ಮಾಸ್ಕೋ[ಜು.06]: ರಫೇಲ್ ವರ್ನಾನೆ, ಆ್ಯಂಟಿಯೋನೆ ಗ್ರೀಜ್’ಮನ್ ಬಾರಿಸಿದ ಎರಡು ಆಕರ್ಷಕ ಗೋಲುಗಳ ನೆರವಿನಿಂದ ಉರುಗ್ವೆ ತಂಡವನ್ನು 2-0 ಗೋಲುಗಳಿಂದ ಮಣಿಸಿ ಫ್ರಾನ್ಸ್ ಸೆಮಿಫೈನಲ್ಸ್’ಗೆ ಲಗ್ಗೆಯಿಟ್ಟಿದೆ. ಈ ಮೂಲಕ 2018ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಫ್ರಾನ್ಸ್ ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 

ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳು ಚೆಂಡಿನ ಮೇಲೆ ಹಿಡಿತ ಸಾಧಿಸಲು ಸಾಕಷ್ಟು ಪ್ರಯತ್ನಿಸಿದವು. ಪಂದ್ಯದ 15ನೇ ನಿಮಿಷದಲ್ಲಿ ಉರುಗ್ವೆಗೆ ಗೋಲು ಗಳಿಸುವ ಅವಕಾಶ ಒದಗಿ ಬಂದಿತ್ತು. ಆದರೆ ಕ್ಲಿಯಾನ್ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಆ ಬಳಿಕ 40ನೇ ನಿಮಿಷದಲ್ಲಿ ಫ್ರಾನ್ಸ್ ಪರ ಮೊದಲ ಗೋಲು ಒಲಿದು ಬಂತು. ಹೆಡ್ಡರ್ ಮೂಲಕ ರಫೆಲ್ ವೆರ್ನಾನ್ ಫ್ರಾನ್ಸ್ ಪರ ಮೊದಲ ಗೋಲು ಬಾರಿಸಿದರು. ಮೊದಲಾರ್ಧ ಮುಕ್ತಾಯದ ವೇಳೆಗೆ ಫ್ರಾನ್ಸ್ 1-0 ಮುನ್ನಡೆ ಕಾಯ್ದುಕೊಂಡಿತ್ತು.

ಇನ್ನು ಧ್ವಿತಿಯಾರ್ಧದಲ್ಲಿ ಉರುಗ್ವೆ ಆಕ್ರಮಣಕಾರಿಯಾಟವಾಡಲು ಕೆಲ ಬದಲಾವಣೆಗಳೊಂದಿಗೆ ಕಣಕ್ಕಿಳಿಯಿತು. ಆದರೂ ಉರುಗ್ವೆ ಯಶಸ್ಸು ಕಾಣಲಿಲ್ಲ. ಇದಾದ ಕೆಲಹೊತ್ತಿನಲ್ಲೇ ಪಂದ್ಯದ 61ನೇ ನಿಮಿಷದಲ್ಲಿ ಆ್ಯಂಟಿಯೋನೆ ಗ್ರೀಜ್’ಮನ್ ಫ್ರಾನ್ಸ್ ಪರ ಎರಡನೇ ಗೋಲು ದಾಖಲಿಸಿದರು. ಈ ಮೂಲಕ ಫ್ರಾನ್ಸ್ 2-0 ಮುನ್ನಡೆ ಕಾಯ್ದುಕೊಂಡಿತು. ಆ ಬಳಿಕ ರಕ್ಷಣಾತ್ಮಕ ಆಟಕ್ಕೆ ಮೊರೆಹೋದ ಫ್ರಾನ್ಸ್ ತಂಡ ಉರುಗ್ವೆಗೆ ಗೋಲು ಬಾರಿಸಲು ಅವಕಾಶ ನೀಡಲಿಲ್ಲ. ಅಂತಿಮವಾಗಿ ಫ್ರಾನ್ಸ್ 2-0 ಅಂತರದ ಭರ್ಜರಿ ಜಯ ಸಾಧಿಸಿತು.

ಇನ್ನು ಫ್ರಾನ್ಸ್ ತಂಡವು ಜುಲೈ 10ರಂದು ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ಬ್ರೆಜಿಲ್ ಇಲ್ಲವೇ ಬೆಲ್ಜಿಯಂ ವಿರುದ್ಧ ಕಾದಾಡಲಿದೆ.