ನವದೆಹಲಿ[ಜೂ.19]: ವಿಶ್ವಕಪ್‌ನಲ್ಲಿ ಭಾರತ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಮಣಿಸಿದ ಬೆನ್ನಲ್ಲೇ ಭಾರತದ ಕ್ರಿಕೆಟ್ ಪ್ರಿಯರು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಆಟಕ್ಕೆ ಮನಸೋತಿದ್ದಾರೆ. ಕೇವಲ ಭಾರತೀಯರು ಮಾತ್ರವಲ್ಲ ಪಾಕಿಸ್ತಾನಿ ಕ್ರಿಕೆಟ್ ಪ್ರಿಯರೂ ಕೊಹ್ಲಿ ಆಟಕ್ಕೆ ನಿಬ್ಬೆರಗಾಗಿದ್ದಾರೆ ಎನ್ನುವಂತಹ ಸಂದೇಶಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸದ್ಯ ಪಾಕಿಸ್ತಾನಿಗಳು ‘ನಮಗೆ ಕಾಶ್ಮೀರ ಬೇಡ, ಕೊಹ್ಲಿ ಕೊಡಿ ಸಾಕು’ ಎಂಬ ಬ್ಯಾನರ್ ವೊಂದನ್ನು ಹಿಡಿದಿರುವ ಫೋಟೋ ಭಾರಿ ವೈರಲ್ ಆಗುತ್ತಿದೆ.

ಈ ಚಿತ್ರದಲ್ಲಿ ಪಾಕಿಸ್ತಾನ ರಾಷ್ಟ್ರೀಯ ಧ್ವಜಗಳು ಕಾಣಿಸುತ್ತಿವೆ. ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಗೆ ಭಾರತದಲ್ಲಿ ಮಾತ್ರವಲ್ಲದೆ ಪಾಕ್‌ನಲ್ಲೂ ಅಭಿಮಾನಿಗಳಿದ್ದಾರೆ ಎಂದು ಕೆಲ ಸುದ್ದಿ ಮಾಧ್ಯಮಗಳೂ ವರದಿ ಮಾಡಿವೆ.

ಆದರೆ ನಿಜಕ್ಕೂ ಪಾಕಿಸ್ತಾನಿಗಳು ‘ವಿರಾಟ್ ಕೊಹ್ಲಿ ಕಳುಹಿಸಿಕೊಡಿ’ ಎಂಬ ಆಂದೋಲನ ಆರಂಭಿಸಿದ್ದರೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂದು ತಿಳಿದುಬಂದಿದೆ. ರಿವರ್ಸ್ ಇಮೇಜ್‌ನಲ್ಲಿ ಈ ಚಿತ್ರದ ಜಾಡು ಹಿಡಿದು ಹುಡುಕಹೊರಟಾಗ 2016ರ ಇಂಡಿಯಾ ಟುಡೇ ವಾಹಿನಿಯ ಸುದ್ದಿಯೊಂದು ಪತ್ತೆಯಾಗಿದೆ. ಅದರಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ನಿಧನದ ಬಳಿಕ ಕಾಶ್ಮೀರಿ ಯುವಕರು ‘ವಿ ವಾಂಟ್ ಆಜಾದಿ’ ಎಂಬ ಬ್ಯಾನರ್ ಹಿಡಿದು ಪ್ರತಿಭಟಿಸಿದ್ದರು.

ಆಗಿನ ಫೋಟೋವನ್ನೇ ಫೋಟೋಶಾಪ್ ಮೂಲಕ ಎಡಿಟ್ ಮಾಡಿ ‘ವಿ ಡೋಂಟ್ ವಾಂಟ್ ಕಾಶ್ಮೀರ. ಗೀವ್ ಅಸ್ ವಿರಾಟ್ ಕೊಹ್ಲಿ’ ಎಂದು ಬರೆಯಲಾಗಿದೆ. ವಾಸ್ತವವಾಗಿ ಹಸಿರು ಬಣ್ಣದ ಬ್ಯಾನರ್ ಮೇಲೆ ‘ವಿ ವಾಂಟ್ ಆಜಾದಿ’ ಎಂದು ಬರೆಯಲಾಗಿತ್ತು.