ಫಿಫಾ ವಿಶ್ವಕಪ್ 2018: ಫುಟ್ಬಾಲ್ ಮಹಾಕಾಳಗಕ್ಕೆ ಕೌಂಟ್ ಡೌನ್
ಫಿಫಾ ವಿಶ್ವಕಪ್ ಇಲ್ಲವೇ ಫುಟ್ಬಾಲ್ ವಿಶ್ವಕಪ್ 4 ವರ್ಷಕ್ಕೊಮ್ಮೆ ನಡೆಯುವ ‘ವಿಶ್ವ ಮಹಾ ಯುದ್ಧ’. ಕಾರಣ, ವಿಶ್ವದ ಎಲ್ಲಾ ರಾಷ್ಟ್ರಗಳು ಈ ಟೂರ್ನಿಯಲ್ಲಿ ಸೆಣಸಲು ಕಸರತ್ತು ನಡೆಸಲಿವೆ. ಅಂತಾರಾಷ್ಟ್ರೀಯ ಫುಟ್ಬಾಲ್ ಫೆಡರೇಷನ್ (ಫಿಫಾ) ಈ ಟೂರ್ನಿಯನ್ನು ಆಯೋಜಿಸುತ್ತದೆ. 1930ರಲ್ಲಿ ಮೊದಲ ಬಾರಿಗೆ ಆಯೋಜನೆಗೊಂಡ ವಿಶ್ವಕಪ್ 1942 ಹಾಗೂ 1946ರಲ್ಲಿ 2ನೇ ವಿಶ್ವ ಮಹಾ ಯುದ್ಧದ ಕಾರಣ ನಡೆದಿರಲಿಲ್ಲ.
ಕೃಪೆ: ಕನ್ನಡಪ್ರಭ
ಬೆಂಗಳೂರು[ಜೂ.12]: ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆ ಫುಟ್ಬಾಲ್. ವಿಶ್ವದಲ್ಲೆಡೆ ಅತ್ಯಂತ ವೃತ್ತಿಪರ, ಶ್ರೀಮಂತ ಲೀಗ್’ಗಳು ನಡೆದರೂ ನೂರಾರು ಕೋಟಿ ಅಭಿಮಾನಿಗಳು ಫುಟ್ಬಾಲ್’ನತ್ತ ಆಸಕ್ತಿ ವಹಿಸುವುದು, ಪ್ರತಿದಿನ ಫುಟ್ಬಾಲ್ ವೀಕ್ಷಿಸದವರು ಸಹ ಆಟದತ್ತ ಗಮನ ತೋರುವುದು ವಿಶ್ವಕಪ್ ಬಂದಾಗ ಮಾತ್ರ. ಫುಟ್ಬಾಲ್ ವಿಶ್ವಕಪ್ ಆರಂಭವಾಗಿದ್ದು ಹೇಗೆ? ವಿಶ್ವಕಪ್ ನಡೆಯುವ ರೀತಿ ಹೇಗೆ? ಆತಿಥ್ಯ ವಹಿಸುವ ರಾಷ್ಟ್ರವನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ? ತಂಡಗಳು ಹೇಗೆ ಅರ್ಹತೆ ಪಡೆಯುತ್ತವೆ? ಗೆದ್ದವರಿಗೆ ಸಿಗುವ ಬಹುಮಾನ ಮೊತ್ತವೆಷ್ಟು ಎನ್ನುವ ವಿಚಾರವೂ ಸೇರಿದಂತೆ ಜೂನ್ 14ರಿಂದ ಜುಲೈ 15ರವರೆಗೂ ನಡೆಯುವ 2018ರ ಫುಟ್ಬಾಲ್ ವಿಶ್ವಕಪ್’ನ ಸಂಪೂರ್ಣ ಮಾಹಿತಿ ನಿಮ್ಮ ಮುಂದೆ...
