ಪ್ರಧಾನ ಕೋಚ್‌ ಸೇರಿದಂತೆ ಬ್ಯಾಟಿಂಗ್‌, ಬೌಲಿಂಗ್‌, ಫೀಲ್ಡಿಂಗ್‌ ಕೋಚ್‌ಗಳ ಹುದ್ದೆಗೆ ಹೊಸದಾಗಿ ಅರ್ಜಿ ಆಹ್ವಾನಿಸಿದ ಬಿಸಿಸಿಐ. ಅರ್ಜಿ ಸಲ್ಲಿಸಲು ಜು.30 ಕೊನೆ ದಿನ. ಟೀಂ ಇಂಡಿಯಾ ಕೋಚ್ ಆಗಲು ಇರೋ ಮಾನದಂಡಗಳೇನು? ಯಾರೆಲ್ಲಾ ವಿಶ್ವದ ಶ್ರೀಮಂತ ಕ್ರಿಕೆಟ್ ಕೋಚ್ ಹುದ್ದೆಗೆ ಅರ್ಜಿ ಹಾಕಬಹುದು? ಇಲ್ಲಿದೆ ವಿವರ. 

ನವದೆಹಲಿ(ಜು.17):  ಐಸಿಸಿ ಏಕದಿನ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಸೋತು ತವರಿಗೆ ವಾಪಸಾಗಿರುವ ಭಾರತ ಕ್ರಿಕೆಟ್‌ ತಂಡದಲ್ಲಿ ಕೆಲ ಬದಲಾವಣೆಗಳಾಗುವುದು ಖಚಿತವಾಗಿದೆ. ತಂಡದ ಕೋಚಿಂಗ್‌ ಸಿಬ್ಬಂದಿಯನ್ನು ಹೊಸದಾಗಿ ಆಯ್ಕೆ ಮಾಡಲು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧರಿಸಿದ್ದು, ಮಂಗಳವಾರ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಭಾರತ ತಂಡದ ಕೋಚ್‌ ಆಗುವವರು 60 ವರ್ಷಕ್ಕಿಂತ ಕೆಳಪಟ್ಟವರಾಗಿರಬೇಕು ಹಾಗೂ ಕನಿಷ್ಠ 2 ವರ್ಷ ಅಂತಾರಾಷ್ಟ್ರೀಯ ತಂಡದ ಕೋಚ್‌ ಆಗಿದ್ದ ಅನುಭವವಿರಬೇಕು ಎಂದು ಬಿಸಿಸಿಐ ಷರತ್ತು ವಿಧಿಸಿದೆ.

ಇದನ್ನೂ ಓದಿ: ಬಿಸಿಸಿಐ ಪ್ರಶ್ನೆಗೆ ತಬ್ಬಿಬ್ಬಾದ ಟೀಂ ಇಂಡಿಯಾ ಆಯ್ಕೆ ಸಮಿತಿ!

ವಿಶ್ವಕಪ್‌ ಟೂರ್ನಿ ಮುಕ್ತಾಯಗೊಳ್ಳುತ್ತಿದ್ದಂತೆ ಹಾಲಿ ಪ್ರಧಾನ ಕೋಚ್‌ ರವಿಶಾಸ್ತ್ರಿ, ಬ್ಯಾಟಿಂಗ್‌ ಕೋಚ್‌ ಸಂಜಯ್‌ ಬಾಂಗರ್‌, ಬೌಲಿಂಗ್‌ ಕೋಚ್‌ ಭರತ್‌ ಅರುಣ್‌ ಹಾಗೂ ಫೀಲ್ಡಿಂಗ್‌ ಕೋಚ್‌ ಆರ್‌.ಶ್ರೀಧರ್‌ರ ಗುತ್ತಿಗೆ ಅಂತ್ಯಗೊಂಡಿತು. ಆದರೆ ಬಿಸಿಸಿಐ, ವೆಸ್ಟ್‌ಇಂಡೀಸ್‌ ಪ್ರವಾಸದ ವರೆಗೂ ಅವರನ್ನು ಮುಂದುವರಿಸಲು ನಿರ್ಧರಿಸಿದ್ದು, ಗುತ್ತಿಗೆ ಅವಧಿಯನ್ನು 45 ದಿನಗಳಿಗೆ ವಿಸ್ತರಿಸಿದೆ. ವಿಂಡೀಸ್‌ನಿಂದ ತಂಡ ವಾಪಸಾದ ಬಳಿಕ, ತವರಿನ ಸರಣಿಗಳು ಆರಂಭಗೊಳ್ಳಲಿದ್ದು ಮೊದಲು ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಆಡಲಿದೆ. ಆ ವೇಳೆಗೆ ಹೊಸ ಕೋಚ್‌ ನೇಮಿಸಲು ಬಿಸಿಸಿಐ ನಿರ್ಧರಿಸಿದೆ.

