ಫಿಫಾ ಫುಟ್ಬಾಲ್‌ ವಿಶ್ವಕಪ್‌ 2018: ಇಂದು ಫ್ರಾನ್ಸ್‌-ಬೆಲ್ಜಿಯಂ ಸೆಮೀಸ್‌ ಸೆಣಸು

ಈ ವಿಶ್ವಕಪ್‌ನಲ್ಲಿ 2ನೇ ಅತಿ ಕಿರಿಯ ತಂಡವನ್ನು ಹೊಂದಿರುವ ಫ್ರಾನ್ಸ್‌, ಯಾವುದೇ ಭೀತಿ ಪ್ರದರ್ಶಿಸದೆ ಸೆಮಿಫೈನಲ್‌ ಪ್ರವೇಶಿಸಿದೆ. 2006ರ ಬಳಿಕ ಮೊದಲ ಬಾರಿಗೆ ಉಪಾಂತ್ಯಕ್ಕೇರಿರುವ ಫ್ರಾನ್ಸ್‌ ತನ್ನ 19 ವರ್ಷದ ತಾರಾ ಸ್ಟ್ರೈಕರ್ ಕಿಲಿಯನ್‌ ಎಂಬಾಪೆ ಹಾಗೂ ಅನನುಭವಿ ಆಕ್ರಮಣಕಾರಿ ಆಟಗಾರರಾದ ಬೆನ್ಜಮಿನ್‌ ಪವಾರ್ಡ್‌ ಹಾಗೂ ಲುಕಾಸ್‌ ಹೆರ್ನಾಂಡೆಜ್‌ ಮೇಲೆ ಹೆಚ್ಚಿನ ವಿಶ್ವಾಸ ಇರಿಸಿದೆ. 

FIFA World Cup 2018: Very little to choose between France and Belgium in last-four clash

ಸೇಂಟ್‌ ಪೀಟ​ರ್ಸ್’ಬರ್ಗ್[ಜು.10]: ಆಕ್ರಮಣಕಾರಿ ಮನಸ್ಥಿತಿ ಹೊಂದಿರುವ ಫ್ರಾನ್ಸ ಹಾಗೂ ಬೆಲ್ಜಿಯಂ, ಇಲ್ಲಿ ನಡೆಯಲಿರುವ ಫಿಫಾ ಫುಟ್ಬಾಲ್‌ ವಿಶ್ವಕಪ್‌ನ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಸೆಣಸಾಡಲಿದ್ದು, ಗೋಲಿನ ಸುರಿಮಳೆ ನಿರೀಕ್ಷೆ ಮಾಡಬಹುದಾಗಿದೆ. 3 ವರ್ಷಗಳ ಬಳಿಕ ಮುಖಾಮುಖಿಯಾಗುತ್ತಿರುವ ಯುರೋಪ್‌ನ ನೆರೆ ಹೊರೆಯ ರಾಷ್ಟ್ರಗಳ ಕಾಲ್ಚೆಂಡಿನ ಸಮರ ಭಾರೀ ಕುತೂಹಲ ಮೂಡಿಸಿದೆ.