4 ವರ್ಷಕ್ಕೊಮ್ಮೆ ಒಂದೆಡೆ ಸೇರಲಿದೆ ಇಡೀ ’ವಿಶ್ವ’:
ಫಿಫಾ ವಿಶ್ವಕಪ್ ಇಲ್ಲವೇ ಫುಟ್ಬಾಲ್ ವಿಶ್ವಕಪ್ 4 ವರ್ಷಕ್ಕೊಮ್ಮೆ ನಡೆಯುವ ‘ವಿಶ್ವ ಮಹಾ ಯುದ್ಧ’. ಕಾರಣ, ವಿಶ್ವದ ಎಲ್ಲಾ ರಾಷ್ಟ್ರಗಳು ಈ ಟೂರ್ನಿಯಲ್ಲಿ ಸೆಣಸಲು ಕಸರತ್ತು ನಡೆಸಲಿವೆ. ಅಂತಾರಾಷ್ಟ್ರೀಯ ಫುಟ್ಬಾಲ್ ಫೆಡರೇಷನ್ (ಫಿಫಾ) ಈ ಟೂರ್ನಿಯನ್ನು ಆಯೋಜಿಸುತ್ತದೆ. 1930ರಲ್ಲಿ ಮೊದಲ ಬಾರಿಗೆ ಆಯೋಜನೆಗೊಂಡ ವಿಶ್ವಕಪ್ 1942 ಹಾಗೂ 1946ರಲ್ಲಿ 2ನೇ ವಿಶ್ವ ಮಹಾ ಯುದ್ಧದ ಕಾರಣ ನಡೆದಿರಲಿಲ್ಲ. ಸದ್ಯ ಇರುವ ಮಾದರಿ ಪ್ರಕಾರ, ವಿಶ್ವದ 6 ಖಂಡಗಳಲ್ಲಿ ಅರ್ಹತಾ ಸುತ್ತು ನಡೆಯಲಿದೆ. ಇದು ಒಂದು ವಿಶ್ವಕಪ್‌ನಿಂದ ಮತ್ತೊಂದು ವಿಶ್ವಕಪ್ ವರೆಗಿನ ನಡುವೆ ಸಿಗುವ 3 ವರ್ಷಗಳ ಸಮಯದಲ್ಲಿ ನಡೆಯಲಿದೆ. ಸಾಮಾನ್ಯವಾಗಿ ವಿಶ್ವಕಪ್ ಪಂದ್ಯಾವಳಿಯನ್ನು ವಿಶ್ವಕಪ್ ಫೈನಲ್ಸ್ ಎಂದು ಕರೆಯಲಾಗುತ್ತದೆ. ಆತಿಥ್ಯ ವಹಿಸುವ ರಾಷ್ಟ್ರ ಸೇರಿ ಒಟ್ಟು 32 ರಾಷ್ಟ್ರಗಳು ವಿಶ್ವಕಪ್ ಫೈನಲ್ಸ್‌ಗೇರಲಿವೆ. ಒಂದು ತಿಂಗಳ ಕಾಲ ಟೂರ್ನಿ ನಡೆಯಲಿದೆ. ಇದುವರೆಗೂ 20 ವಿಶ್ವಕಪ್ ಟೂರ್ನಿಗಳು ನಡೆದಿದ್ದು, 8 ರಾಷ್ಟ್ರಗಳು ಚಾಂಪಿಯನ್ ಪಟ್ಟಕ್ಕೇರಿವೆ. ಬ್ರೆಜಿಲ್ ದಾಖಲೆಯ 5 ಬಾರಿಗೆ ಚಾಂಪಿಯನ್ ಆಗಿದೆ. 1930ರಿಂದ ಈ ವರೆಗೂ ಎಲ್ಲಾ ವಿಶ್ವಕಪ್‌ಗಳಲ್ಲೂ ಆಡಿರುವ ಏಕೈಕ ತಂಡ ಎನ್ನುವ ದಾಖಲೆ ಬ್ರೆಜಿಲ್ ಹೆಸರಿನಲ್ಲಿದೆ. ಜರ್ಮನಿ ಹಾಗೂ ಇಟಲಿ ತಲಾ 4 ಬಾರಿ ಕಪ್ ಗೆದ್ದರೆ, ಅರ್ಜೆಂಟೀನಾ ಹಾಗೂ ಚೊಚ್ಚಲ ವಿಶ್ವಕಪ್‌ಗೆ ಆತಿಥ್ಯ ವಹಿಸಿದ್ದ ಉರುಗ್ವೆ ತಲಾ 2 ಬಾರಿ ಚಾಂಪಿಯನ್ ಆಗಿವೆ. ಇಂಗ್ಲೆಂಡ್, ಸ್ಪೇನ್ ಹಾಗೂ ಫ್ರಾನ್ಸ್ ತಲಾ ಒಮ್ಮೆ ವಿಶ್ವಕಪ್ ಟ್ರೋಫಿ ಎತ್ತಿಹಿಡಿದಿವೆ.
ವಿಶ್ವಕಪ್ ಅರ್ಹತಾ ಸುತ್ತು ಎಂಬ ಮಹಾಸಂಗ್ರಾಮ..!
