ಇಂಗ್ಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ 9 ರನ್'ಗಳ ಅಂತರದಲ್ಲಿ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿದೆ.
ಲಾರ್ಡ್ಸ್(ಜು.23): ಮಿಥಾಲಿ ರಾಜ್ ನೇತೃತ್ವದ ವನಿತೆಯರ ಟೀಂ ಇಂಡಿಯಾ ಚೊಚ್ಚಲ ವಿಶ್ವಕಪ್ ಎತ್ತಿ ಹಿಡಿಯುವ ಭಗ್ನವಾಗಿದೆ. ಇಂಗ್ಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ 9 ರನ್'ಗಳ ಅಂತರದಲ್ಲಿ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿದೆ.
ಆರಂಭಿಕ ಆಟಗಾರ್ತಿ ಪೂನಮ್ ರಾವತ್ ಅವರ ಏಕಾಂಗಿ ಹೋರಾಟದ ನಡುವೆಯೂ ಕೆಳ ಕ್ರಮಾಂಕದಲ್ಲಿ ದಿಢೀರ್ ಕುಸಿದಿದ್ದರ ಪರಿಣಾಮ ಮಿಥಾಲಿ ರಾಜ್ ನೇತೃತ್ವದ ಟೀಂ ಇಂಡಿಯಾ ಪ್ರಶಸ್ತಿ ಗೆಲ್ಲುವ ಸುವರ್ಣಾವಕಾಶವನ್ನು ಕೈಚೆಲ್ಲಿತು. ಕ್ರಿಕೆಟ್ ಕಾಶಿ ಎಂದೇ ಕರೆಸಿಕೊಳ್ಳುವ ಲಾರ್ಡ್ಸ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ 219ರನ್'ಗಳಿಗೆ ಸರ್ವಪತನ ಕಾಣುವ ಮೂಲಕ ವನಿತೆಯರ ತಂ 9 ರನ್'ಗಳ ರೋಚಕ ಸೋಲು ಕಂಡಿತು.
ಇಂಗ್ಲೆಂಡ್ ನೀಡಿದ್ದ 229 ರನ್'ಗಳ ಸವಾಲಿನ ಗುರಿ ಬೆನ್ನತ್ತಿದ ಭಾರತ ತಂಡಕ್ಕೆ ಮತ್ತೆ ಆರಂಭದಲ್ಲೇ ನಿರಾಸೆ ಎದುರಿಸಿತು. ಎರಡನೇ ಓವರ್'ನಲ್ಲೇ ಸ್ಮೃತಿ ಮಂದಾನ ಕ್ಲೀನ್ ಬೌಲ್ಡ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಇದಾದ ಕೆಲ ಹೊತ್ತಿನಲ್ಲೇ ನಾಯಕಿ ಮಿಥಾಲಿ ರಾಜ್ ಕೂಡಾ ರನೌಟ್ ಆಗಿ ಪೆವಿಲಿಯನ್ ಸೇರಿದರು. ಆದರೆ ಮೂರನೇ ವಿಕೆಟ್'ಗೆ ಜತೆಯಾದ ಪೂನಮ್ ರಾವತ್ ಹಾಗೂ ಹರ್ಮನ್'ಪ್ರೀತ್ ಕೌರ್ ತಂಡವನ್ನು ಸಂಕಷ್ಟದಿಂದ ಮೇಲೆತ್ತಿದರು. ಈ ಜೋಡಿ 95 ರನ್'ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆದಾರವಾದರು. ಅರ್ಧಶತಕ ಗಳಿಸಿದ ಬೆನ್ನಲ್ಲೇ ಕೌರ್ ವಿಕೆಟ್ ಒಪ್ಪಿಸಿದರು. ನಾಲ್ಕನೇ ವಿಕೆಟ್'ಗೆ ರಾವತ್ ಹಾಗೂ ಕನ್ನಡತಿ ವೇದಾ ಕೃಷ್ಣಮೂರ್ತಿ ಅರ್ಧಶತಕದ ಜತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನತ್ತ ಸಾಗಿಸುತ್ತಿರುವಾಗಲೇ 86 ರನ್ ಗಳಿಸಿದ್ದ ಪೂನಮ್ ರಾವತ್ ಎಲ್'ಬಿ ಬಲೆಗೆ ಬಿದ್ದು ಪೆವಿಲಿಯನ್ ಸೇರಿದರು. ರಾವತ್ ಔಟ್ ಆಗುವ ವೇಳೆಗೆ ಟೀಂ ಇಂಡಿಯಾದ ಮೊತ್ತ 191/4
ರಾವತ್ ವಿಕೆಟ್ ಒಪ್ಪಿಸುತ್ತಿದ್ದಂತೆ ನಾಟಕೀಯವಾಗಿ ಕುಸಿತ ಕಂಡ ವನಿತೆಯರ ತಂಡ 219 ರನ್'ಗಳಿಗೆ ಸರ್ವಪತನ ಕಂಡಿತು.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡ ನಥಾಲಿ ಸ್ಕೀವರ್ ಅವರ ಅರ್ಧಶತಕದ ನೆರವಿನಿಂದ 228 ರನ್ ಕಲೆಹಾಕಿತ್ತು.
ಸಂಕ್ಷಿಪ್ತ ಸ್ಕೋರ್:
ಇಂಗ್ಲೆಂಡ್ ವನಿತೆಯರ ತಂಡ: 228/7
ನಥಾಲಿ ಸ್ಕೀವರ್ : 51
ಶರಹ್ ಟೇಲರ್ : 45
ಜೂಲನ್ ಗೋಸ್ವಾಮಿ : 23/3
ಭಾರತ ವನಿತೆಯರ ತಂಡ : 219/10
ಪೂನಮ್ ರಾವತ್ : 86
ಹರ್ಮನ್'ಪ್ರೀತ್ ಕೌರ್ : 51
ಅನ್ಯಾ ಶರ್ಬೋಸೋಲೆ : 46/6
