Asianet Suvarna News Asianet Suvarna News

French Open : ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟ ನಂ.1 ಟೆನಿಸಿಗ ಜೋಕೋವಿಚ್

* ಫ್ರೆಂಚ್ ಓಪನ್‌ನಲ್ಲಿ ಮುಂದುವರೆದ ಜೋಕೋವಿಚ್ ಗೆಲುವಿನ ನಾಗಾಲೋಟ

* ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಸತತ 13ನೇ ಬಾರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಜೋಕೋ

* ನಡಾಲ್ ದಾಖಲೆ ಸರಿಗಟ್ಟಲು ತುದಿಗಾಲಿನಲ್ಲಿ ನಿಂತಿರುವ ಸರ್ಬಿಯಾದ ಆಟಗಾರ

French Open Novak Djokovic Seals Quarter final Berth In Paris kvn
Author
Bengaluru, First Published May 30, 2022, 8:31 AM IST

ಪ್ಯಾರಿಸ್(ಮೇ.30)‌: ಹಾಲಿ ಚಾಂಪಿಯನ್‌, 20 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ ನೋವಾಕ್‌ ಜೋಕೋವಿಚ್‌ (Novak Djokovic) ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ (French Open Tennis Grand slam) ಸತತ 13ನೇ ಬಾರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ಪ್ರಿ ಕ್ವಾರ್ಟರ್‌ನಲ್ಲಿ ವಿಶ್ವ ನಂ.1 ಜೋಕೋ, 15ನೇ ಶ್ರೇಯಾಂಕಿತ ಅರ್ಜೆಂಟೀನಾದ ಡಿಯಾಗೊ ಶ್ವಾಟ್ಜ್‌ಮನ್‌ ವಿರುದ್ಧ 6-1, 6-3, 6-3 ನೇರ ಸೆಟ್‌ಗಳಿಂದ ಗೆಲುವು ಸಾಧಿಸಿದರು.

ಜೋಕೋ ಈ ಬಾರಿಯ ಟೂರ್ನಿಯಲ್ಲಿ ಆಡಿರುವ ಎಲ್ಲಾ ಪಂದ್ಯಗಳಲ್ಲೂ ನೇರ ಸೆಟ್‌ಗಳಲ್ಲಿ ಗೆದ್ದಿರುವ ಗಮನಾರ್ಹ. ಅವರು ಒಟ್ಟಾರೆ 16 ಬಾರಿ ಫ್ರೆಂಚ್‌ ಓಪನ್‌ನಲ್ಲಿ ಕ್ವಾರ್ಟರ್‌ಗೆ ಲಗ್ಗೆ ಇಟ್ಟಿದ್ದು, ಈ ಪೈಕಿ 2006 ಮತ್ತು 2021ರಲ್ಲಿ ಚಾಂಪಿಯನ್‌ ಆಗಿದ್ದಾರೆ. ಈ ಬಾರಿಯೂ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿರುವ ಅವರು 21 ಗ್ರ್ಯಾನ್‌ ಸ್ಲಾಂ ಪ್ರಶಸ್ತಿ ಗೆದ್ದಿರುವ ಸ್ಪೇನ್‌ನ ರಾಫೆಲ್‌ ನಡಾಲ್‌ ದಾಖಲೆ ಸರಿಗಟ್ಟಲು ಎದುರು ನೋಡುತ್ತಿದ್ದಾರೆ.

ಇನ್ನು, ಮಹಿಳಾ ಸಿಂಗಲ್ಸ್‌ನಲ್ಲಿ ಕಳೆದ ಬಾರಿಯ ಯುಎಸ್‌ ಓಪನ್‌ (US Open) ರನ್ನರ್‌ ಅಪ್‌, 19 ವರ್ಷದ ಲೈಲಾ ಫೆರ್ನಾಂಡೆಜ್‌, ಅಮೆರಿಕದ ಅಮಂಡಾ ಅನಿಸಿಮೋವಾ ವಿರುದ್ಧ ಗೆದ್ದು ಫ್ರೆಂಚ್‌ ಓಪನ್‌ನಲ್ಲಿ ಮೊದಲ ಬಾರಿ ಕ್ವಾರ್ಟರ್‌ ಪ್ರವೇಶಿಸಿದರು. ವಿಶ್ವ ನಂ.18 ಅಮೆರಿಕದ ಕೊಕೊ ಗಾಫ್‌, ಬೆಲ್ಜಿಯಂನ ಎಲೈಸ್‌ ಮೆರ್ಟೆನ್ಸ್‌ ವಿರುದ್ಧ ಗೆದ್ದರೆ, ಇಟಲಿಯ ಮಾರ್ಟಿನಾ ಟ್ರೆವಿಸನ್‌, ಬೆಲಾರಸ್‌ನ ಸಾಸ್ನೋವಿಚ್‌ರನ್ನು ಬಗ್ಗು ಬಡಿದು ಕ್ವಾರ್ಟರ್‌ಗೆ ತಲುಪಿದರು.