1934ರಿಂದ ಅಂದರೆ 2ನೇ ವಿಶ್ವಕಪ್‌ನಿಂದ ಅರ್ಹತಾ ಸುತ್ತನ್ನು ನಡೆಸಲಾಗುತ್ತಿದೆ. ಇದು ಎಲ್ಲಾ 6 ಖಂಡಗಳ ಫಿಫಾ ವಲಯ (ಆಫ್ರಿಕಾ, ಏಷ್ಯಾ, ಉತ್ತರ, ಕೇಂದ್ರ ಹಾಗೂ ಕೆರಿಬಿಯನ್ ಅಮೆರಿಕ, ದ.ಅಮೆರಿಕ, ಓಶಿಯಾನಿಯಾ ಹಾಗೂ ಯುರೋಪ್)ದಲ್ಲಿ ನಡೆಸಲಾಗುತ್ತದೆ. ಈ ಪಂದ್ಯಾವಳಿಯ ಮೇಲುಸ್ತುವಾರಿಯನ್ನು ಆಯಾ ಖಂಡದ ಫುಟ್ಬಾಲ್ ರಾಷ್ಟ್ರಗಳ ಒಕ್ಕೂಟಗಳು ವಹಿಸಲಿವೆ. ಪ್ರತಿ ಟೂರ್ನಿಗೂ ಫಿಫಾ, ಪ್ರತಿ ಒಕ್ಕೂಟದಿಂದ ಇಷ್ಟು ಸದಸ್ಯ ರಾಷ್ಟ್ರಗಳಿಗೆ ಅರ್ಹತಾ ನೀಡಲು ನಿರ್ಧರಿಸಲಿದೆ. ಇದು ಸಾಮಾನ್ಯವಾಗಿ ಒಕ್ಕೂಟದಲ್ಲಿರುವ ಒಟ್ಟು ರಾಷ್ಟ್ರಗಳ ಸಂಖ್ಯೆಯ ಮೇಲೆ ನಿರ್ಧಾರವಾಗಲಿದೆ. ವಿಶ್ವಕಪ್ ಫೈನಲ್ಸ್ ಟೂರ್ನಿಗೆ 3 ವರ್ಷ ಮುಂಚಿತವಾಗಿಯೇ ಅರ್ಹತಾ ಸುತ್ತಿನ ಟೂರ್ನಿಗಳು ಆರಂಭಗೊಳ್ಳಲಿವೆ. 1938ರಿಂದ ಆತಿಥ್ಯ ವಹಿಸುವ ರಾಷ್ಟ್ರಕ್ಕೆ ನೇರ ಪ್ರವೇಶ ದೊರೆಯುತ್ತಿದೆ. 1938ರಿಂದ 2002ರ ವರೆಗೂ ಹಾಲಿ ಚಾಂಪಿಯನ್ ತಂಡಕ್ಕೂ ನೇರ ಪ್ರವೇಶ ನೀಡಲಾಗುತ್ತಿತ್ತು. ಆದರೆ 2006ರ ವಿಶ್ವಕಪ್‌ಗೆ ಈ ನಿಯಮದಲ್ಲಿ ಬದಲಾವಣೆ ಮಾಡಲಾಯಿತು. ಹಾಲಿ ಚಾಂಪಿಯನ್ ತಂಡ ಸಹ ಅರ್ಹತಾ ಸುತ್ತಿನಲ್ಲಿ ಪಾಲ್ಗೊಂಡು, ಪ್ರಧಾನ ಹಂತಕ್ಕೆ ಪ್ರವೇಶ ಪಡೆಯಬೇಕು ಎನ್ನುವ ನಿಯಮ ಜಾರಿಗೆ ತರಲಾಯಿತು. 2002ರ ಚಾಂಪಿಯನ್ ಬ್ರೆಜಿಲ್, ಅರ್ಹತಾ ಸುತ್ತಿನಲ್ಲಿ ಆಡಿದ ಮೊದಲ ಚಾಂಪಿಯನ್ ತಂಡ ಎನಿಸಿಕೊಂಡಿತು. 1998ರಿಂದ ಒಂದೇ ಮಾದರಿಯನ್ನು ಅನುಸರಿಸುತ್ತಾ ಬರಲಾಗಿದ್ದು, ಒಟ್ಟು 32 ರಾಷ್ಟ್ರಗಳು ಪ್ರಧಾನ ಸುತ್ತಿನಲ್ಲಿ ಸೆಣಸಲಿವೆ. ಇದೇ ಮೊದಲ ಬಾರಿಗೆ ಫಿಫಾದ ಎಲ್ಲಾ 209 ಸದಸ್ಯ ರಾಷ್ಟ್ರಗಳು ಅರ್ಹತಾ ಸುತ್ತಿಗೆ ಪ್ರವೇಶಿಸಿದ್ದವು
ಆತಿಥ್ಯಕ್ಕಾಗಿ ರಷ್ಯಾದಿಂದ ಲಂಚ?