ಈ ವಿಶ್ವಕಪ್‌ನಲ್ಲಿ 2ನೇ ಅತಿ ಕಿರಿಯ ತಂಡವನ್ನು ಹೊಂದಿರುವ ಫ್ರಾನ್ಸ್‌, ಯಾವುದೇ ಭೀತಿ ಪ್ರದರ್ಶಿಸದೆ ಸೆಮಿಫೈನಲ್‌ ಪ್ರವೇಶಿಸಿದೆ. 2006ರ ಬಳಿಕ ಮೊದಲ ಬಾರಿಗೆ ಉಪಾಂತ್ಯಕ್ಕೇರಿರುವ ಫ್ರಾನ್ಸ್‌ ತನ್ನ 19 ವರ್ಷದ ತಾರಾ ಸ್ಟ್ರೈಕರ್ ಕಿಲಿಯನ್‌ ಎಂಬಾಪೆ ಹಾಗೂ ಅನನುಭವಿ ಆಕ್ರಮಣಕಾರಿ ಆಟಗಾರರಾದ ಬೆನ್ಜಮಿನ್‌ ಪವಾರ್ಡ್‌ ಹಾಗೂ ಲುಕಾಸ್‌ ಹೆರ್ನಾಂಡೆಜ್‌ ಮೇಲೆ ಹೆಚ್ಚಿನ ವಿಶ್ವಾಸ ಇರಿಸಿದೆ. ಇವರ ಜತೆಗೆ ಆ್ಯಂಟೋನಿ ಗ್ರೀಜ್‌ಮನ್‌, ಆಲಿವರ್‌ ಗಿರೋಡ್‌, ಪೌಲ್‌ ಪೋಗ್ಬಾರಂತಹ ವಿಶ್ವ ಶ್ರೇಷ್ಠಾ ಆಟಗಾರ ಬಲ ಫ್ರಾನ್ಸ್‌ ಫೈನಲ್‌ ಕನಸು ಕಾಣುವಂತೆ ಮಾಡಿದೆ. ತಂಡದ ಗೋಲ್‌ ಕೀಪರ್‌ ಹುಗೋ ಲೋರಿಸ್‌, ಬೆಲ್ಜಿಯಂ ಗೋಲು ಗಳಿಕೆಗೆ ಅಡ್ಡಿಯಾದರೆ ಅಚ್ಚರಿಯಿಲ್ಲ. ಜತೆಗೆ 1998ರ ವಿಶ್ವಕಪ್‌ ಹಾಗೂ 2000ರ ಯುರೋ ಕಪ್‌ ವಿಜೇತ ನಾಯಕ ಡಿಡೆಯೆರ್‌ ಡೆಶ್ಚಾ್ಯಂಫ್ಸ್‌, ಹಾಲಿ ಕೋಚ್‌ ಆಗಿ ಅತ್ಯುತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಡೆಶ್ಚ್ಯಾಂಫ್ಸ್‌ ರಚಿಸುತ್ತಿರುವ ಸಂಯೋಜನೆ, ಪಂದ್ಯದಲ್ಲಿ ಆಟಗಾರರನ್ನು ಬದಲಿಸುವ ಲೆಕ್ಕಾಚಾರ ಕೈಹಿಡಿಯುತ್ತಿದೆ.

ಅಜೇಯ ಓಟಕ್ಕೆ ಬೆಲ್ಜಿಯಂ ತವಕ: ಕಳೆದ 23 ಪಂದ್ಯಗಳಲ್ಲಿ ಸೋಲು ಕಾಣದ ಬೆಲ್ಜಿಯಂ ಒಟ್ಟು 78 ಗೋಲು ಗಳಿಸಿದೆ. ಈ ವಿಶ್ವಕಪ್‌ನಲ್ಲಿ 5 ಪಂದ್ಯಗಳಿಂದ 14 ಗೋಲು ಬಾರಿಸುವ ಮೂಲಕ ಅತಿಹೆಚ್ಚು ಗೋಲು ಗಳಿಸಿರುವ ತಂಡ ಎನ್ನುವ ಹೆಗ್ಗಳಿಕೆ ಉಳಿಸಿಕೊಂಡಿದೆ. ಜಪಾನ್‌ ವಿರುದ್ಧ ಪ್ರಿ ಕ್ವಾರ್ಟರ್‌ನಲ್ಲಿ 2 ಗೋಲುಗಳಿಂದ ಹಿಂದಿದ್ದ ತಂಡ, 20 ನಿಮಿಷಗಳಲ್ಲಿ 3 ಗೋಲು ಬಾರಿಸಿ ಪಂದ್ಯವನ್ನು ತನ್ನದಾಗಿಸಿಕೊಂಡ ರೀತಿ ಫುಟ್ಬಾಲ್‌ ಜಗತ್ತನ್ನು ಬೆರಗಾಗಿಸಿತ್ತು. ರೊಮೆಲು ಲುಕಾಕ್‌, ಏಡನ್‌ ಹಜಾರ್ಡ್‌, ಮರ್ಟೆನ್ಸ್‌ ಸೇರಿದಂತೆ ತಂಡ ಆಕ್ರಮಣಕಾರಿ ಆಟಗಾರರಿಂದ ಕೂಡಿದೆ. ಬೆಲ್ಜಿಯಂಗೆ ಎತ್ತರದ ಲಾಭ ದೊರೆಯಲಿದೆ. ವಿನ್ಸೆಂಟ್‌ ಕೊಂಪನಿ, ಜಾನ್‌ ವರ್ಟೊನ್ಗೆನ್‌, ಮರೌನೆ ಫೆಲ್ಲಾನಿಯಂತಹ ಎತ್ತರದ ಆಟಗಾರರು ತಂಡದಲ್ಲಿದ್ದು, ಕಾರ್ನರ್‌ ಕಿಕ್‌ಗಳು ಸಿಕ್ಕಾಗ ಹೆಡ್ಡರ್‌ ಮೂಲಕ ಗೋಲು ಗಳಿಸುವ ಸಾಧ್ಯತೆ ಹೆಚ್ಚಿದೆ.

