ರಷ್ಯಾ(ಜೂ.25): ತವರಿನ ಅಭಿಮಾನಿಗಳ ಮುಂದೆ ಗೆಲುವಿನ ವಿಶ್ವಾಸದಲ್ಲಿದ್ದ ರಷ್ಯಾಗೆ ನಿರಾಸೆಯಾಗಿದೆ. ಉರುಗ್ವೆ ವಿರುದ್ಧದ ಪಂದ್ಯದಲ್ಲಿ ರಷ್ಯಾ 0-3 ಅಂತರದ ಹೀನಾಯ ಸೋಲು ಅನುಭವಿಸಿದೆ. 

ತವರಿನ ಅಭಿಮಾನಿಗಳ ಅಪಾರ ಬೆಂಬಲವಿದ್ದರೂ ರಷ್ಯಾ ಆರಂಭದಿಂದಲೇ ಹಿನ್ನಡೆ ಅನುಭವಿಸಿತು. 10ನೇ ನಿಮಿಷದಲ್ಲಿ ಲೂಯಿಸ್ ಸೌರೆಜ್ ಗೋಲು ಬಾರಿಸೋ ಮೂಲಕ ಉರುಗ್ವೈ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು.

ಒಂದು ಗೋಲಿನಿಂದ ಹಿನ್ನಡೆ ಅನುಭವಿಸಿದ ರಷ್ಯಾ 23ನೇ ನಿಮಿಷದಲ್ಲಿ ಎಡವಟ್ಟು ಮಾಡಿತು. ರಷ್ಯಾದ ಡೆನಿಸ್ ಚೆರ್ಶೆವ್ ಉರುಗ್ವೆ ತಂಡಕ್ಕೆ ಗೋಲು ಸಿಡಿಸಿದರು. ಸ್ವಗೋಲಿನಿಂದ ಉರುಗ್ವೆ ಮೊದಲಾರ್ಧದಲ್ಲಿ 2-0 ಅಂತರ ಕಾಪಾಡಿಕೊಂಡಿತು.

ದ್ವಿತಿಯಾರ್ಧದಲ್ಲಿ ರಷ್ಯಾ ಗೋಲು ಬಾರಿಸಲು ಪ್ರಯತ್ನ ಮಾಡಿತು. ಆದರೆ ಉರುಗ್ವೆ ಡಿಫೆಂಡರ್‌ಗಳನ್ನ ವಂಚಿಸಿ ಗೋಲು ಬಾರಿಸಲು ಸಾಧ್ಯವಾಗಲಿಲ್ಲ. ಭರ್ಜರಿ ಫಾರ್ಮ್ ಮುಂದುವರಿಸಿದೆ ಉರುಗ್ವೆ 90ನೇ ನಿಮಿಷದಲ್ಲಿ ಎಡಿನ್ಸನ್ ಕವಾನಿ ಗೋಲು ಬಾರಿಸಿದರು. ಈ ಮೂಲಕ ಉರುಗ್ವೆ 3-0 ಅಂತರದಲ್ಲಿ ಪಂದ್ಯ ಗೆದ್ದುಕೊಂಡಿತು.