ಮುಂಬೈ(ಜ.14): ಭಾರತ ಮಹಿಳಾ ಕ್ರಿಕೆಟ್‌ನ ನೂತನ ಕೋಚ್‌ ಡಬ್ಲ್ಯೂವಿ ರಾಮನ್‌, ತಂಡದಲ್ಲಿ ಭಾರೀ ಬದಲಾವಣೆ ತರಲಿದ್ದಾರೆ ಎನ್ನುವ ನಿರೀಕ್ಷೆ ಇದೆ ಎಂದು ಏಕದಿನ ತಂಡದ ನಾಯಕಿ ಮಿಥಾಲಿ ರಾಜ್‌ ಹೇಳಿದ್ದಾರೆ. 

ಐಸಿಸಿ ಟಿ20 ವಿಶ್ವಕಪ್‌ನ ಸೆಮಿಫೈನಲ್‌ ಸೋಲಿನ ಬಳಿಕ ತಂಡದಲ್ಲಿ ಭುಗಿಲೆದ್ದ ಅಸಮಾಧಾನದ ಪರಿಣಾಮವಾಗಿ ರಮೇಶ್‌ ಪೊವಾರ್‌ ಕೋಚ್‌ ಹುದ್ದೆಯನ್ನು ಕಳೆದುಕೊಂಡ ಬಳಿಕ ಇತ್ತೀಚೆಗಷ್ಟೇ ರಾಮನ್‌ ಕೋಚ್‌ ಸ್ಥಾನ ಅಲಂಕರಿಸಿದ್ದರು. 

ಭಾರತ ತಂಡ ಸದ್ಯದಲ್ಲೇ ನ್ಯೂಜಿಲೆಂಡ್‌ ಪ್ರವಾಸ ಕೈಗೊಳ್ಳಲಿದ್ದು, ಇದೊಂದು ಹೊಸ ಆರಂಭ ಎಂದು ಮಿಥಾಲಿ ಹೇಳಿದ್ದಾರೆ. ‘ಹೊಸ ವರ್ಷದಲ್ಲಿ ನಾವು ಮೊದಲ ಸರಣಿಯನ್ನು ಆಡಲಿದ್ದೇವೆ. ವಿವಾದಗಳನ್ನು ಮರೆತು ನಾವು ಮುಂದಕ್ಕೆ ಸಾಗಬೇಕಿದೆ. ಕೋಚ್‌ ರಾಮನ್‌ ಮೇಲೆ ಹೆಚ್ಚಿನ ನಿರೀಕ್ಷೆ ಇದೆ’ ಎಂದು ಮಿಥಾಲಿ ಹೇಳಿದರು.