ಮಾಸ್ಕೋ(ಜು.01) : ತವರಿನ ಅಭಿಮಾನಿಗಳ ಮುಂದೆ ಫಿಫಾ ವಿಶ್ವಕಪ್ ಪ್ರಶಸ್ತಿ ಗೆಲ್ಲೋ ಕನಸಿನಲ್ಲಿರುವ ಆತಿಥೇಯ ರಷ್ಯಾ ತಂಡಕ್ಕೆ ಇಂದು ಕಠಿಣ ಸವಾಲು ಎದುರಾಗಿದೆ. ಇಂದಿನ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಷ್ಯಾ ತಂಡ, 2010ರ ಚಾಂಪಿಯನ್ ತಂಡ ಸ್ಪೇನ್ ವಿರುದ್ಧ ಹೋರಾಟ ನಡೆಸಲಿದೆ.

ಗ್ರೂಪ್ ಹಂತದಲ್ಲಿ ಸೌದಿ ಅರೇಬಿಯಾ ಹಾಗೂ ಈಜಿಪ್ಟ್ ವಿರುದ್ದ ಗೆಲುವು ಸಾಧಿಸಿದ್ದ ರಷ್ಯಾ, ಉರುಗ್ವೆ ವಿರುದ್ಧ ಹೀನಾಯ ಸೋಲು ಕಂಡಿತ್ತು. ಇದೇ ಮೊದಲ ಬಾರಿಗೆ ನಾಕೌಟ್ ಹಂತಕ್ಕೆ ಲಗ್ಗೆ ಇಟ್ಟಿರುವ ರಷ್ಯಾ ಇಂದು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. 

ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರುವ ಸ್ಪೇನ್, ಈ ಬಾರಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ. 2 ಗೆಲುವು ಹಾಗೂ 1 ಡ್ರಾ ದೊಂದಿಗೆ ಪ್ರೀ ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶ ಪಡೆದಿರುವ ಸ್ಪೇನ್, ರಷ್ಯಾ ವಿರುದ್ಧ ಭರ್ಜರಿ ಗೆಲುವಿನ ವಿಶ್ವಾಸದಲ್ಲಿದೆ. ಲುಜ್ನಿಕಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯ ತವರಿನ ಅಭಿಮಾನಿಗಳಿಂದ ತುಂಬಿ ತುಳುಕಲಿದೆ.