ಪ್ಯಾರಿಸ್: ತಾಯಿಯಾದ ಬಳಿಕ ಮತ್ತೊಮ್ಮೆ ಗ್ರ್ಯಾಂಡ್‌ಸ್ಲಾಂ ಗೆಲ್ಲುವ ಸೆರೆನಾ ವಿಲಿಯಮ್ಸ್ ಕನಸು ಈಡೇರುತ್ತಿಲ್ಲ. ಶನಿವಾರ ಫ್ರೆಂಚ್ ಓಪನ್‌ನ 3ನೇ ಸುತ್ತಿನ ಪಂದ್ಯದಲ್ಲಿ ಅಮೆರಿಕದವರೇ ಆದ
ಸೋಫಿಯಾ ಕೆನಿನ್ ವಿರುದ್ಧ 2-6, 5-7 ಸೆಟ್‌ಗಳಲ್ಲಿ ಸೋಲುಂಡ ಸೆರೆನಾ ಟೂರ್ನಿಯಿಂದ ಹೊರಬಿದ್ದರು.

ಇದೇ ವೇಳೆ ಪುರುಷರ ಸಿಂಗಲ್ಸ್ 3ನೇ ಸುತ್ತಿನ ಪಂದ್ಯದಲ್ಲಿ ವಿಶ್ವ ನಂ.1, ಸರ್ಬಿಯಾದ ನೋವಾಕ್ ಜೋಕೋವಿಚ್ ಇಟಲಿಯ ಸಾಲ್ವಟೊರ್ ಕರುಸೊ ವಿರುದ್ಧ 6-3, 6-3, 6-2 ಸೆಟ್‌ಗಳಲ್ಲಿ ಜಯ ಗಳಿಸಿದರೆ, ಸ್ವಿಜರ್'ಲೆಂಡ್‌ನ ಸ್ಟ್ಯಾನಿಸ್ಲಾಸ್ ವಾವ್ರಿಂಕಾ ಬಲ್ಗೇರಿಯಾದ ಗ್ರಿಗರ್ ಡಿಮಿಟ್ರೊವ್ ವಿರುದ್ಧ 7-6, 7-6, 7-6 ಸೆಟ್‌ಗಳಲ್ಲಿ ಗೆದ್ದು 4ನೇ ಸುತ್ತಿಗೇರಿದರು.

ವಿಶ್ವ ನಂ.1 ಆಟಗಾರ್ತಿ, ಜಪಾನ್‌ನ ನವೊಮಿ ಒಸಾಕರ ಗ್ರ್ಯಾಂಡ್ ಗೆಲುವಿನ ಓಟ ಅಂತ್ಯಗೊಂಡಿದೆ. ಕಳೆದ ವರ್ಷ ಯುಎಸ್ ಓಪನ್, ಈ ವರ್ಷ ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದ ಒಸಾಕ, ಹ್ಯಾಟ್ರಿಕ್ ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿ ಗೆಲ್ಲುವ ಕನಸು ಹೊತ್ತು ಫ್ರೆಂಚ್ ಓಪನ್‌ನಲ್ಲಿ ಕಣಕ್ಕಿಳಿದಿದ್ದರು.

ಮೊದಲೆರಡು ಸುತ್ತುಗಳಲ್ಲಿ ಸೋಲಿನ ದವಡೆಯಿಂದ ಪಾರಾಗಿದ್ದ ಒಸಾಕ, ಮಹಿಳಾ ಸಿಂಗಲ್ಸ್‌ನ 3ನೇ ಸುತ್ತಿನ ಪಂದ್ಯದಲ್ಲಿ ವಿಶ್ವ ನಂ.42, ಚೆಕ್ ಗಣರಾಜ್ಯದ ಆಟಗಾರ್ತಿ ಕ್ಯಾತರೀನಾ ಸಿನಿಯಕೊವಾ ವಿರುದ್ಧ 4-6, 2-6 ನೇರ ಸೆಟ್ ಗಳಲ್ಲಿ ಸುಲಭವಾಗಿ ಶರಣರಾದರು. ಸತತ 16 ಗ್ರ್ಯಾಂಡ್‌ಸ್ಲಾಂ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಒಸಾಕ, ಮೊದಲೆರಡು ಪಂದ್ಯಗಳ ಮೊದಲ ಸೆಟ್‌ನಲ್ಲಿ ಸೋಲುಂಡಿದ್ದರು. ಈ ಪಂದ್ಯದಲ್ಲೂ ಅದು ಮುಂದುವರಿಯಿತು. ಆದರೆ 23 ವರ್ಷದ ಚೆಕ್ ಆಟಗಾರ್ತಿ, ಒಸಾಕಗೆ ಪುಟಿದೇಳಲು ಅವಕಾಶ ನೀಡಲಿಲ್ಲ. ಹಾಲೆಪ್ ಪ್ರಿ ಕ್ವಾರ್ಟರ್‌ಗೆ ಅಗ್ರ 6 ಶ್ರೇಯಾಂಕಿತ ಆಟಗಾರ್ತಿಯರ ಪೈಕಿ ಹಾಲಿ ಚಾಂಪಿಯನ್ ರೊಮೇನಿಯಾದ ಸಿಮೋನಾ ಹಾಲೆಪ್ ಮಾತ್ರ ಅಂತಿಮ 16ರ ಸುತ್ತಿಗೆ ಪ್ರವೇಶಿಸಿದ್ದಾರೆ. 3ನೇ ಶ್ರೇಯಾಂಕ ಹೊಂದಿರುವ ಹಾಲೆಪ್, ಶನಿವಾರ ನಡೆದ 3ನೇ ಸುತ್ತಿನ ಪಂದ್ಯದಲ್ಲಿ ಉಕ್ರೇನ್‌ನ ಲೆಸಿಯಾ ಸುರೆಂಕೊ ವಿರುದ್ಧ 6-2, 6-1 ನೇರ ಸೆಟ್ ಗಳಲ್ಲಿ ಸುಲಭ ಜಯ ಸಾಧಿಸಿದರು

ಪೇಸ್ ಜೋಡಿಗೆ ಸೋಲು

ಪುರುಷರ ಡಬಲ್ಸ್ 2ನೇ ಸುತ್ತಿನಲ್ಲಿ ಭಾರತದ ಲಿಯಾಂಡರ್ ಪೇಸ್ ಹಾಗೂ ಫ್ರಾನ್ಸ್‌ನ ಬೆನೊಯ್ ಪೇರ್ ಜೋಡಿ ಕೊಲಂಬಿಯಾದ ರಾಬರ್ಟ್ ಫರ್ರಾ ಹಾಗೂ ಜುವಾನ್ ಕಬಾಲ್ ಜೋಡಿ ವಿರುದ್ಧ 0-6, 6-4, 3-6 ಸೆಟ್‌ಗಳಲ್ಲಿ ಸೋಲುಂಡು ಹೊರಬಿತ್ತು.