯಲಿದ್ದು, ಹರಾರ‍ಯಣದ ಪಂಚಕುಲ ಆತಿಥ್ಯ ವಹಿಸಲಿದೆ. ಅಂಬಾಲ, ಶಾಹ್‌ಬಾದ್‌, ದೆಹಲಿ ಹಾಗೂ ಚಂಡೀಗಢದಲ್ಲೂ ಕೆಲ ಸ್ಪರ್ಧೆಗಳು ನಡೆಯಲಿವೆ. 

ಕಳೆದ ವರ್ಷ ಅಸ್ಸಾಂನಲ್ಲಿ ನಡೆದಿದ್ದ ಕ್ರೀಡಾಕೂಟದಲ್ಲಿ ಕರ್ನಾಟಕ 32 ಚಿನ್ನ ಸೇರಿ ಒಟ್ಟು 80 ಪದಕಗಳೊಂದಿಗೆ 4ನೇ ಸ್ಥಾನ ಪಡೆದುಕೊಂಡಿತ್ತು. ಈ ಬಾರಿ ಕೂಟದಲ್ಲಿ ಸುಮಾರು 8,000 ಕ್ರೀಡಾಪಟುಗಳು ಗೇಮ್ಸ್‌ನಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.