French Open ಇಗಾ vs ಗಾಫ್ ಗ್ರ್ಯಾಂಡ್ ಫೈನಲ್‌ಗೆ ಕ್ಷಣಗಣನೆ
* ಫ್ರೆಂಚ್ ಓಪನ್ ಮಹಿಳಾ ಸಿಂಗಲ್ಸ್‌ನಲ್ಲಿ ಇಗಾ ಸ್ವಿಯಾಟೆಕ್ ಹಾಗೂ ಕೊಕೊ ಗಾಫ್ ಮುಖಾಮುಖಿ
* ವಿಶ್ವ ನಂ.1 ಆಟಗಾರ್ತಿ ಇಗಾ ಸ್ವಿಯಾಟೆಕ್ ಎದುರು 18 ವರ್ಷದ ಗಾಫ್ ಸವಾಲು
* ಸತತ 34ನೇ ಗೆಲುವಿನೊಂದಿಗೆ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿರುವ ಇಗಾ
ಪ್ಯಾರಿಸ್(ಜೂ.04): ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ಫೈನಲ್ ಹಣಾಹಣಿ ಶನಿವಾರ ನಡೆಯಲಿದ್ದು, ವಿಶ್ವ ನಂ.1 ಆಟಗಾರ್ತಿ ಇಗಾ ಸ್ವಿಯಾಟೆಕ್ ಹಾಗೂ ಅಮೆರಿಕದ 18ರ ಕೊಕೊ ಗಾಫ್ ಪ್ರಶಸ್ತಿಗಾಗಿ ಸೆಣಸಾಡಲಿದ್ದಾರೆ.
ಪೋಲೆಂಡ್‌ನ 21 ವರ್ಷದ ಸ್ವಿಯಾಟೆಕ್ ಸೆಮಿಫೈನಲ್‌ನಲ್ಲಿ ರಷ್ಯಾದ ದರಿಯಾ ಕಸತ್ಕಿನಾ ವಿರುದ್ಧ ಗೆಲುವು ಸಾಧಿಸಿದ್ದು, ಸತತ 34ನೇ ಗೆಲುವಿನೊಂದಿಗೆ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. 2020ರಲ್ಲಿ ಚಾಂಪಿಯನ್ ಆಗಿದ್ದ ಅವರು 2ನೇ ಗ್ರ್ಯಾನ್‌ಸ್ಲಾಂ ಹಾಗೂ ಈ ವರ್ಷದ 6ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. 2000ರ ನಂತರ ಸತತವಾಗಿ ಅತಿ ಹೆಚ್ಚು ಗೆಲುವು ಸಾಧಿಸಿದ ಆಟಗಾರ್ತಿಯರ ಪಟ್ಟಿಯಲ್ಲಿ ಅಮೆರಿಕದ ವೀನಸ್ ವಿಲಿಯಮ್ಸ್ (2000ರಲ್ಲಿ 35 ಜಯ) ಮೊದಲ ಸ್ಥಾನದಲ್ಲಿದ್ದು, ಆ ದಾಖಲೆಯನ್ನು ಸರಿಗಟ್ಟಲೂ ಎದುರು ನೋಡುತ್ತಿದ್ದಾರೆ.
ಮತ್ತೊಂದೆಡೆ 18ನೇ ಶ್ರೇಯಾಂಕಿತ ಗಾಫ್ ಸೆಮೀಸ್‌ನಲ್ಲಿ ಇಟಲಿಯ ಮಾರ್ಟಿನಾ ಟ್ರೆವಿಸನ್ ವಿರುದ್ಧ ಗೆದ್ದಿದ್ದು, ಮೊದಲ ಬಾರಿ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆಲ್ಲಲು ಕಾತರಿಸುತ್ತಿದ್ದಾರೆ. 2004ರ ಬಳಿಕ ಗ್ರ್ಯಾನ್‌ಸ್ಲಾಂ ಮಹಿಳಾ ಸಿಂಗಲ್ಸ್ ಫೈನಲ್ ತಲುಪಿದ ಅತಿ ಕಿರಿಯ ಆಟಗಾರ್ತಿ ಎನಿಸಿಕೊಂಡಿರುವ ಅವರಿಗೆ ಸ್ವಿಯಾಟೆಕ್‌ರಿಂದ ಕಠಿಣ ಸವಾಲು ಎದುರಾಗುವ ಸಾಧ್ಯತೆ ಇದೆ.