2018ರ ವಿಶ್ವಕಪ್ ಆತಿಥ್ಯಕ್ಕೆ ರಷ್ಯಾ, ಫಿಫಾ ಕಾರ್ಯನಿರ್ವಾಹಕ ಸಮಿತಿಯ ಸದಸ್ಯರಿಗೆ ಲಂಚ ನೀಡಿದೆ ಎಂದು ಇಂಗ್ಲೆಂಡ್ ಫುಟ್ಬಾಲ್ ಸಂಸ್ಥೆ ಗಂಭೀರ ಆರೋಪ ಮಾಡಿತು. ಈ ಅವಧಿಯಲ್ಲಿ ಫಿಫಾ ಅಧ್ಯಕ್ಷರಾಗಿದ್ದ ಸೆಪ್ ಬ್ಲಾಟರ್, ಮತ ಚಲಾವಣೆಗೂ ಮೊದಲೇ ಆತಿಥ್ಯ ಹಕ್ಕನ್ನು ರಷ್ಯಾಗೆ ನೀಡಲು ನಿರ್ಧರಿಸಲಾಗಿತ್ತು ಎಂದು ಹೇಳಿಕೆ ನೀಡಿ ಭಾರೀ ಸಂಚಲನ ಸೃಷ್ಟಿಸಿದ್ದರು. ಈ ಸಂಬಂಧ ಆಂತರಿಕ ತನಿಖೆ ನಡೆಸಲಾಯಿತಾದರೂ, ವರದಿಯನ್ನು ಸಾರ್ವಜನಿಕರ ಮುಂದಿಡಲಿಲ್ಲ.
ಆತಿಥ್ಯ ಅವಕಾಶ ಪಡೆಯುವುದು ಹೇಗೆ..?
ಕನಿಷ್ಠ 9ರಿಂದ 10 ವರ್ಷಗಳ ಮುಂಚಿತವಾಗಿಯೇ ಆತಿಥ್ಯ ವಹಿಸುವ ರಾಷ್ಟ್ರ ಯಾವುದು ಎನ್ನುವುದಕ್ಕೆ ಬಿಡ್ಡಿಂಗ್ ನಡೆಸಲಾಗುತ್ತದೆ. 2018ರ ವಿಶ್ವಕಪ್‌ಗೆ 2009ರ ಜನವರಿಯಲ್ಲೇ ಬಿಡ್ಡಿಂಗ್ ಪ್ರಕ್ರಿಯೆ ಆರಂಭಗೊಂಡಿತ್ತು. 2018ರ ವಿಶ್ವಕಪ್ ಆತಿಥ್ಯಕ್ಕೆ 9 ರಾಷ್ಟ್ರಗಳು ಆಸಕ್ತಿ ತೋರಿದ್ದವು. ಬಳಿಕ ಮೆಕ್ಸಿಕೊ ಹಿಂದೆ ಸರಿಯಿತು. ಇಂಡೋನೇಷ್ಯಾ ಸರಿಯಾದ ದಾಖಲೆಗಳನ್ನು ನೀಡದ ಕಾರಣ, ಫಿಫಾ ಅದರ ಅರ್ಜಿ ತಿರಸ್ಕರಿಸಿತು. ಬಿಡ್ಡಿಂಗ್ ಪ್ರಕ್ರಿಯೆ ವೇಳೆ ಆಸ್ಟ್ರೇಲಿಯಾ, ಜಪಾನ್ ಹಾಗೂ ಅಮೆರಿಕ ಕೂಡ ಹಿಂದೆ ಸರಿದವು. ಅಂತಿಮವಾಗಿ ಆತಿಥ್ಯ ಹಕ್ಕಿಗಾಗಿ 4 ರಾಷ್ಟ್ರಗಳ ನಡುವೆ ಪೈಪೋಟಿ ಉಳಿದುಕೊಂಡಿತು. ರಷ್ಯಾ, ಇಂಗ್ಲೆಂಡ್, ನೆದರ್‌ಲೆಂಡ್ಸ್/ಬೆಲ್ಜಿಯಂ ಹಾಗೂ ಪೋರ್ಚುಗಲ್/ಸ್ಪೇನ್ ನಡುವೆ ಸ್ಪರ್ಧೆ ನಡೆಯಿತು. 