ನವದೆಹಲಿ(ಜು.29): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಕಪಿಲ್ ದೇವ್, ಭಾರತಕ್ಕೆ ವಿಶ್ವಕಪ್ ತಂದುಕೊಟ್ಟ ಮೊದಲ ನಾಯಕ. ಆಲ್ರೌಂಡರ್ ಆಗಿ, ನಾಯಕನಾಗಿ ಮಿಂಚಿನ ಪ್ರದರ್ಶನ ನೀಡಿರುವ ಕಪಿಲ್ ದೇವ್ ಕ್ರಿಕೆಟ್‌ಗೆ ವಿದಾಯ ಹೇಳಿ 24 ವರ್ಷಗಳೇ ಉರುಳಿವೆ. ಇದೀಗ ಕಪಿಲ್ ದೇವ್ ಮತ್ತೆ ಭಾರತ ತಂಡವನ್ನ ಪ್ರತಿನಿಧಿಸಲು ಸಜ್ಜಾಗಿದ್ದಾರೆ.

59 ವರ್ಷದ ಕಪಿಲ್ ದೇವ್ ಮತ್ತೆ ಭಾರತ ತಂಡದ ಜರ್ಸಿ ತೊಡಲು ರೆಡಿಯಾಗಿದ್ದಾರೆ. ಆದರೆ ಈ ಬಾರಿ ಕಪಿಲ್ ಪ್ರತಿನಿಧಿಸುತ್ತಿರುವುದು ಕ್ರಿಕೆಟ್ ತಂಡದಲ್ಲಲ್ಲ, ಬದಲಾಗಿ ಭಾರತ ಗಾಲ್ಫ್ ತಂಡದಲ್ಲಿ. ಭಾರತದ ಹಿರಿಯ ಗಾಲ್ಫ್ ತಂಡಕ್ಕೆ ಕಪಿಲ್ ದೇವ್ ಆಯ್ಕಯಾಗಿದ್ದಾರೆ.

 

 

ಜುಲೈನಲ್ಲಿ ನಡೆದ ಆಲ್ ಇಂಡಿಯಾ ಸೀನಿಯರ್ ಟೂರ್ನೆಂಟ್‌ನಲ್ಲಿ ಕಪಿಲ್ ದೇವ್ ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ 2018ರ ಏಷ್ಯಾ ಪೆಸಿಫಿಕ್ ಸೀನಿಯರ್ಸ್ ಗಾಲ್ಫ್ ಟೂರ್ನಿಯಲ್ಲಿ ಕಪಿಲ್ ದೇವ್ ಭಾರತ ತಂಡವನ್ನ ಪ್ರತಿನಿಧಿಸಲಿದ್ದಾರೆ.

ಏಷ್ಯಾ ಪೆಸಿಫಿಕ್ ಸೀನಿಯರ್ಸ್ ಗಾಲ್ಫ್ ಟೂರ್ನಿ ಅಕ್ಟೋಬರ್ 17 ರಿಂದ 19ವರೆಗೆ ನಡೆಯಲಿದೆ. ಜಪಾನ್‌ನಲ್ಲಿ ನಡೆಯಲಿರುವ ಪ್ರತಿಷ್ಠಿತ ಟೂರ್ನಿಯಲ್ಲಿ ಕ್ರಿಕೆಟ್ ದಿಗ್ಗಜ ಕಪಿಲ್ ಕಣಕ್ಕಿಳಿಯುತ್ತಿರುವುದು ಕ್ರಿಕೆಟ್ ಅಭಿಮಾನಿಗಳ ಸಂತಸವನ್ನ ಇಮ್ಮಡಿಗೊಳಿಸಿದೆ.