ನವದೆಹಲಿ[ಜು.18]: ಭಾರತದ ವಿಶ್ವಕಪ್‌ ವಿಜೇತ ನಾಯಕ ಕಪಿಲ್‌ ದೇವ್‌ ನೇತೃತ್ವದ ತಾತ್ಕಾಲಿಕ ಸಮಿತಿ ಭಾರತ ತಂಡದ ನೂತನ ಪ್ರಧಾನ ಕೊಚ್‌ ಆಯ್ಕೆ ಪ್ರಕ್ರಿಯೆ ನಡೆಸಲು ಮುಂಚೂಣಿಯಲ್ಲಿದೆ. ಆದರೆ ಸುಪ್ರೀಂ ಕೋರ್ಟ್‌ ವಿಚಾರಣೆ ಬಳಿಕವಷ್ಟೇ ಬಿಸಿಸಿಐ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿದೆ.

ಯಾರಾಗಲಿದ್ದಾರೆ ಟೀಂ ಇಂಡಿಯಾದ ಹೊಸ ಕೋಚ್‌?

ಸುಪ್ರೀಂ ಕೋರ್ಟ್‌ ನೇಮಿತ ಬಿಸಿಸಿಐ ಆಡಳಿತ ಸಮಿತಿ (ಸಿಒಎ), ಸಚಿನ್‌ ತೆಂಡುಲ್ಕರ್‌, ವಿವಿಎಸ್‌ ಲಕ್ಷ್ಮಣ್‌ ಹಾಗೂ ಸೌರವ್‌ ಗಂಗೂಲಿ ಅವರನ್ನೊಳಗೊಂಡ ಕ್ರಿಕೆಟ್‌ ಸಲಹಾ ಸಮಿತಿಯನ್ನು ಮುಂದುವರಿಸುವ ಬಗ್ಗೆ ನ್ಯಾಯಾಲಯದ ನಿರ್ದೇಶನವನ್ನು ಕೋರಿದೆ. ಒಂದೊಮ್ಮೆ ನ್ಯಾಯಾಲಯ ಯಾವುದೇ ನಿರ್ದೇಶನ ನೀಡದಿದ್ದರೆ, ಸಿಒಎ ಕಪಿಲ್‌, ಶಾಂತಾ ರಂಗಸ್ವಾಮಿ ಹಾಗೂ ಆನ್ಶುಮಾನ್‌ ಗಾಯಕ್ವಾಡ್‌ ಅವರಿರುವ ತಾತ್ಕಾಲಿಕ ಸಲಹಾ ಸಮಿತಿಗೆ ಕೋಚ್‌ ಆಯ್ಕೆ ಪ್ರಕ್ರಿಯೆಯನ್ನು ಹಸ್ತಾಂತರಿಸಬಹುದು. 

ಭಾರತ ಮಹಿಳಾ ಕ್ರಿಕೆಟ್‌ ತಂಡಕ್ಕೆ ಡಬ್ಯುವಿ ರಾಮನ್‌ ಅವರನ್ನು ಇದೇ ಸಮಿತಿ ಆಯ್ಕೆ ಮಾಡಿತ್ತು. ಆದರೆ ಆ ಸಂದರ್ಭದಲ್ಲಿ ಸಿಒಎ ಸದಸ್ಯೆ ಡಯಾನ ಎಡುಲ್ಜಿ, ಕೋಚ್‌ ಆಯ್ಕೆಯನ್ನು ಸಲಹಾ ಸಮಿತಿಯೇ ನಡೆಸಬೇಕು. ತಾತ್ಕಾಲಿಕ ಸಮಿತಿ ನಡೆಸಿರುವ ಆಯ್ಕೆ ಅಸಂವಿಧಾನಿಕ ಎಂದಿದ್ದರು. ಹೀಗಾಗಿ ಈ ಬಾರಿಯೂ ಸಿಒಎನಲ್ಲಿ ಒಡಕು ಉಂಟಾಗುವ ಸಾಧ್ಯತೆ ಇದೆ.

ಕೋಚ್‌ ಹುದ್ದೆಗೆ ಅರ್ಜಿ ಆಹ್ವಾನಿಸಿರುವ ಬಿಸಿಸಿಐ, ಅರ್ಜಿ ಸಲ್ಲಿಸಲು ಜು.30ರ ಗಡುವು ನೀಡಿದೆ. ಹಾಲಿ ಕೋಚ್‌ ರವಿಶಾಸ್ತ್ರಿಯೇ 2ನೇ ಅವಧಿಗೆ ನೇಮಕಗೊಳ್ಳುವ ಸಾಧ್ಯತೆ ಇದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.