ಡಬಲ್ಸ್‌ನಲ್ಲೂ ಗಾಫ್‌ಗೆ ಪ್ರಶಸ್ತಿ ಗೆಲ್ಲುವ ಗುರಿ
ಕೊಕೊ ಗಾಫ್ ಅಮೆರಿಕದ ಜೆಸ್ಸಿಕಾ ಪೆಗುಲಾ ಜೊತೆಗೂಡಿ ಮಹಿಳಾ ಡಬಲ್ಸ್‌ನಲ್ಲೂ ಫೈನಲ್‌ಗೆ ಲಗ್ಗೆ ಇಟ್ಟಿದ್ದು, ಎರಡೆರಡು ಪ್ರಶಸ್ತಿ ಗೆಲ್ಲುವತ್ತ ಹೆಜ್ಜೆ ಇಟ್ಟಿದ್ದಾರೆ. ಈ ಮೂಲಕ 2000ದ ಬಳಿಕ ಸಿಂಗಲ್ಸ್, ಡಬಲ್ಸ್ ಪ್ರಶಸ್ತಿ ಗೆದ್ದ 2ನೇ ಆಟಗಾರ್ತಿ ಎನಿಸಿಕೊಳ್ಳುವ ತವಕದಲ್ಲಿದ್ದಾರೆ. ಕಳೆದ ವರ್ಷ ಚೆಕ್ ಗಣರಾಜ್ಯದ ಬಾರ್ಬೊರಾ ಕ್ರೆಜಿಕೋವಾ ಈ ಸಾಧನೆ ಮಾಡಿದ್ದರು. ಒಟ್ಟಾರೆ ಫ್ರೆಂಚ್ ಓಪನ್‌ನಲ್ಲಿ ಈವರೆಗೆ 7 ಮಂದಿ ಮಾತ್ರ ಸಿಂಗಲ್ಸ್ ಜೊತೆ ಡಬಲ್ಸ್ ಪ್ರಶಸ್ತಿಯನ್ನೂ ಗೆದ್ದಿದ್ದಾರೆ.
ಗಾಯಗೊಂಡು ಹಿಂದೆ ಸರಿದ ಜ್ವರೆವ್: ನಡಾಲ್ ಫೈನಲ್‌ಗೆ
ಪ್ಯಾರಿಸ್: ಚೊಚ್ಚಲ ಬಾರಿಗೆ ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಂ ಫೈನಲ್ ಪ್ರವೇಶಿಸುವ ವಿಶ್ವ ನಂ.3, ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಕನಸು ಭಗ್ನಗೊಂಡಿದೆ. ಶುಕ್ರವಾರ ಸ್ಪೇನ್‌ನ ರಾಫೆಲ್ ನಡಾಲ್ ವಿರುದ್ಧದ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನ ಎರಡನೇ ಸೆಟ್ ವೇಳೆ ಅಂಕಣದಲ್ಲಿ ಬಿದ್ದು ಗಾಯಗೊಂಡ ಜ್ವೆರೆವ್, ಪಂದ್ಯ ಬಿಟ್ಟುಕೊಡಲು ನಿರ್ಧರಿಸಿದರು. ಇದರೊಂದಿಗೆ ನಡಾಲ್ 14ನೇ ಬಾರಿಗೆ ಫ್ರೆಂಚ್ ಓಪನ್ ಫೈನಲ್ ಪ್ರವೇಶಿಸಿದ್ದು, ಭಾನುವಾರ 14ನೇ ಟ್ರೋಫಿ ಎತ್ತಿಹಿಡಿಯಲು ಎದುರು ನೋಡುತ್ತಿದ್ದಾರೆ.
91 ನಿಮಿಷಗಳ ಕಾಲ ನಡೆದ ಮೊದಲ ಸೆಟ್ ಅನ್ನು ಟೈ ಬ್ರೇಕರ್ ಮೂಲಕ 7-6(10-8) ಗೆದ್ದಿದ್ದ ನಡಾಲ್‌ಗೆ 2ನೇ ಸೆಟ್‌ನಲ್ಲೂ ಭಾರೀ ಪೈಪೋಟಿ ಎದುರಾಯಿತು. 6-6 ಗೇಮ್‌ಗಳಲ್ಲಿ ಉಭಯ ಆಟಗಾರರು ಸಮಬಲ ಸಾಧಿಸಿದ್ದರು. ಈ ವೇಳೆ ಜ್ವೆರೆವ್ ಜಾರಿ ಬಿದ್ದು ತಮ್ಮ ಬಲ ಮೊಣಕಾಲನ್ನು ಮುರಿದುಕೊಂಡರು. ಭಾರೀ ನೋವಿನಿಂದ ಬಳಲಿದ ಜ್ವೆರೆವ್ ಕಣ್ಣೀರಿಟ್ಟದೃಶ್ಯ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರ ಕಣ್ಣುಗಳಲ್ಲೂ ನೀರು ತರಿಸಿತು. ಜ್ವೆರೆವ್ ಬಿದ್ದ ದೃಶ್ಯಗಳನ್ನು ಮರು ಪ್ರಸಾರ ಮಾಡುವುದಿಲ್ಲ, ಅದು ಅಷ್ಟುಭೀಕರವಾಗಿದೆ ಎಂದು ವೀಕ್ಷಕ ವಿವರಣೆಗಾರರ ಮೂಲಕ ಪ್ರಸಾರಕರು ಹೇಳಿಸಿದರು. ವೀಲ್‌ಚೇರ್ ಮೂಲಕ ಜರ್ಮನಿ ಟೆನಿಸಿಗನನ್ನು ಅಂಕಣದಿಂದ ಹೊರ ಕರೆದುಹೋಗಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಊರುಗೋಲು ಹಿಡಿದು ಅಂಕಣಕ್ಕೆ ವಾಪಸಾದ ಜ್ವೆರೆವ್ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳಿಗೆ ಧನ್ಯವಾದ ಹೇಳಿ, ನಡಾಲ್‌ರನ್ನು ಅಭಿನಂದಿಸಿದರು. ಈ ವೇಳೆ ಶೀಘ್ರ ಗುಣಮುಖರಾಗುವಂತೆ ಜ್ವೆರೆವ್‌ಗೆ ನಡಾಲ್ ಶುಭ ಹಾರೈಸಿದರು.