ಕೊನೆಯ 30 ನಿಮಿಷದಲ್ಲಿ 3 ಗೋಲು ಬಾರಿಸಿ ಜಪಾನ್‌ಗೆ ಬೆಲ್ಜಿಯಂ ಶಾಕ್

FIFA World Cup Belgium Defeats Japan Enters  Quarter Final
Highlights

  • 0-2ರಿಂದ ಹಿಂದಿದ್ದ ಬೆಲ್ಜಿಯಂ ಕೊನೆ 30 ನಿಮಿಷಗಳಲ್ಲಿ 3 ಗೋಲು!
  • ಶುಕ್ರವಾರ ನಡೆಯಲಿರುವ ಕ್ವಾರ್ಟರ್ ಫೈನಲ್‌ನಲ್ಲಿ ಬೆಲ್ಜಿಯಂ ಹಾಗೂ ಬ್ರೆಜಿಲ್ ಮುಖಾಮುಖಿ

ರೊಸ್ಟೊವ್ ಆನ್ ಡೊನ್: ಫುಟ್ಬಾಲ್ ವಿಶ್ವಕಪ್‌ನ ಮತ್ತೊಂದು ಪ್ರಿ ಕ್ವಾರ್ಟರ್ ಫೈನಲ್ ಪಂದ್ಯ ರೋಚಕ ಅಂತ್ಯಕ್ಕೆ ಸಾಕ್ಷಿಯಾಯಿತು.  ಇಲ್ಲಿ ನಡೆದ ಜಪಾನ್ ವಿರುದ್ಧ ಅಂತಿಮ 16ರ ಸುತ್ತಿನ ಪಂದ್ಯದಲ್ಲಿ 3-2 ಗೋಲುಗಳಲ್ಲಿ ಗೆಲುವು ಸಾಧಿಸಿದ ಬೆಲ್ಜಿಯಂ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.

0-2ರಿಂದ ಹಿಂದಿದ್ದ ಬೆಲ್ಜಿಯಂ ಕೊನೆ 30 ನಿಮಿಷಗಳಲ್ಲಿ 3 ಗೋಲು ಬಾರಿಸಿ ಅನಿರೀಕ್ಷಿತ ರೀತಿಯಲ್ಲಿ ಪಂದ್ಯವನ್ನು ತನ್ನದಾಗಿಸಿಕೊಂಡಿತು. 90+4 ನಿಮಿಷದಲ್ಲಿ ಗೋಲು ಗಳಿಸಿದ ನೇಸರ್ ಚಡ್ಲಿ ಪಂದ್ಯದ ಫಲಿತಾಂಶವನ್ನೇ ಬದಲಿಸಿದರು.

ಮೊದಲಾರ್ಧ ಗೋಲು ರಹಿತ ಮುಕ್ತಾಯಗೊಂಡ ಬಳಿಕ 48ನೇ ನಿಮಿಷದಲ್ಲಿ ಗೆಂಕಿ ಹರಗುಚಿ ಜಪಾನ್ ಪರ ಮೊದಲ ಗೋಲು ದಾಖಲಿಸಿದರು. ಇದಾದ ನಾಲ್ಕೇ ನಿಮಿಷಗಳಲ್ಲಿ (52ನೇ ನಿಮಿಷ) ಟಕಾಶಿ ಇನುಯಿ ಜಪಾನ್ ಮುನ್ನಡೆಯನ್ನು 2-0ಗೇರಿಸಿದರು. ಪಂದ್ಯದ ಮೇಲೆ ಹಿಡಿತ ಸಾಧಿಸಿ ಗೆಲುವಿನ ಕನಸು ಕಾಣುತ್ತಿದ್ದ ಜಪಾನ್‌ಗೆ 69ನೇ ನಿಮಿಷದಲ್ಲಿ ಆಘಾತ ಎದುರಾಯಿತು. 

69ನೇ ನಿಮಿಷದಲ್ಲಿ ಜಾನ್ ವೆರ್ಟೊನ್ಗೆನ್ ಮೊದಲ ಗೋಲು ಬಾರಿಸಿದರು. 74ನೇ ನಿಮಿಷದಲ್ಲಿ ಫೆಲೈನಿ ಆಕರ್ಷಕ ಹೆಡ್ಡರ್ ಮೂಲಕ ಗೋಲು ಗಳಿಸಿ ತಂಡ 2-2ರಲ್ಲಿ ಸಮಬಲ ಸಾಧಿಸಲು ಕಾರಣವಾದರು. ನಿಗದಿತ 90 ನಿಮಿಷಗಳ ಮುಕ್ತಾಯಕ್ಕೆ ಉಭಯ ತಂಡಗಳು ಸಮಬಲ ಸಾಧಿಸಿದ್ದರಿಂದ ಪಂದ್ಯ ಹೆಚ್ಚುವರಿ ನಿಮಿಷಕ್ಕೆ ಹೋಗಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ನೇಸರ್ ಅಮೋಘ ಗೋಲು ಗಳಿಸಿ, ಬೆಲ್ಜಿಯಂ ಜಯ ಸಾಧಿಸಲು ಕಾರಣರಾದರು.

ಈ ಸೋಲಿನೊಂದಿಗೆ ಮೊದಲ ಬಾರಿಗೆ ವಿಶ್ವಕಪ್ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸುವ ಜಪಾನ್ ಕನಸು ನುಚ್ಚು ನೂರಾಯಿತು.  ಶುಕ್ರವಾರ (ಜುಲೈ 6ರಂದು) ನಡೆಯಲಿರುವ ಕ್ವಾರ್ಟರ್ ಫೈನಲ್‌ನಲ್ಲಿ ಬೆಲ್ಜಿಯಂ ಹಾಗೂ ಬ್ರೆಜಿಲ್ ಮುಖಾಮುಖಿಯಾಗಲಿವೆ. 

loader