Asianet Suvarna News Asianet Suvarna News

ಫ್ರೆಂಚ್‌ ಓಪನ್‌ 2019: ನಡಾಲ್‌ಗೆ ಡಜನ್‌ ಫ್ರೆಂಚ್‌ ಟ್ರೋಫಿ!

ರಾಫೆಲ್‌ ನಡಾಲ್‌ ಮತ್ತೊಮ್ಮೆ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಇದರೊಂದಿಗೆ ಮಣ್ಣಿನಂಕಣದಲ್ಲೇ ಒಂದು ಡಜನ್ ಪ್ರಶಸ್ತಿ ಗೆದ್ದ ಸಾಧನೆಯನ್ನು ಎಡಗೈ ಟೆನಿಸ್ ಆಟಗಾರ ಮಾಡಿದ್ದಾರೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ... 

French Open 2019 Rafael Nadal beats Dominic Thiem to clinch 12th title at Roland Garros
Author
Paris, First Published Jun 10, 2019, 12:18 PM IST

ಪ್ಯಾರಿಸ್‌[ಜೂ.10]: ‘ಮಣ್ಣಿನ ಮಗ’ ರಾಫೆಲ್‌ ನಡಾಲ್‌ ನಿರೀಕ್ಷೆಯಂತೆ 12ನೇ ಬಾರಿಗೆ ಫ್ರೆಂಚ್‌ ಓಪನ್‌ ಗ್ರ್ಯಾಂಡ್‌ಸ್ಲಾಂ ಚಾಂಪಿಯನ್‌ ಆಗಿದ್ದಾರೆ. ಆಧುನಿಕ ಟೆನಿಸ್‌ನಲ್ಲಿ ಒಂದು ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿಯನ್ನು 12 ಬಾರಿ ಗೆದ್ದ ಮೊದಲ ಆಟಗಾರ ಎನ್ನುವ ದಾಖಲೆಯನ್ನು ನಡಾಲ್‌ ಬರೆದಿದ್ದಾರೆ.

ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ಸ್ಪೇನ್‌ನ ಟೆನಿಸ್‌ ಮಾಂತ್ರಿಕ, ಡೊಮಿನಿಕ್‌ ಥೀಮ್‌ ವಿರುದ್ಧ 6-3, 5-7, 6-1, 6-1 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. 2018ರ ಫ್ರೆಂಚ್‌ ಓಪನ್‌ನ ಫೈನಲ್‌ನಲ್ಲೂ ನಡಾಲ್‌ ಹಾಗೂ ಥೀಮ್‌ ಎದುರಾಗಿದ್ದರು. ವಿಶ್ವ ನಂ.4 ಥೀಮ್‌ ಸತತ 2ನೇ ವರ್ಷ ಫೈನಲ್‌ನಲ್ಲಿ ಸೋಲುಂಡು ನಿರಾಸೆ ಅನುಭವಿಸಿದ್ದಾರೆ. ಈ ಗೆಲುವಿನೊಂದಿಗೆ ನಡಾಲ್‌ ಫ್ರೆಂಚ್‌ ಓಪನ್‌ನಲ್ಲಿ ತಮ್ಮ ಗೆಲುವು-ಸೋಲಿನ ದಾಖಲೆಯನ್ನು 93-2ಕ್ಕೆ ಏರಿಸಿಕೊಂಡಿದ್ದಾರೆ.

2005ರಲ್ಲಿ ಮೊದಲ ಬಾರಿಗೆ ಫ್ರೆಂಚ್‌ ಓಪನ್‌ ಗೆದ್ದಿದ್ದ ನಡಾಲ್‌, 2006, 2007, 2008, 2010, 2011, 2012, 2013, 2014, 2017, 2018ರಲ್ಲಿ ಪ್ರಶಸ್ತಿಗೆ ಮುತ್ತಿಟ್ಟಿದ್ದರು. ನಡಾಲ್‌ ಪಾಲಿಗಿದು 18ನೇ ಗ್ರ್ಯಾಂಡ್‌ಸ್ಲಾಂ ಟ್ರೋಫಿಯಾಗಿದ್ದು, 20 ಗ್ರ್ಯಾಂಡ್‌ಸ್ಲಾಂಗಳ ಒಡೆಯ ಸ್ವಿಜರ್‌ಲೆಂಡ್‌ನ ರೋಜರ್‌ ಫೆಡರರ್‌ರ ದಾಖಲೆಯನ್ನು ಮುರಿಯುವ ಸನಿಹದಲ್ಲಿದ್ದಾರೆ.