ಇದನ್ನೂ ಓದಿ: ಸೋಲಿನ ಬೆನ್ನಲ್ಲೇ ಕೊಹ್ಲಿ,ಶಾಸ್ತ್ರಿಗೆ ಬಿಸಿಸಿಐ ಬುಲಾವ್! 

ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಜು.30ರ ಸಂಜೆ 5 ಗಂಟೆಯ ಗಡುವು ನೀಡಿದೆ. ಜತೆಗೆ ಕೆಲ ಮಾನದಂಡಗಳನ್ನು ವಿಧಿಸಿದೆ. 2017ರಲ್ಲಿ ರವಿಶಾಸ್ತ್ರಿಯನ್ನು ಕೋಚ್‌ ಆಗಿ ನೇಮಕ ಮಾಡುವ ಮುನ್ನ ಬಿಸಿಸಿಐ 9 ಅಂಶವುಳ್ಳ ಅರ್ಹತಾ ಮಾನದಂಡಗಳನ್ನು ಪ್ರಕಟಿಸಿತ್ತು. ಅವುಗಳಲ್ಲಿ ಕೆಲವಕ್ಕೆ ಸ್ಪಷ್ಟತೆ ಇರಲಿಲ್ಲ. ಆದರೆ ಈ ಬಾರಿ ಎಲ್ಲಾ ಕೋಚ್‌ಗಳ ಹುದ್ದೆಗೆ ಕೇವಲ 3 ಮಾನದಂಡಗಳನ್ನು ವಿಧಿಸಿದೆ.

‘ಹಾಲಿ ಕೋಚಿಂಗ್‌ ಸಿಬ್ಬಂದಿಗೆ ಆಯ್ಕೆ ಪ್ರಕ್ರಿಯೆಗೆ ನೇರ ಪ್ರವೇಶ ದೊರೆಯಲಿದೆ’ ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಶಾಸ್ತ್ರಿ, ಭರತ್‌ ಅರುಣ್‌, ಬಾಂಗರ್‌ ಹಾಗೂ ಶ್ರೀಧರ್‌ ಭಾರತ ತಂಡದ ಕೋಚ್‌ಗಳಾಗಿ ಮುಂದುವರಿಯುವ ಇಚ್ಛೆ ಹೊಂದಿದ್ದರೆ, ಬಿಸಿಸಿಐನ ಕ್ರಿಕೆಟ್‌ ಸಲಹಾ ಸಮಿತಿ ನಡೆಸುವ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ. ಆದರೆ ಫಿಸಿಯೋ ಪ್ಯಾಟ್ರಿಕ್‌ ಫರ್ಹಾರ್ಟ್‌ ಹಾಗೂ ಟ್ರೈನರ್‌ ಶಂಕರ್‌ ಬಾಸು ರಾಜೀನಾಮೆ ನೀಡಿದ್ದು, ಆ ಹುದ್ದೆಗಳಿಗೆ ಹೊಸದಾಗಿ ನೇಮಕವಾಗಬೇಕಿದೆ.

ಶಾಸ್ತ್ರಿಗೆ ಸಿಗಲಿದೆಯೇ 2ನೇ ಅವಕಾಶ?

2017ರಲ್ಲಿ ಅನಿಲ್‌ ಕುಂಬ್ಳೆ ಪ್ರಧಾನ ಕೋಚ್‌ ಸ್ಥಾನದಿಂದ ದಿಢೀರನೆ ಕೆಳಗಿಳಿದ ಬಳಿಕ ಬಿಸಿಸಿಐ ಕ್ರಿಕೆಟ್‌ ಸಲಹಾ ಸಮಿತಿ ರವಿಶಾಸ್ತ್ರಿಯನ್ನು ಕೋಚ್‌ ಆಗಿ ನೇಮಕ ಮಾಡಿತ್ತು. ನಾಯಕ ವಿರಾಟ್‌ ಕೊಹ್ಲಿ ಜತೆಗೆ ಶಾಸ್ತ್ರಿ ಉತ್ತಮ ಸಂಬಂಧ ಹೊಂದಿದ್ದು, ಅವರನ್ನೇ ಮುಂದುವರಿಸುವಂತೆ ತಂಡ ಕೇಳಿಕೊಳ್ಳುವ ಸಾಧ್ಯತೆ ಇದೆ. ಆದರೆ ಶಾಸ್ತ್ರಿ ಮಾರ್ಗದರ್ಶನದಲ್ಲಿ ಭಾರತ ಯಾವುದೇ ಐಸಿಸಿ ಟೂರ್ನಿಗಳಲ್ಲಿ ಗೆಲುವು ಸಾಧಿಸಲಿಲ್ಲ. 2019ರ ಏಕದಿನ ವಿಶ್ವಕಪ್‌ನಲ್ಲಿ ತಂಡ ಟ್ರೋಫಿ ಎತ್ತಿಹಿಡಿಯುವಲ್ಲಿ ವಿಫಲವಾಯಿತು. ಆದರೆ ಈ ವರ್ಷ ಆಸ್ಪ್ರೇಲಿಯಾದಲ್ಲಿ ಚೊಚ್ಚಲ ಟೆಸ್ಟ್‌ ಸರಣಿ ಗೆದ್ದಿದ್ದು 57 ವರ್ಷದ ಶಾಸ್ತ್ರಿ 2ನೇ ಬಾರಿಗೆ ಕೋಚ್‌ ಆಗಲು ನೆರವಾಗಬಹುದು. 2014ರ ಆಗಸ್ಟ್‌ನಿಂದ 2016ರ ಜೂನ್‌ ವರೆಗೂ ಶಾಸ್ತ್ರಿ ಭಾರತದ ಕ್ರಿಕೆಟ್‌ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು.