22 ಸದಸ್ಯರ ಫಿಫಾ ಕಾರ್ಯನಿರ್ವಾಹಕ ಸಮಿತಿ 2010ರ ಡಿ.2ರಂದು ಜ್ಯೂರಿಚ್‌ನಲ್ಲಿ ನಡೆದ ಸಭೆಯಲ್ಲಿ ಮತ ಚಲಾಯಿಸಿತು. ಮೊದಲ ಸುತ್ತಿನಲ್ಲಿ 9 ಮತ ಪಡೆದ ರಷ್ಯಾ, 2ನೇ ಸುತ್ತಿನಲ್ಲಿ 13 ಗಳಿಸಿತು. ಪೋರ್ಚುಗಲ್/ಸ್ಪೇನ್ (07), ಬೆಲ್ಜಿಯಂ/ನೆದರ್‌ಲೆಂಡ್ಸ್ (02) ಮತ ಪಡೆದವು. ಮೊದಲ ಸುತ್ತಲ್ಲಿ 2 ಮತ ಪಡೆದ ಇಂಗ್ಲೆಂಡ್, 2ನೇ ಸುತ್ತಿಗೆ ಅರ್ಹತೆ ಪಡೆಯಲಿಲ್ಲ. ಇದರೊಂದಿಗೆ ರಷ್ಯಾ 2018ರ ವಿಶ್ವಕಪ್‌ಗೆ ಆತಿಥ್ಯ ಹಕ್ಕು ಪಡೆದುಕೊಂಡಿತು.
ಬಹುಮಾನ ಮೊತ್ತ: [ಭಾರತದ ರುಪಾಯಿಗಳಲ್ಲಿ]
ಚಾಂಪಿಯನ್ ತಂಡ: 256 ಕೋಟಿ
ರನ್ನರ್ ಅಪ್: 189 ಕೋಟಿ
ತೃತೀಯ ಸ್ಥಾನ: 162 ಕೋಟಿ
ನಾಲ್ಕನೇ ಸ್ಥಾನ: 148 ಕೋಟಿ
ಕ್ವಾರ್ಟರ್ ಫೈನಲ್: 108 ಕೋಟಿ
ಪ್ರೀ ಕ್ವಾರ್ಟರ್ ಫೈನಲ್: 81 ಕೋಟಿ
ಗುಂಪುಹಂತ: 54 ಕೋಟಿ
ಭಾಗವಹಿಸುತ್ತಿರುವ ತಂಡಗಳು:
A ಗುಂಪು:
ರಷ್ಯಾ
ಸೌದಿ ಅರೇಬಿಯಾ
ಈಜಿಪ್ಟ್
ಉರುಗ್ವೆ
B ಗುಂಪು:
ಪೋರ್ಚುಗಲ್
ಸ್ಪೇನ್
ಮೊರಾಕ್ಕೊ
ಇರಾನ್
C ಗುಂಪು:
ಫ್ರಾನ್ಸ್
ಆಸ್ಟ್ರೇಲಿಯಾ
ಪೆರು
ಡೆನ್ಮಾರ್ಕ್
D ಗುಂಪು
ಅರ್ಜೆಂಟೀನಾ
ಐಸ್’ಲ್ಯಾಂಡ್
ಕ್ರೊವೇಷಿಯಾ
ನೈಜೀರಿಯಾ
E ಗುಂಪು
ಬ್ರೆಜಿಲ್
ಸ್ವಿಟ್ಜರ್’ಲ್ಯಾಂಡ್
ಕೋಸ್ಟರಿಕಾ
ಸರ್ಬಿಯಾ
F ಗುಂಪು
ಜರ್ಮನಿ
ಮೆಕ್ಸಿಕೋ
ಸ್ವೀಡನ್
ದಕ್ಷಿಣ ಕೊರಿಯಾ
G ಗುಂಪು
ಬೆಲ್ಜಿಯಂ
ಪನಾಮ
ಟ್ಯುನೀಷಿಯಾ
ಇಂಗ್ಲೆಂಡ್
H ಗುಂಪು
ಪೋಲೆಂಡ್
ಸೆನೆಗಲ್
ಕೊಲಂಬಿಯಾ
ಜಪಾನ್