ಫ್ರಾನ್ಸ್‌ನ ಗೋಲ್‌ ಕೀಪರ್‌ ಹುಗೋ ಅವರಷ್ಟೇ ಬೆಲ್ಜಿಯಂನ ಕೀಪರ್‌ ಥೈಬಾಟ್‌ ಕೋರ್ಟಿಸ್‌ ಸಹ ಬಲಿಷ್ಠರಾಗಿದ್ದು, ಇವರಿಬ್ಬರ ನಡುವಿನ ಪೈಪೋಟಿ ಪಂದ್ಯದ ಪ್ರಮುಖಾಂಶಗಳಲ್ಲಿ ಒಂದು. ಆದರೆ ಬೆಲ್ಜಿಯಂಗೆ ಪ್ರಮುಖ ಡಿಫೆಂಡರ್‌ ಥಾಮಸ್‌ ಮೆಯುನಿರ್‌ ಅನುಪಸ್ಥಿತಿ ಕಾಡಲಿದೆ. ಪಂದ್ಯಾವಳಿಯಲ್ಲಿ 2 ಹಳದಿ ಕಾರ್ಡ್‌ ಪಡೆದ ಕಾರಣ, 1 ಪಂದ್ಯ ನಿಷೇಧಕ್ಕೆ ಥಾಮಸ್‌ ಗುರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಲ್ಜಿಯಂ ತನ್ನ ತಂಡ ಸಂಯೋಜನೆಯಲ್ಲಿ ಕೆಲ ಬದಲಾವಣೆ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಫ್ರಾನ್ಸ್‌ನ ಮಾಜಿ ಸ್ಟ್ರೈಕರ್ ಥಿಯರಿ ಹೆನ್ರಿ, ಸದ್ಯ ತಂಡದ ಸಹಾಯಕ ಕೋಚ್‌ ಆಗಿರುವುದು ಫ್ರಾನ್ಸ್‌ ತಂಡದ ರಣತಂತ್ರಗಳನ್ನು ಅರಿಯಲು ಬೆಲ್ಜಿಯಂಗೆ ಸಹಕಾರಿಯಾಗಲಿದೆ.