ಸುಲಭ ಗೆಲುವು: ನಿರೀಕ್ಷೆಯಂತೆ ರಾಫೆಲ್‌ ನಡಾಲ್‌ ಥೀಮ್‌ ವಿರುದ್ಧ ಸುಲಭ ಗೆಲುವು ಸಾಧಿಸಿದರು. ಮೊದಲ ಸೆಟ್‌ ಅನ್ನು 6-3ರಲ್ಲಿ ತಮ್ಮದಾಗಿಸಿಕೊಂಡ ನಡಾಲ್‌ಗೆ 2ನೇ ಸೆಟ್‌ನಲ್ಲಿ ಪ್ರಬಲ ಪೈಪೋಟಿ ಎದುರಾಯಿತು. 2ನೇ ಸೆಟ್‌ನಲ್ಲಿ ಪುಟಿದೆದ್ದು ಸಮಬಲ ಸಾಧಿಸಿದ ಥೀಮ್‌, 3ನೇ ಹಾಗೂ 4ನೇ ಸೆಟ್‌ನಲ್ಲಿ ಸುಲಭವಾಗಿ ಶರಣಾದರು. ಸಂಪೂರ್ಣ ಪ್ರಾಬಲ್ಯ ಮೆರೆದ ನಡಾಲ್‌ ಕ್ರಮವಾಗಿ 6-1, 6-1ರಲ್ಲಿ ಜಯಿಸಿ ಸುಮಾರು 3 ಗಂಟೆಗಳಲ್ಲಿ ಪಂದ್ಯವನ್ನು ತಮ್ಮದಾಗಿಸಿಕೊಂಡರು.

ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ನಡಾಲ್‌, ಮೊದಲ ಸುತ್ತಿನಿಂದ ಫೈನಲ್‌ ವರೆಗೂ ನಡಾಲ್‌ ಕೇವಲ 2 ಸೆಟ್‌ ಮಾತ್ರ ಬಿಟ್ಟುಕೊಟ್ಟರು.

ಮೊದಲನೆಯದಾಗಿ ಡೊಮಿನಿಕ್‌ ಥೀಮ್‌ರನ್ನು ಅಭಿನಂದಿಸುತ್ತೇನೆ. ಅವರು ಪ್ರಶಸ್ತಿ ಗೆಲ್ಲಲು ಅರ್ಹರು. ಮುಂದಿನ ಆವೃತ್ತಿಗಳಲ್ಲಿ ಅವರು ಚಾಂಪಿಯನ್‌ ಆಗಲಿ ಎಂದು ಬಯಸುತ್ತೇನೆ. ನಾನು ಏನು ಸಾಧಿಸಿದ್ದೇನೆ ಎನ್ನುವುದನ್ನು ವಿವರಿಸಲು ಕಷ್ಟ. ನನಗೆ ಆಗುತ್ತಿರುವ ಸಂತೋಷವನ್ನು ಬಣ್ಣಿಸಲು ಸಹ ಸಾಧ್ಯವಿಲ್ಲ. 2005ರಲ್ಲಿ ಇಲ್ಲಿ ಮೊದಲ ಬಾರಿ ಆಡಿದಾಗ ನನ್ನ ಕನಸು ನನಸಾಗಿತ್ತು. 2019ರಲ್ಲಿ ಮತ್ತೆ ಟ್ರೋಫಿ ಗೆಲ್ಲುತ್ತೇನೆ ಎಂದು ನಾನು ಅಂದುಕೊಂಡಿರಲಿಲ್ಲ. ಇದು ನನ್ನ ಪಾಲಿಗೆ ಅದ್ಭುತ ಹಾಗೂ ಅತಿ ವಿಶೇಷ ಕ್ಷಣ.

- ರಾಫೆಲ್‌ ನಡಾಲ್‌, ಫ್ರೆಂಚ್‌ ಓಪನ್‌ ಚಾಂಪಿಯನ್‌
 

Follow Us:
Download App:
  • android
  • ios