21ನೇ ಫಿಫಾ ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ರಷ್ಯಾ ಹಾಗೂ ಸೌದಿ ಅರೇಬಿಯಾ ನಡುವಿನ ರೋಚಕ ಹೋರಾಟ ಹೇಗಿತ್ತು? ಇಲ್ಲಿದೆ ವಿವರ.
ಮಾಸ್ಕೋ(ಜೂ.14): ಫಿಫಾ ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ರಷ್ಯಾ ಗೆಲುವಿನ ನಗೆ ಬೀರಿದೆ. ಸೌದಿ ಅರೇಬಿಯಾ ವಿರುದ್ಧದ ನಡೆದ ಮೊದಲ ಪಂದ್ಯದಲ್ಲಿ ರಷ್ಯಾ 5-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿದೆ.
ಪಂದ್ಯದ ಆರಂಭದಲ್ಲೇ ಉಭಯ ತಂಡಗಳು ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ರಷ್ಯಾ 12ನೇ ನಿಮಿಷದಲ್ಲಿ ಗೋಲು ಸಿಡಿಸಿ ಖಾತೆ ತೆರೆಯಿತು. ಯೂರಿ ಗಝಿನ್‌ಸ್ಕೈ ಮೊದಲ ಗೊಲು ಸಿಡಿಸಿ ರಷ್ಯಾಗೆ ಮುನ್ನಡೆ ತಂದುಕೊಟ್ಟರು.
ಆರಂಭದಲ್ಲೇ ಹಿನ್ನಡೆ ಅನುಭವಿಸಿದ ಸೌದಿ ಅರೇಬಿಯಾ ತಿರುಗೇಟು ನೀಡೋ ಪ್ರಯತ್ನ ಮಾಡಿತು. 30ನೇ ನಿಮಿಷದಲ್ಲಿ ಸೌದಿ ಅರೇಬಿಯಾ ತಂಡದ ಸಲ್ಮಾನ್ ಅಲ್ ಫರಾಜ್ ಗೋಲು ಸಿಡಿಸೋ ಅತ್ಯುತ್ತಮ ಅವಕಾಶವನ್ನ ಕೈಚೆಲ್ಲಿದರು.
ಗೋಲಿನ ಮುನ್ನಡೆಯೊಂದಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡ ರಷ್ಯಾ, ತವರಿನ ಅಭಿಮಾನಿಗಳಿಗೆ ಮತ್ತೊಂದು ಗೋಲಿನ ಸಿಹಿ ನೀಡಿತು. 43ನೇ ನಿಮಿಷದಲ್ಲಿ ಡೆನಿಸ್ ಚೆರ್ಶೆವ್ ಗೋಲು ಸಿಡಿಸೋ ಮೂಲಕ ರಷ್ಯಾಗೆ 2-0 ಮುನ್ನಡೆ ತಂದುಕೊಟ್ಟರು. ಅರ್ಧಗಂಟೆಯಿಂದ ಡಗೌಟ್‌ನಲ್ಲಿ ಕುಳಿತ ಅವಕಾಶಕ್ಕಾಗಿ ಕಾಯುತ್ತಿದ್ದ ಡೆನಿಸ್, ಮೈದನಕ್ಕಿಳಿದ ತಕ್ಷಣವೇ ಗೋಲು ಸಿಡಿಸಿ ಇತಿಹಾಸ ರಚಿಸಿದರು. ಈ ಮೂಲಕ ಮೊದಲಾರ್ಧದ ಮುಕ್ತಾಯದ ವೇಳೆ ರಷ್ಯಾ 2-0 ಮುನ್ನಡೆ ಕಾಯ್ದುಕೊಂಡಿತು.
ದ್ವಿತಿಯಾರ್ಧದಲ್ಲಿ ಸೌದಿ ಅರೇಬಿಯಾ ಗೋಲಿಗಾಗಿ ಪರದಾಡಿತು. ಆದರೆ ರಷ್ಯಾ ಭರ್ಜರಿ ಪ್ರದರ್ಶನವನ್ನ ಮುಂದುವರಿಸಿತು. 71ನೇ ನಿಮಿಷದಲ್ಲಿ ರಷ್ಯಾದ ಆರ್ಟಮ್ ಡಿಜ್ಯೂಬಾ 3ನೇ ಗೋಲು ಸಿಡಿಸಿ ಸಂಭ್ರಮಿಸಿದರು.
90ನೇ ನಿಮಿಷದಲ್ಲಿ ಮತ್ತೆ ಅಬ್ಬರಿಸಿದ ಡೆನಿಸ್ ಚೆರ್ಶೆವ್ 2ನೇ ಗೋಲು ಬಾರಿಸಿದರು. ಇಂಜುರಿ ಟೈಮ್‌ನಲ್ಲಿ ರಷ್ಯಾ ಮತ್ತಷ್ಟು ಆಕ್ರಮಣಕಾರಿ ಆಟವಾಡಿತು. ಇನ್ನೇನು ಪಂದ್ಯ ಮುಗಿಯಿತು ಅನ್ನುವಷ್ಟರಲ್ಲೇ ರಷ್ಯಾದ ಅಲೆಕ್ಸಾಂಡರ್ ಗೋಲ್ವಿನ್ ಗೋಲು ಸಿಡಿಸಿ ರಷ್ಯಾಗೆ 5-0 ಮುನ್ನಡೆ ತಂದುಕೊಟ್ಟರು.
ರೋಚಕ 90 ನಿಮಿಷಗಳ ಪಂದ್ಯದಲ್ಲಿ ರಷ್ಯಾ ಸಂಪೂರ್ಣ ಮೇಲುಗೈ ಸಾಧಿಸಿತು. 5-0 ಗೋಲುಗಳ ಅಂತರದಲ್ಲಿ ರಷ್ಯಾ ಗೆಲುವಿನ ಕೇಕೆ ಹಾಕಿತು. ಸೌದಿ ತಂಡವನ್ನ ಮಣಿಸಿದ ಆತಿಥೇಯ ರಷ್ಯಾ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