ಬೆಲ್ಜಿಯಂ ಸೆಮೀಸ್‌ ಹಾದಿ

ಹಂತ                    ವಿರುದ್ಧ                 ಫಲಿತಾಂಶ

ಗುಂಪು                 ಪನಾಮ                 3-0 ಜಯ

ಗುಂಪು                ಟ್ಯುನೀಷಿಯಾ            5-2 ಜಯ

ಗುಂಪು                ಇಂಗ್ಲೆಂಡ್‌                1-0 ಜಯ

ಪ್ರಿ ಕ್ವಾರ್ಟರ್‌         ಜಪಾನ್‌                  3-2 ಜಯ

ಕ್ವಾರ್ಟರ್‌             ಬ್ರೆಜಿಲ್‌                   2-1 ಜಯ

ಫ್ರಾನ್ಸ್‌ ಸೆಮೀಸ್‌ ಹಾದಿ

ಹಂತ                 ವಿರುದ್ಧ                    ಫಲಿತಾಂಶ

ಗುಂಪು              ಆಸ್ಪ್ರೇಲಿಯಾ              2-1 ಜಯ

ಗುಂಪು              ಪೆರು                        1-0 ಜಯ 

ಗುಂಪು              ಡೆನ್ಮಾರ್ಕ್                 0-0 ಡ್ರಾ

ಪ್ರಿ ಕ್ವಾರ್ಟರ್‌       ಅರ್ಜೆಂಟೀನಾ             4-3 ಜಯ

ಕ್ವಾರ್ಟರ್‌           ಉರುಗ್ವೆ                    2-0 ಜಯ

ತಾರಾ ಆಟಗಾರರು:

ಬೆಲ್ಜಿಯಂ

ರೊಮೆಲು ಲುಕಾಕು, ಏಡನ್‌ ಹಜಾರ್ಡ್‌, ಥೈಬಾಟ್‌ ಕೋರ್ಟಿಸ್‌

ಫ್ರಾನ್ಸ್‌

ಕಿಲಿಯನ್‌ ಎಂಬಾಪೆ, ಆ್ಯಂಟೋನಿ ಗ್ರೀಜ್‌ಮನ್‌, ಪೌಲ್‌ ಪೋಗ್ಬಾ

ಫ್ರಾನ್ಸ್‌ ಬುಕ್ಕಿಗಳ ಫೇವರಿಟ್‌

ಯುರೋಪ್‌ನಲ್ಲೀಗ ಫುಟ್ಬಾಲ್‌ ಬೆಟ್ಟಿಂಗ್‌ ಜೋರಾಗಿದ್ದು, ಬುಕ್ಕಿಗಳ ಪ್ರಕಾರ ಮೊದಲ ಸೆಮೀಸ್‌ನಲ್ಲಿ ಬೆಲ್ಜಿಯಂ ವಿರುದ್ಧ ಫ್ರಾನ್ಸ್‌ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ. ಉದಾಹರಣೆಗೆ ಫ್ರಾನ್ಸ್‌ ಪರ 100 ಡಾಲರ್‌ ಹಣ ಹಾಕುವವರಿಗೆ 150 ಡಾಲರ್‌ ಸಿಗಲಿದೆ. ಅರ್ಜೆಂಟೀನಾ ಹಾಗೂ ಉರುಗ್ವೆ ತಂಡಗಳನ್ನು ಹೊರದಬ್ಬಿರುವ ಫ್ರಾನ್ಸ್‌ ಮೇಲೆ ಅಭಿಮಾನಿಗಳು ಹೆಚ್ಚು ವಿಶ್ವಾಸ ಇರಿಸಿದ್ದಾರೆ ಎನ್ನಲಾಗಿದೆ. 

ಬ್ರೆಜಿಲ್‌ ತಂಡವನ್ನು ಸೋಲಿಸಿದಲ್ಲದೆ ಟೂರ್ನಿಯಲ್ಲಿ ಗರಿಷ್ಠ ಗೋಲು ಬಾರಿಸಿರುವ ಬೆಲ್ಜಿಯಂ ಸಹ ಹಣ ಹಾಕುವವರನ್ನು ಸೆಳೆಯುವುದರಲ್ಲಿ ಹಿಂದೆ ಬಿದ್ದಿಲ್ಲ. ಲುಕಾಕು ಹಾಗೂ ಎಂಬಾಪೆ ಇಬ್ಬರಲ್ಲಿ ಯಾರು ಗೋಲು ಗಳಿಸುತ್ತಾರೆ ಎನ್ನುವುದಕ್ಕೂ ಬೆಟ್ಟಿಂಗ್‌ ನಡೆಯುತ್ತಿದೆ.

Latest Videos
Follow Us:
Download App:
  • android
  • ios