ರಷ್ಯಾ(ಜೂ.23): ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅರ್ಜೆಂಟೀನಾ ಪ್ರದರ್ಶನ ಅಭಿಮಾನಿಗಳ ನಿರಾಸೆಗೆ ಕಾರಣವಾಗಿದೆ. ಮೊದಲ ಪಂದ್ಯದಲ್ಲಿ ಐಸ್‌ಲೆಂಡ್ ವಿರುದ್ದ 1-1 ಅಂತರದಲ್ಲಿ ಡ್ರಾ ಸಾಧಿಸಿದರೆ, ದ್ವಿತೀಯ ಪಂದ್ಯದಲ್ಲಿ ಕ್ರೋವೇಶಿಯಾ ವಿರುದ್ಧ 0-3 ಅಂತರದಲ್ಲಿ ಸೋಲು ಅನುಭವಿಸಿತ್ತು. 

ಅರ್ಜೆಂಟೀನಾ ಸೋಲಿಗೆ ಲಿಯೋನಲ್ ಮೆಸ್ಸಿ ಕಾರಣ ಅನ್ನೋ ಮಾತುಗಳು ಕೇಳಿ ಬರುತ್ತಿದೆ. ಮೊದಲ ಪಂದ್ಯದಲ್ಲಿ ಪೆನಾಲ್ಟಿ ಅವಕಾಶ ಕಳೆದುಕೊಂಡ ಮೆಸ್ಸಿ, ದ್ವಿತೀಯ ಪಂದ್ಯದಲ್ಲಿ ಮೆಸ್ಸಿ ಸಪ್ಪೆಯಾಗಿದ್ದರು. ಇದೇ ಅರ್ಜೆಂಟೀನಾ ಸೋಲಿಗೆ ಕಾರಣ ಅನ್ನೋ ವಾದವೂ ಹುಟ್ಟಿಕೊಂಡಿದೆ.

ಅಸಲಿಗೆ ಅರ್ಜೆಂಟೀನಾ ಸೋಲಿಗೆ ಮೆಸ್ಸಿ ಕಾರಣವಲ್ಲ, ತಂಡದ ಮಿಡ್‌ಫೀಲ್ಡ್ ಕಾರಣ. ಮಿಡ್‌ಫೀಲ್ಡರ್‌ಗಳು  ಮೆಸ್ಸಿಗೆ ಸರಿಯಾಗಿ ಬಾಲ್ ಪಾಸ್ ಮಾಡಿಲ್ಲ. ಇಡಿ ಟೂರ್ನಿಯಲ್ಲಿ ಮೆಸ್ಸಿ ಬಾಲ್‌ಗಾಗಿ ಕಾಯುಬೇಕಾಯಿತೇ ಹೊರತು ಸೂಕ್ತ ಸಂದರ್ಭದಲ್ಲಿ ಅಕ್ಯೂರೆಸಿ ಪಾಸ್‌ಗಳು ಮಾತ್ರ ಬರಲೇ ಇಲ್ಲ. 

ಅರ್ಜೆಂಟೀನಾ ಮಿಡ್‌ಫೀಲ್ಡ್ ವೈಫಲ್ಯವೇ, ತಂಡದ ಸೋಲಿಗೆ ಕಾರಣ. ಹೀಗಾಗಿ ಲಿಯೋನಲ್ ಮೆಸ್ಸಿ ಮೇಲೆ ಆರೋಪ ಹೊರಿಸಿ ಪ್ರಯೋಜನವಿಲ್ಲ ಎಂದು  ಭಾರತದ ಮಾಜಿ ನಾಯಕ ಬೈಚುಂಗ್ ಭುಟಿಯಾ ಹೇಳಿದ್ದಾರೆ. ಮುಂದಿನ ಪಂದ್ಯದಲ್ಲಿ ಅರ್ಜೆಂಟೀನಾ ಹಾಗೂ ನೈಜೀರಿಯಾ ಮುಖಾಮುಖಿಯಾಗಲಿದೆ. ಈ ಪಂದ್ಯ ಅರ್ಜೆಂಟೀನಾದ ಫಿಫಾ ಭವಿಷ್ಯ ನಿರ್ಧರಿಸಲಿದೆ.