ಕೋಚ್‌ ಆಗಲು ಮಾನದಂಡಗಳೇನು?

ಪ್ರಧಾನ ಕೋಚ್‌

1. ಟೆಸ್ಟ್‌ ಆಡುವ ತಂಡದ ಪ್ರಧಾನ ಕೋಚ್‌ ಆಗಿ ಕನಿಷ್ಠ 2 ವರ್ಷ ಕಾರ್ಯ ನಿರ್ವಹಿಸಿದ ಅನುಭವವಿರಬೇಕು. ಇಲ್ಲವೇ ಐಸಿಸಿ ಸಹಾಯಕ ರಾಷ್ಟ್ರ ತಂಡ/ ಐಪಿಎಲ್‌/ಪ್ರಥಮ ದರ್ಜೆ ತಂಡಗಳು/ರಾಷ್ಟ್ರೀಯ ‘ಎ’ ತಂಡದ ಕೋಚ್‌ ಆಗಿ ಕನಿಷ್ಠ 3 ವರ್ಷ ಕೆಲಸ ಮಾಡಿದ ಅನುಭವವಿರಬೇಕು.

2. ಕನಿಷ್ಠ 30 ಟೆಸ್ಟ್‌ ಇಲ್ಲವೇ 50 ಏಕದಿನ ಪಂದ್ಯಗಳನ್ನು ಆಡಿರಬೇಕು. ಇಲ್ಲವೇ ಬಿಸಿಸಿಐನ ಲೆವೆಲ್‌ 3 / ಸಮಾನ ಪ್ರಮಾಣ ಪತ್ರ ಹೊಂದಿರಬೇಕು.

3. 60 ವರ್ಷಕ್ಕಿಂತ ಕೆಳಪಟ್ಟವರಾಗಿರಬೇಕು.

ಬ್ಯಾಟಿಂಗ್‌/ಬೌಲಿಂಗ್‌/ಫೀಲ್ಡಿಂಗ್‌ ಕೋಚ್‌

1. ಟೆಸ್ಟ್‌ ಆಡುವ ತಂಡದ ಬ್ಯಾಟಿಂಗ್‌/ಬೌಲಿಂಗ್‌/ಫೀಲ್ಡಿಂಗ್‌ ಕೋಚ್‌ ಆಗಿ ಕನಿಷ್ಠ 2 ವರ್ಷ ಅನುಭವವಿರಬೇಕು. ಇಲ್ಲವೇ ಐಸಿಸಿ ಸಹಾಯಕ ರಾಷ್ಟ್ರ ತಂಡ/ ಐಪಿಎಲ್‌/ಪ್ರಥಮ ದರ್ಜೆ ತಂಡಗಳು/ರಾಷ್ಟ್ರೀಯ ‘ಎ’/ ಅಂಡರ್‌-19 ತಂಡದ ಕೋಚ್‌ ಆಗಿ ಕನಿಷ್ಠ 3 ವರ್ಷ ಕೆಲಸ ಮಾಡಿದ ಅನುಭವವಿರಬೇಕು.

2. ಕನಿಷ್ಠ 10 ಟೆಸ್ಟ್‌ ಇಲ್ಲವೇ 25 ಏಕದಿನ ಪಂದ್ಯಗಳನ್ನು ಆಡಿರಬೇಕು. ಇಲ್ಲವೇ ಬಿಸಿಸಿಐನ ಲೆವೆಲ್‌ 3 / ಸಮಾನ ಪ್ರಮಾಣ ಪತ್ರ ಹೊಂದಿರಬೇಕು.

3. 60 ವರ್ಷಕ್ಕಿಂತ ಕೆಳಪಟ್ಟವರಾಗಿರಬೇಕು.