ಸೇಂಟ್‌ಪೀಟರ್ಸ್‌ಬರ್ಗ್[ಜು 12]: ಫಿಫಾ ಫುಟ್ಬಾಲ್ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಬೆಲ್ಜಿಯಂ ವಿರುದ್ಧ ಸಾಧಿಸಿದ ಗೆಲುವನ್ನು ಫ್ರಾನ್ಸ್‌ನ ಆಟಗಾರ ಪೌಲ್ ಪೋಗ್ಬಾ, ಪ್ರವಾಹ ಪೀಡಿತ ಗುಹೆಯಿಂದ ಬದುಕಿ ಬಂದಿರುವ ಥಾಯ್ಲೆಂಡ್ ಫುಟ್ಬಾಲ್ ತಂಡಕ್ಕೆ ಅರ್ಪಿಸಿದ್ದಾರೆ. 

ಪೋಗ್ಬಾ ತಮ್ಮ ಟ್ವೀಟರ್ ಖಾತೆಯಲ್ಲಿ, ‘ಬೆಲ್ಜಿಯಂ ವಿರುದ್ಧದ ಸೆಮಿಫೈನಲ್ ಗೆಲುವು ಗುಹೆಯಿಂದ ಬದುಕಿ ಬಂದಿರುವ ಹೀರೋಗಳಿಗೆ ಅರ್ಪಿಸುತ್ತೇನೆ. ನೀವು ಅತ್ಯಂತ ಶಕ್ತಿಶಾಲಿಯಾಗಿದ್ದೀರಿ’ ಎಂದು ಬರೆದಿದ್ದಾರೆ. 

ಸುಮಾರು 15 ದಿನಗಳ ಹಿಂದೆ ಪ್ರವಾಸಕ್ಕೆಂದು ತೆರಳಿದ್ದ ಥಾಯ್ಲೆಂಡ್ ಬಾಲಕರ ಫುಟ್ಬಾಲ್ ತಂಡ ಹಾಗೂ ಅದರ ಕೋಚ್ ಗುಹೆಯೊಳಗೆ ಸಿಲುಕಿಕೊಂಡಿತ್ತು. ಬಳಿಕ ಮುಳುಗು ತಜ್ಞರು ಬಾಲಕರು ಮತ್ತು ಕೋಚ್ ಅನ್ನು ರಕ್ಷಣೆ ಮಾಡಿದರು. ಆಟಗಾರರಿಗೆ ವಿಶ್ವದೆಲ್ಲೆಡೆಯಿಂದ ಶುಭ ಹಾರೈಕೆಗಳು ಹರಿದುಬಂದಿವೆ.