ಸಾನಿಯಾ ಜೋಡಿಗೆ ಸೋಲು

ಮಿಶ್ರ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ (Sania Mirza) -ಕ್ರೊವೇಷಿಯಾದ ಇವಾನ್‌ ಡಾಡಿಗ್‌ ಜೋಡಿ 2ನೇ ಸುತ್ತಿನಲ್ಲಿ ಅಭಿಯಾನ ಕೊನೆಗೊಳಿಸಿದೆ. ಭಾನುವಾರ 2ನೇ ಸುತ್ತಿನಲ್ಲಿ ಈ ಜೋಡಿ ಬ್ರೆಜಿಲ್‌ನ ಬೀಟ್ರಿಜ್‌ ಹದ್ದಾದ್‌-ಬ್ರುನೋ ಸೋರೆಸ್‌ ಜೋಡಿ ವಿರುದ್ಧ ಪರಾಭವಗೊಂಡಿತು.

ಚಾಂಪಿಯನ್ಸ್‌ ಲೀಗ್‌: ರಿಯಲ್‌ ಮ್ಯಾಡ್ರಿಡ್‌ಗೆ 14ನೇ ಪ್ರಶಸ್ತಿ

ಮ್ಯಾಡ್ರಿಡ್‌: ಯುಇಎಫ್‌ಎ ಚಾಂಪಿಯನ್ಸ್‌ ಲೀಗ್‌ ಫುಟ್ಬಾಲ್‌ ಟೂರ್ನಿಯಲ್ಲಿ ಸ್ಪೇನ್‌ನ ರಿಯಲ್‌ ಮ್ಯಾಡ್ರಿಡ್‌ 14ನೇ ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಶನಿವಾರ ರಾತ್ರಿ ನಡೆದ ಇಂಗ್ಲೆಂಡ್‌ನ ಲಿವರ್‌ಪೂಲ್‌ ವಿರುದ್ಧದ ಫೈನಲ್‌ ಪಂದ್ಯದಲ್ಲಿ ಮ್ಯಾಡ್ರಿಡ್‌ 1-0 ಗೋಲಿನಲ್ಲಿ ಗೆಲುವು ಸಾಧಿಸಿತು. 59ನೇ ನಿಮಿಷದಲ್ಲಿ ಮ್ಯಾಡ್ರಿಡ್‌ ಪರ ವಿನಿಶಿಯಸ್‌ ಜೂನಿಯರ್‌ ಗೋಲು ಬಾರಿಸಿ ಗೆಲುವಿನ ರೂವಾರಿಯಾದರು. 

French Open: ಇಗಾ, ಡ್ಯಾನಿಲ್‌ ಪ್ರೀ ಕ್ವಾರ್ಟರ್‌ಗೆ ಲಗ್ಗೆ

2018ರಲ್ಲಿ ಮ್ಯಾಡ್ರಿಡ್‌ ವಿರುದ್ಧವೇ ಸೋತು ಪ್ರಶಸ್ತಿ ತಪ್ಪಿಸಿಕೊಂಡಿದ್ದ ಲಿವರ್‌ಪೂಲ್‌ ಮತ್ತೊಮ್ಮೆ ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಮ್ಯಾಡ್ರಿಡ್‌ ಈವರೆಗೆ 17 ಬಾರಿ ಫೈನಲ್‌ ಆಡಿದ್ದು, 3 ಬಾರಿ ರನ್ನರ್‌-ಅಪ್‌ ಆಗಿದೆ. ಲಿವರ್‌ಪೂರ್‌ 6 ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ.

Follow Us:
Download App:
  • android
  • ios