ಸೇಂಟ್ ಪೀಟರ್ಸ್’ಬರ್ಗ್[ಜು.14]: ಫಿಫಾ ಫುಟ್ಬಾಲ್ ವಿಶ್ವಕಪ್‌ನಲ್ಲಿ ಯಾವ ತಂಡವೂ 3ನೇ ಸ್ಥಾನಕ್ಕಾಗಿ ನಡೆಯುವ ಪಂದ್ಯದಲ್ಲಿ ಆಡಲು ಬಯಸುವುದಿಲ್ಲ. ಆದರೆ ಇಂಗ್ಲೆಂಡ್ ಹಾಗೂ ಬೆಲ್ಜಿಯಂಗೆ ಬೇರೆ ದಾರಿ ಇಲ್ಲದಂತಾಗಿದೆ. ಟ್ರೋಫಿ ಗೆಲ್ಲುವ ತಂಡಗಳೊಂದಿಗೆ ಪೈಪೋಟಿಯಲ್ಲಿದ್ದ ಉಭಯ ತಂಡಗಳು, ಸೆಮಿಫೈನಲ್‌ನಲ್ಲಿ ಮುಗ್ಗರಿಸಿ ಇಂದು ಇಲ್ಲಿ ನಡೆಯಲಿರುವ 3ನೇ ಸ್ಥಾನಕ್ಕಾಗಿನ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಎರಡೂ ತಂಡಗಳು ಗೆಲುವಿನೊಂದಿಗೆ ವಿಶ್ವಕಪ್‌ಗೆ ವಿದಾಯ ಹೇಳಲು ಇಚ್ಛಿಸುತ್ತಿವೆ.

ಮೊದಲ ಸೆಮೀಸ್‌ನಲ್ಲಿ ಫ್ರಾನ್ಸ್ ವಿರುದ್ಧ ಬೆಲ್ಜಿಯಂ 0-1 ಗೋಲಿನಿಂದ ಸೋತರೆ, ಕ್ರೊವೇಷಿಯಾ ವಿರುದ್ಧ ಹೆಚ್ಚುವರಿ ಸಮಯದಲ್ಲಿ ಇಂಗ್ಲೆಂಡ್ 1-2ರಲ್ಲಿ ಪರಾಭವಗೊಂಡಿತು. ‘ಜಿ’ ಗುಂಪಿನಲ್ಲಿ
ಒಟ್ಟಿಗೆ ಸ್ಥಾನ ಪಡೆದಿದ್ದ ಇಂಗ್ಲೆಂಡ್ ಹಾಗೂ ಬೆಲ್ಜಿಯಂ, ಗುಂಪು ಹಂತದಲ್ಲಿ ಈಗಾಗಲೇ ಒಮ್ಮೆ ಮುಖಾಮುಖಿಯಾಗಿದ್ದವು. ಹೆಚ್ಚು ಮಹತ್ವ ಪಡೆಯದ ಪಂದ್ಯದಲ್ಲಿ ಬೆಲ್ಜಿಯಂ 1-0 ಗೋಲಿನಿಂದ ಗೆದ್ದು, ಗುಂಪಿನಲ್ಲಿ ಅಗ್ರಸ್ಥಾನ ಗಿಟ್ಟಿಸಿತ್ತು. 3ನೇ ಸ್ಥಾನಕ್ಕಾಗಿನ ಪಂದ್ಯದ ಬಗ್ಗೆ ಹೆಚ್ಚು ಆಸಕ್ತಿ ಇಲ್ಲದಿದ್ದರೂ, ಇಂಗ್ಲೆಂಡ್ ವಿಶ್ವಕಪ್’ನಲ್ಲಿ 52 ವರ್ಷಗಳ ಬಳಿಕ ಉತ್ತಮ ಸ್ಥಾನದೊಂದಿಗೆ ಹೊರನಡೆಯಲು ಎದುರು ನೋಡುತ್ತಿದೆ.

ಬೆಲ್ಜಿಯಂ 1986ರಲ್ಲಿ 4ನೇ ಸ್ಥಾನ ಪಡೆದಿದ್ದೇ ತಂಡದ ಶ್ರೇಷ್ಠ ಸಾಧನೆಯಾಗಿದೆ. ಹೀಗಾಗಿ, ತನ್ನ ದಾಖಲೆಯನ್ನು ಉತ್ತಮಗೊಳಿಸಿಕೊಳ್ಳಲು ‘ರೆಡ್ ಡೆವಿಲ್ಸ್’ ತಂಡ ಕಾಯುತ್ತಿದೆ. ಬೆಲ್ಜಿಯಂ ಫುಟ್ಬಾಲ್‌ನ ‘ಸುವರ್ಣ ಪೀಳಿಗೆ’ ಎಂದು ಕರೆಸಿಕೊಳ್ಳುತ್ತಿರುವ ತಂಡದಲ್ಲಿರುವ ಬಹುತೇಕ ಆಟಗಾರರು 2022ರ ವಿಶ್ವಕಪ್ ನಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ, ತಂಡ ಇಂದಿನ ಪಂದ್ಯದಲ್ಲಿ ಗೆಲ್ಲುವುದರೊಂದಿಗೆ ಮುಂದಿನ ವಿಶ್ವಕಪ್‌ಗೆ ಈಗಿನಿಂದಲೇ ತಯಾರಿ ಆರಂಭಿಸುವ ಲೆಕ್ಕಾಚಾರದಲ್ಲಿದೆ.

ಕಳೆದ 9 ವಿಶ್ವಕಪ್‌ಗಳಲ್ಲಿ ಯುರೋಪಿಯನ್ ತಂಡಗಳೇ 3ನೇ ಸ್ಥಾನ ಪಡೆದುಕೊಂಡಿವೆ. 2014ರಲ್ಲಿ ಬ್ರೆಜಿಲ್ ವಿರುದ್ಧ 3-0ಯಲ್ಲಿ ನೆದರ್‌ಲೆಂಡ್ಸ್ ಗೆದ್ದಿತ್ತು. ಇಂಗ್ಲೆಂಡ್ ನಾಯಕ ಹ್ಯಾರಿ ಕೇನ್ ಈಗಾಗಲೇ 6 ಗೋಲು ಗಳಿಸಿದ್ದು, ‘ಚಿನ್ನದ ಬೂಟು’ ಓಟದಲ್ಲಿ ಮೊದಲಿದ್ದಾರೆ. 2002ರ ವಿಶ್ವಕಪ್‌ನಲ್ಲಿ ಬ್ರೆಜಿಲ್‌ನ ರೊನಾಲ್ಡೋ 8 ಗೋಲು ಗಳಿಸಿದ್ದು, ಕೇನ್ ಹ್ಯಾಟ್ರಿಕ್ ಬಾರಿಸಿದರೆ ಆ ದಾಖಲೆ ಪುಡಿಯಾಗಲಿದೆ.