2019ರ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ, ಹಲವು ಕ್ರಿಕೆಟಿಗರು ರಾಜಕೀಯದತ್ತ ವಾಲುತ್ತಿದ್ದಾರೆ. ಕ್ರಿಕೆಟ್ ಮೈದಾನದಲ್ಲಿ ಸೈ ಎನಿಸಿದ ಕ್ರಿಕೆಟಿಗರು ಇದೀಗ ರಾಜಕೀಯದಲ್ಲಿ ಅದೃಷ್ಠ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ಇದೀಗ ಟೀಂ ಇಂಡಿಯಾ ಮಾಜಿ ಕ್ರಿಕೆಟಿ, ಅಧೀಕೃತವಾಗಿ ರಾಜಕೀಯಕ್ಕೆ ಧುಮುಕಿದ್ದಾರೆ. ಆ ಕ್ರಿಕೆಟಿಗ ಯಾರು?
ವಿಶಾಖಪಟ್ಟಣಂ(ಜೂ.29): ಕ್ರಿಕೆಟಿಗರು ರಾಜಕೀಯದಲ್ಲಿ ಅದೃಷ್ಠ ಪರೀಕ್ಷೆ ನಡೆಸುತ್ತಿರೋದು ಇದೇ ಮೊದಲಲ್ಲ. ಮೊಹಮ್ಮದ್ ಅಜರುದ್ದೀನ್, ನವಜೋತ್ ಸಿಂಗ್ ಸಿದ್ದು ಸೇರಿದಂತೆ ಹಲವು ಕ್ರಿಕೆಟಿಗರು ರಾಜಕೀಯದಲ್ಲಿ ಸಕ್ರೀಯರಾಗಿದ್ದಾರೆ. ಇನ್ನು ಮೊಹಮ್ಮದ್ ಕೈಫ್, ಎಸ್ ಶ್ರೀಶಾಂತ್ ಸೇರಿದಂತೆ ಹಲವು ಕ್ರಿಕೆಟಿಗರು ರಾಜಕೀಯದಲ್ಲಿ ಅದೃಷ್ಠ ಪರೀಕ್ಷೆ ನಡೆಸಿದ್ದಾರೆ. ಇದೀಗ ಟೀಂ ಇಂಡಿಯಾದ ಮತ್ತೊರ್ವ ಕ್ರಿಕೆಟಿಗ ರಾಜಕೀಯಕ್ಕೆ ಧುಮುಕಿದ್ದಾರೆ.
ಕ್ರಿಕೆಟ್‌ಗೆ ನಿವೃತ್ತಿ ಹೇಳಿದ ಬಳಿಕ ಇದೀಗ ರಾಜಕೀಯಕ್ಕೆ ಧುಮುಕಿದ ಮತ್ತೊರ್ವ ಕ್ರಿಕೆಟಿಗ ಬೇರೆ ಯಾರು ಅಲ್ಲ, ಆಂಧ್ರಪ್ರದೇಶದ ಕ್ರಿಕೆಟಿಗ ವೇಣುಗೋಪಾಲ್ ರಾವ್. ತೆಲುಗು ಜನಪ್ರೀಯ ನಟ ಪವನ್ ಕಲ್ಯಾಣ ಜನ ಸೇನಾ ಪಕ್ಷಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೇಣುಗೋಪಾಲ್ ರಾವ್ ಸೇರ್ಪಡೆಗೊಂಡಿದ್ದಾರೆ. ವಿಶಾಖಪಟ್ಟಣದಲ್ಲಿ ಜನಾ ಸೇನಾ ಪಕ್ಷದ ಮುಖ್ಯಸ್ಥ , ನಟ ಪವನ್ ಕಲ್ಯಾಣ್ ಭೇಟಿ ಮಾಡಿದ ವೇಣು ಗೋಪಾಲ್ ರಾವ್ ಪಕ್ಷಕ್ಕೆ ಅಧೀಕೃತವಾಗಿ ಸೇರ್ಪಡೆಗೊಂಡರು.
ವೇಣುಗೋಪಾಲ್ ರಾವ್ 2005ರಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದರು. 1 ವರ್ಷಗಳ ಅವಧಿಯಲ್ಲಿ 16 ಏಕದಿನ ಪಂದ್ಯ ಆಡಿದ ವೇಣುಗೋಪಾಲ್, ಐಪಿಎಲ್ ಟೂರ್ನಿಯಲ್ಲಿ ಡೆಕ್ಕನ್ ಚಾರ್ಜಸ್, ಡೆಲ್ಲಿ ಡೇರ್‌ಡೆವಿಲ್ಸ್ ಹಾಗೂ ಸನ್ ರೈಸರ್ಸ್ ಹೈದಾರಾಬಾದ್ ಪರ ಕಣಕ್ಕಿಳಿದಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪವನ್ ಕಲ್ಯಾಣ್ ನೇತ್ವದ ಜನ ಸೇನಾ ಪಕ್ಷ 175 ಸ್ಥಾನಗಳಿಗೆ ಸ್ಪರ್ಧಿಸಲಿದೆ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ. ಹೀಗಾಗಿ ಪಕ್ಷವನ್ನ ಬಲಪಡಿಸಲು ಪವನ್ ಕಲ್ಯಾಣ್ ಇದೀಗ ಹಲವು ಯೋಜನೆಗಳನ್ನ ರೂಪಿಸಿದ್ದಾರೆ.
