ರಷ್ಯಾ(ಜು.06): ಫಿಫಾ ಫುಟ್ಬಾಲ್‌ ವಿಶ್ವಕಪ್‌ ನಿರ್ಣಾಯಕ ಘಟ್ಟತಲುಪಿದ್ದು, ಶುಕ್ರವಾರದಿಂದ ಕ್ವಾರ್ಟರ್‌ ಫೈನಲ್‌ ಹಂತ ಆರಂಭಗೊಳ್ಳಲಿದೆ. ನಿಜ್ನಿ ನೊವ್ಗೊರೊಡ್‌ನಲ್ಲಿ ನಡೆಯಲಿರುವ ಮೊದಲ ಕ್ವಾರ್ಟರ್‌ ಫೈನಲ್‌ನಲ್ಲಿ ಉರುಗ್ವೆ ಹಾಗೂ ಫ್ರಾನ್ಸ್‌ ಮುಖಾಮುಖಿಯಾದರೆ, ಕಜಾನ್‌ನಲ್ಲಿ ನಡೆಯಲಿರುವ 2ನೇ ಕ್ವಾರ್ಟರ್‌ ಫೈನಲ್‌ನಲ್ಲಿ ಬ್ರೆಜಿಲ್‌ ಹಾಗೂ ಬೆಲ್ಜಿಯಂ ಸೆಣಸಲಿವೆ.

ಈ ಪಂದ್ಯದ ಉರುಗ್ವೆಯ ವಿಶ್ವ ಶ್ರೇಷ್ಠ ರಕ್ಷಣಾ ಪಡೆ ಹಾಗೂ ಫ್ರಾನ್ಸ್‌ನ ಆಕ್ರಮಣಕಾರಿ ಸ್ಟ್ರೈಕರ್‌ಗಳ ರೋಮಾಂಚನಕಾರಿ ಪೈಪೋಟಿಗೆ ಸಾಕ್ಷಿಯಾಗಲಿದೆ. ಫ್ರಾನ್ಸ್‌, ಪ್ರಮುಖವಾಗಿ ತನ್ನ 19 ವರ್ಷದ ತಾರಾ ಆಟಗಾರ ಕಿಲಿಯನ್‌ ಎಂಬಾಪೆ ಮೇಲೆ ಹೆಚ್ಚು ವಿಶ್ವಾಸವಿರಿಸಿದೆ. ಆದರೆ ಎಂಬಾಪೆ, ಈ ವರೆಗೂ ಉರುಗ್ವೆಯಂತಹ ಬಲಿಷ್ಠ ರಕ್ಷಣಾ ಪಡೆಯನ್ನು ಎದುರಿಸಿದ್ದಾರೆಯೇ ಎನ್ನುವ ಪ್ರಶ್ನೆ ಉದ್ಭವವಾಗಿದ್ದು, ಗೋಲಿನ ಜಾದೂ ಪ್ರದರ್ಶಿಸಲಿದ್ದಾರಾ ಎನ್ನುವ ಬಗ್ಗೆ ಅನುಮಾನಗಳಿವೆ.

ನಾಯಕ ಡಿಗೋ ಗಾಡಿನ್‌ ಮುಂದಾಳತ್ವದ ಉರುಗ್ವೆ ಡಿಫೆನ್ಸ್‌, ಜೋಸ್‌ ಗೋಮಿನೆಜ್‌, ಮಾರ್ಟಿನ್‌ ಕೆಸೆರೆಸ್‌, ಡಿಗೋ ಲಕ್ಸಾಲ್ಟ್‌ ಹಾಗೂ ಗೋಲ್‌ ಕೀಪರ್‌ ಫೆರ್ನಾಂಡೋ ಮುಸ್ಲೆರಾರನ್ನು ಒಳಗೊಂಡಿದೆ. ಒಬ್ಬರಿಗಿಂತ ಒಬ್ಬರು ಶ್ರೇಷ್ಠ ಡಿಫೆಂಡರ್‌ಗಳೆನಿಸಿದ್ದು, ತಂಡ ಈ ವಿಶ್ವಕಪ್‌ನಲ್ಲಿ ಜಂಟಿ ಶ್ರೇಷ್ಠ ದಾಖಲೆ ಹೊಂದಿದೆ. ಗುಂಪು ಹಂತದಲ್ಲಿ ಕ್ಲೀನ್‌ ಶೀಟ್‌ (ಗೋಲು ಬಿಟ್ಟುಕೊಡದೆ ಇರುವುದು) ಕಾಪಾಡಿಕೊಂಡಿದ್ದ ಉರುಗ್ವೆ ವಿರುದ್ಧ ಈ ಟೂರ್ನಿಯಲ್ಲಿ ಗೋಲು ಬಾರಿಸಿರುವ ಏಕೈಕ ಆಟಗಾರ ಪೋರ್ಚುಗಲ್‌ನ ಪೆಪೆ(ಪ್ರಿ ಕ್ವಾರ್ಟರ್‌ನಲ್ಲಿ). ಫ್ರಾನ್ಸ್‌ಗಿಂತ 3 ಗೋಲು ಕಡಿಮೆ ಬಿಟ್ಟುಕೊಟ್ಟಿದ್ದರೂ ಉರುಗ್ವೆ, ಫ್ರಾನ್ಸ್‌ನಷ್ಟೇ (7) ಗೋಲು ಬಾರಿಸಿದೆ.

ಉರುಗ್ವೆಗೆ ತಾರಾ ಸ್ಟ್ರೈಕರ್ ಎಡಿಸನ್‌ ಕವಾನಿಯ ದೈಹಿಕ ಕ್ಷಮತೆಯ ಚಿಂತೆ ಶುರುವಾಗಿದ್ದು, ಅವರು ಆಡಲಿದ್ದಾರೋ ಇಲ್ಲವೋ ಎನ್ನುವುದು ಪಂದ್ಯಕ್ಕೂ ಮುನ್ನ ತಿಳಿಯಲಿದೆ. ಲೂಯಿಸ್‌ ಸ್ವಾರೆಜ್‌ ತಮ್ಮ ಅನುಭವಕ್ಕೆ ತಕ್ಕ ಆಟವಾಡಿದರೆ, ಫ್ರಾನ್ಸ್‌ ರಕ್ಷಣಾ ಪಡೆ ಒತ್ತಡಕ್ಕೆ ಸಿಲುಕುವುದರಲ್ಲಿ ಅನುಮಾನವಿಲ್ಲ. ಮತ್ತೊಂದು ಕುತೂಹಲಕಾರಿ ಅಂಶವೆಂದರೆ, ಉಭಯ ತಂಡಗಳ ಆಟಗಾರರೆಲ್ಲರೂ ಬಹುತೇಕ ಒಂದಲ್ಲ ಒಂದು ಕ್ಲಬ್‌ ಪರ ಒಟ್ಟಿಗೆ ಆಡುತ್ತಾರೆ. ಹೀಗಾಗಿ, ಒಬ್ಬರ ಆಟದ ಬಗ್ಗೆ ಮತ್ತೊಬ್ಬರಿಗೆ ಉತ್ತಮ ಮಾಹಿತಿ ಇದೆ. ಇದು ಪೈಪೋಟಿಯನ್ನು ಮತ್ತಷ್ಟುಹೆಚ್ಚಿಸಿದರೆ ಅಚ್ಚರಿಯಿಲ್ಲ.