ರಷ್ಯಾ(ಜು.01): ಫಿಫಾ ವಿಶ್ವಕಪ್ ನಾಕೌಟ್ ಹೋರಾಟದಲ್ಲಿ ಆತಿಥೇಯ ರಷ್ಯಾ ರೋಚಕ ಗೆಲುವು ಸಾಧಿಸಿದೆ. ರೋಚಕ ಪಂದ್ಯ 1-1 ಅಂತರದಲ್ಲಿ ಡ್ರಾಗೊಂಡಿತು. ಹೆಚ್ಚುವರಿ ಸಮಯದಲ್ಲೂ ಗೋಲು ದಾಖಲಾಗಲಿಲ್ಲ. ಆದರೆ ಪೆನಾಲ್ಟಿ ಶೂಟೌಟ್‌ನಲ್ಲಿ ರಷ್ಯಾ 4 ಗೋಲು ಸಿಡಿಸಿದರೆ, ಸ್ಪೇನ್ 3 ಗೋಲು ಬಾರಿಸಿತು. ಈ ಮೂಲಕ ರಷ್ಯಾ ಗೆಲುವಿನ ನಗೆ ಬೀರಿತು. 

ನಾಕೌಟ್ ಪಂದ್ಯದ ಮೊದಲಾರ್ಧದ ಆರಂಭದಲ್ಲಿ ರಷ್ಯಾ ಎಡವಟ್ಟು ಮಾಡಿಕೊಂಡಿತು. ಗೋಲು ಬಾರಿಸಿ ಮುನ್ನಡೆ ಪಡೆಯಬೇಕಿದ್ದ ರಷ್ಯಾ ಎದುರಾಳಿ ಸ್ಪೇನ್‌ಗೆ ಗೋಲು ಬಾರಿಸಿತು.  12ನೇ ನಿಮಿಷದಲ್ಲಿ ರಷ್ಯಾದ ಸರ್ಜೈ ಇಗ್ನಾಶ್‌ವಿಚ್ ಸಿಡಿಸಿದ ಸ್ವಗೋಲಿನಿಂದ ಸ್ಪೇನ್ 1-0 ಮುನ್ನಡೆ ಸಾಧಿಸಿತು. 

ರಷ್ಯಾ ಕೊಟ್ಟ ವರದಾನದಿಂದ ಮಹತ್ವದ ಪಂದ್ಯದಲ್ಲಿ ಮುನ್ನಡೆ ಸಾಧಿಸಿದ ಸ್ಪೇನ್ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. 41ನೇ ನಿಮಿಷದಲ್ಲಿ ಆರ್ಟಮ್ ಡಿಜ್ಯೂಬ ಗೋಲು ಬಾರಿಸಿ 1-1 ಅಂತರದಲ್ಲಿ ಸಮಭಲಗೊಳಿಸಿದರು. ಮೊದಲಾರ್ಧದಲ್ಲಿ ರಷ್ಯಾ ಸಮಭಲ ಸಾಧಿಸಿ ನಿಟ್ಟುಸಿರು ಬಿಟ್ಟಿತು.

ಸಮಭಲದ ಕಾರಣ ದ್ವಿತಿಯಾರ್ಧದ ಹೋರಾಟ ಮತ್ತಷ್ಟು ರೋಚಕಗೊಂಡಿತು. ಗೆಲುವಿಗಾಗಿ ಹೋರಾಟ ತೀವ್ರಗೊಂಡಿತು. ಆದರೆ ಸೆಕೆಂಡ್ ಹಾಫ್‌ನಲ್ಲಿ ಗೋಲು ದಾಖಲಾಗಲಿಲ್ಲ. 5ನಿಮಿಷದ ಇಂಜುರಿ ಟೈಮ್‌ನಲ್ಲೂ ಗೋಲು ಗಳಿಸಲು ಉಭಯ ತಂಡಗಳು ವಿಫಲವಾಯಿತು. 

ಫಲಿತಾಂಶ ನಿರ್ಧಾರಕ್ಕಾಗಿ 30 ನಿಮಿಷಗಳ ಹೆಚ್ಚುವರಿ ಸಮಯ ನೀಡಲಾಯಿತು. ಆದರೆ ಹೆಚ್ಚುವರಿ ಸಮಯದಲ್ಲೂ ಯಾವುದೇ ಗೋಲು ದಾಖಲಾಗಲಿಲ್ಲ. ಹೀಗಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು.  ಪೆನಾಲ್ಟಿ ಶೂಟೌಟ್‌ನಲ್ಲಿ ರಷ್ಯಾ 4 ಗೋಲು ಸಿಡಿಸಿದರೆ, ಸ್ಪೇನ್ 3 ಗೋಲು ಬಾರಿಸಿತು. ರಷ್ಯಾ ಗೋಲು ಕೀಪರ್ ಅದ್ಬುತ ಸೇವ್ ರಷ್ಯಾ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿತು. ಈ ಮೂಲಕ ಆತಿಥೇಯ ರಷ್ಯಾ ಕಿಕ್ಕಿರಿದು ತುಂಬಿದ ಅಭಿಮಾನಿಗಳ ಮುಂದೆ ಸಂಭ್ರಮಾಚರಣೆ ನಡೆಸಿತು.