ಪ್ಯಾರಿಸ್(ಜೂ.03): 20 ಗ್ರ್ಯಾಂಡ್‌ಸ್ಲಾಂಗಳ ಒಡೆಯ ಸ್ವಿಜರ್‌ಲೆಂಡ್‌ನ ರೋಜರ್ ಫೆಡರರ್ ಹಾಗೂ ಹಾಲಿ ಚಾಂಪಿಯನ್ ರಾಫೆಲ್ ನಡಾಲ್, ಇಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ಗ್ರ್ಯಾಂಡ್‌ಸ್ಲಾಂನಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.

12ನೇ ಬಾರಿಗೆ ಫ್ರೆಂಚ್ ಓಪನ್ ಗ್ರ್ಯಾಂಡ್ ಸ್ಲಾಂನ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದ್ದಾರೆ. ಅಲ್ಲದೇ 28 ವರ್ಷಗಳ ಬಳಿಕ ಈ ಸಾಧನೆ ಮಾಡಿದ ಅತಿಹಿರಿಯ ಆಟಗಾರ ಎನ್ನುವ ಹೆಮ್ಮೆಗೆ ಫೆಡರರ್ ಪಾತ್ರರಾಗಿದ್ದಾರೆ. ಒಟ್ಟಾರೆ ಗ್ರ್ಯಾಂಡ್‌ಸ್ಲಾಂನಲ್ಲಿ ಫೆಡರರ್’ಗೆ ಇದು 54ನೇ ಕ್ವಾರ್ಟರ್‌ಫೈನಲ್ ಆಗಿದೆ. 37 ವರ್ಷ ವಯಸ್ಸಿನ ಫೆಡರರ್, ಪುರುಷರ ಸಿಂಗಲ್ಸ್ ವಿಭಾಗದ ಪ್ರಿ ಕ್ವಾರ್ಟರ್‌ನಲ್ಲಿ, ಅರ್ಜೆಂಟೀನಾದ ಲೀನಾರ್ಡೊ ಮಯೇರ್ ವಿರುದ್ಧ 6-2, 6-3, 6-3 ಸೆಟ್‌ಗಳಲ್ಲಿ ಸುಲಭ ಗೆಲುವು ಪಡೆದರು. ಮೊದಲ ಸೆಟ್‌ನಿಂದಲೂ ಮುನ್ನಡೆ ಕಾಯ್ದುಕೊಂಡ ಫೆಡರರ್, ಎದುರಾಳಿ ಆಟಗಾರನಿಗೆ ಯಾವುದೇ ಹಂತದಲ್ಲೂ ಸುಲಭ ಅಂಕಗಳನ್ನು ಬಿಟ್ಟು ಕೊಡಲಿಲ್ಲ. ಅಂತಿಮವಾಗಿ ಫೆಡರರ್ 3 ಸೆಟ್‌ಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಪಂದ್ಯ ಗೆದ್ದರು.

ಫ್ರೆಂಚ್ ಓಪನ್: ಮೂರನೇ ಸುತ್ತಲ್ಲೇ ಹೊರಬಿದ್ದ ಸೆರೆನಾ

ನಡಾಲ್‌ಗೆ ಜಯ: 12ನೇ ಫ್ರೆಂಚ್ ಓಪನ್ ಗ್ರ್ಯಾಂಡ್‌ಸ್ಲಾಂ ಮೇಲೆ ಕಣ್ಣಿಟ್ಟಿರುವ ಕ್ಲೇ ಕೋರ್ಟ್ ಕಿಂಗ್ ಸ್ಪೇನ್‌ನ ರಾಫೆಲ್ ನಡಾಲ್, ಪುರುಷರ ಸಿಂಗಲ್ಸ್‌ನ ಪ್ರಿ ಕ್ವಾರ್ಟರ್‌ನಲ್ಲಿ ಅರ್ಜೆಂಟೀನಾದ ಜುವಾನ್ ಲೊಂಡೆರೋ ವಿರುದ್ಧ 6-2, 6-3, 6-3 ಸೆಟ್‌ಲ್ಲಿ ಜಯಿಸಿದರು. 

ಕ್ವಾರ್ಟರ್’ಗೆ ಕೊಂಟಾ
ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಇಂಗ್ಲೆಂಡ್ ಆಟಗಾರ್ತಿ ಜೊಹನ್ನಾ ಕೊಂಟಾ, ಕ್ರೊವೇಷಿಯಾದ ಪೆಟ್ರಾ ಮಾರ್ಟಿಕ್, ಚೆಕ್ ಗಣರಾಜ್ಯದ ಮರ್ಕೆಟಾ ವಂಡ್ರುಸೊವಾ ಫ್ರೆಂಚ್ ಓಪನ್ ಕ್ವಾರ್ಟರ್‌ಫೈನಲ್'ಗೆ ಲಗ್ಗೆ ಇಟ್ಟಿದ್ದಾರೆ.

ಜೊಹನ್ನಾ, ಕ್ರೊವೇಷಿಯಾದ ಡೊನ್ನಾ ವೆಕಿಕ್ ಎದುರು 6-2, 6-4 ನೇರ ಸೆಟ್'ಗಳಲ್ಲಿ ಗೆದ್ದು ಮೊದಲ ಬಾರಿಗೆ ಮಣ್ಣಿನ ಅಂಕಣದಲ್ಲಿ ಎಂಟರಘಟ್ಟಕ್ಕೇರಿದರು. ಇನ್ನೊಂದು ಪಂದ್ಯದಲ್ಲಿ ಕ್ರೊವೇಷಿಯಾದ ಪೆಟ್ರಾ ಮಾರ್ಟಿಕ್, ಇಸ್ಟೋನಿಯಾದ ಕನೆಪಿ ವಿರುದ್ಧ 5-7, 6-2, 6-4 ಸೆಟ್‌ಗಳಲ್ಲಿ ಜಯಿಸಿದರು. ಮತ್ತೊಂದು ಪಂದ್ಯದಲ್ಲಿ ಚೆಕ್ ಗಣರಾಜ್ಯದ ಮರ್ಕೆಟಾ, ಲತ್ವಿಯಾದ ಅನಸ್ಟಾ ಸಿಜಾ ಸೆವಸ್ಟೋವಾ ವಿರುದ್ಧ 6-2,
6-0 ಸೆಟ್‌ಗಳಲ್ಲಿ ಜಯ ಪಡೆದರು.