ಬೆಂಗಳೂರು: 1938ರ ಬಳಿಕ ವಿಶ್ವ ಮಹಾಯುದ್ಧ ಕಾರಣ 1942, 1946ರಲ್ಲಿ ವಿಶ್ವಕಪ್ ಫುಟ್ಬಾಲ್ ನಡೆಯಲಿಲ್ಲ. 4ನೇ ಫಿಫಾ ಫುಟ್ಬಾಲ್ ವಿಶ್ವಕಪ್ ನಡೆದಿದ್ದು 1950ರಲ್ಲಿ. ಆತಿಥ್ಯ ವಹಿಸುವ ಹಕ್ಕು ಪಡೆದಿದ್ದು ಬ್ರೆಜಿಲ್. 13 ತಂಡಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದವು. 6 ನಗರಗಳು ಪಂದ್ಯಗಳಿಗೆ ವೇದಿಕೆ ಒದಗಿಸಿದ್ದವು. ಟೂರ್ನಿಯಲ್ಲಿ ಒಟ್ಟು 22 ಪಂದ್ಯಗಳು ನಡೆದವು. ಪಂದ್ಯದಲ್ಲಿ ಸರಾಸರಿ 4ರಂತೆ ಟೂರ್ನಿಯಲ್ಲಿ ಬರೋಬ್ಬರಿ 88 ಗೋಲುಗಳು ದಾಖಲಾದವು.

ಬಹಳ ವಿಶೇಷ ಎಂದರೆ ಭಾರತಕ್ಕೆ ಈ ವಿಶ್ವಕಪ್‌ನಲ್ಲಿ ಆಡಲು ಅರ್ಹತೆ ದೊರೆತಿತ್ತು. ಫಿಫಾ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದರೂ,ಪ್ರಯಾಣ ವೆಚ್ಚ ಭರಿಸಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಭಾರತ ಟೂರ್ನಿಯಿಂದ ಹಿಂದೆ ಸರಿದಿತ್ತು. ತಂಡಗಳನ್ನು 4 ಗುಂಪುಗಳಾಗಿ ವಿಂಗಡಿಸಲಾಗಿತ್ತು. ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಉರುಗ್ವೆ, ಬ್ರೆಜಿಲ್,ಸ್ವೀಡನ್ ಹಾಗೂ ಸ್ಪೇನ್ ತಂಡಗಳು ಫೈನಲ್ ಹಂತಕ್ಕೇರಿದವು. ಈ ಬಾರಿ ಟೂರ್ನಿ ಮಾದರಿಯಲ್ಲಿ ಬದಲಾವಣೆ ಮಾಡಲಾಗಿತ್ತು. ಫೈನಲ್ ಹಂತದಲ್ಲಿ ನಾಲ್ಕು ತಂಡಗಳು ಪರಸ್ಪರ ಮುಖಾಮುಖಿಯಾದವು. ಅತಿಹೆಚ್ಚು ಅಂಕ ಗಳಿಸಿದ ಉರುಗ್ವೆ 2ನೇ ಬಾರಿ ಚಾಂಪಿಯನ್ ಆಯಿತು.